
ಸಂಜೆವಾಣಿ ನ್ಯೂಸ್
ಮೈಸೂರು: ಮಾ.15:– ಹೋಟೆಲ್ ಉದ್ಯಮವನ್ನು ತುರ್ತು ಸೇವಾ ವಲಯ ಎಂದು ಪರಿಗಣಿಸಿ ಸರ್ಕಾರ ಶೇ.25ರಷ್ಟು ಕಮರ್ಷಿಯಲ್ ಸಿಲಿಂಡರ್ ಪೂರೈಕೆ ಮಾಡಬೇಕೆಂದು ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಒತ್ತಾಯಿಸಿದರು.
ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಹೋಟೆಲ್ ಮಾಲೀಕರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬಳಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಅಡುಗೆ ಅನಿಲ ಸರಬರಾಜು ಕಂಪನಿಗಳಲ್ಲಿ ಕಮರ್ಷಿಯಲ್ ಸಿಲಿಂಡರ್ಗೆ ರೀಫಿಲ್ಲಿಂಗ್ ಮಾಡುವ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಹೋಟೆಲ್ಗಳಿಗೆ ಪೂರೈಕೆಯಾಗುತ್ತಿದ್ದ ಕಮರ್ಷಿಯಲ್ ಸಿಲಿಂಡರ್ ಲಭ್ಯವಾಗದೆ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿಸಿದೆ. ಸಿಲಿಂಡರ್ ಸಮಸ್ಯೆ ಕೇವಲ ಮೈಸೂರಿಗೆ ಮಾತ್ರವಲ್ಲದೆ ಎಲ್ಲೆಡೆ ಉಂಟಾಗಿದೆ. ಒಂದು ವಾರ ಕಾಯುವಂತೆ ಆಹಾರ ಇಲಾಖೆ ಸಚಿವ ಕೆ.ಹೆಚ್.ಮುನಿಯಪ್ಪ ಸಲಹೆ ನೀಡಿದ್ದಾರೆ. ಆದರೆ, ಒಂದು ವಾರ ಕಾಯುತ್ತಾ ಕುಳಿತರೆ ವ್ಯವಸ್ಥೆ ಅಯೋಮಯವಾಗಲಿದ್ದು, ಪ್ರವಾಸಿಗರು ಮಾತವಲ್ಲದೆ, ಹೋಟೆಲ್ ಅನ್ನೇ ನಂಬಿಕೊಂಡಿರುವ ಜನ, ರೈತರಿಗೂ ತೀವ್ರತರನಾದ ತೊಂದರೆಯಾಗಲಿದೆ. ಇದು ಮತ್ತೊಮ್ಮೆ ಕೋವಿಡ್ ಸಂಕಷ್ಟವನ್ನು ಉದ್ಯಮಕ್ಕೆ ತಂದು ಕೊಟ್ಟಿದೆ ಎಂದು ಅಸಮಾದಾನ ವ್ಯಕ್ತಪಡಿಸಿದರು.
ಸಿಲಿಂಡರ್ ಸಮಸ್ಯೆ ಉದ್ಭವಿಸಿರುವ ಹಿನ್ನೆಲೆಯಲ್ಲಿ ಮೈಸೂರಿನ ಪ್ರವಾಸೋದ್ಯಮಕ್ಕೂ ಧಕ್ಕೆಯಾಗುತ್ತಿದೆ. ಪ್ರತಿದಿನ 50 ಸಾವಿರ ಪ್ರವಾಸಿಗರು, ವಾರಾಂತ್ಯದಲ್ಲಿ 1.5 ಲಕ್ಷ ಪ್ರವಾಸಿಗರು ಮೈಸೂರಿಗೆ ಬರುತ್ತಾರೆ. ಆದರೆ, ಸಿಲಿಂಡರ್ ಸಮಸ್ಯೆಯಿಂದಾಗಿ ಮೈಸೂರಿಗೆ ಬರುವ ಪ್ರವಾಸಿಗರ ಸಂಖ್ಯೆ ಶೇ.50 ಕುಸಿದಿದೆ. ಕಾಯ್ದಿರಿಸಿದ ಕೊಠಡಿಗಳನ್ನು ರದ್ದು ಮಾಡುತ್ತಿದ್ದಾರೆ. ಕೆಲವರು ಊಟ ಸಿಗುತ್ತದಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ವಾರದ ದಿನಗಳಲ್ಲಿ ದಿನವೊಂದಕ್ಕೆ 4ರಿಂದ 5 ಕೊಠಡಿಗಳಷ್ಟೇ ಬುಕ್ ಆಗುತ್ತಿದೆ. ವಾರಾಂತ್ಯದಲ್ಲಿ ಕಡಿಮೆ ಸಂಖ್ಯೆಯ ಪ್ರವಾಸಿಗರು ಮೈಸೂರಿಗೆ ಬರುತ್ತಿದ್ದಾರೆ. ಇದರಿಂದಾಗಿ ಪ್ರವಾಸೋದ್ಯಮಕ್ಕೆ ಚೈತನ್ಯ ತುಂಬುವುದಕ್ಕಾಗಿ ಕಮರ್ಷಿಯಲ್ ಸಿಲಿಂಡರ್ ಪೂರೈಕೆ ಹೆಚ್ಚಿಸಬೇಕು ಎಂದರು.
ಹೋಟೆಲ್ ಹಾಗೂ ಫಾಸ್ಟ್ಫುಡ್ಗಳಲ್ಲಿ ಗೃಹ ಬಳಕೆಯ ಸಿಲಿಂಡರ್ ಬಳಕೆಯನ್ನು ಹೋಟೆಲ್ ಮಾಲೀಕರ ಸಂಘ ಬೆಂಬಲಿಸುವುದಿಲ್ಲ. ಈಗಾಗಲೇ ಫಾಸ್ಟ್ಫುಡ್ಗಳಲ್ಲಿ ಗೃಹ ಬಳಕೆ ಸಿಲಿಂಡರ್ ಬಳಸುತ್ತಿರುವುದನ್ನು ಪತ್ತೆ ಮಾಡಿ ಕ್ರಮ ಕೈಗೊಂಡಿದ್ದಾರೆ. ಇದು ಸ್ವಾಗತಾರ್ಹ. ಮೈಸೂರು ಭಾಗದಲ್ಲಿ ಗ್ಯಾಸ್ ಉತ್ಪಾಧಿಸುವ ಆರು ಖಾಸಗಿ ಕಂಪನಿಗಳಿದ್ದು, ಸರ್ಕಾರದ ಅನುಮತಿ ಪಡೆದು ಕಚ್ಚಾವಸ್ತು ಬಳಸಿ ಅಡುಗೆ ಅನಿಲ ಉತ್ಪಾಧಿಸುತ್ತಿವೆ. ಈಗ ಈ ಕಂಪನಿಗಳು 1700 ರೂ. ಮೌಲ್ಯದ ಸಿಲಿಂಡರ್ ಅನ್ನು 3500 ಸಾವಿರ ರೂ.ಗೆ ಮಾರಾಟ ಮಾಡುತ್ತಿವೆ. ಸೇವಾ ಕ್ಷೇತ್ರವಾಗಿರುವ ಹೋಟೆಲ್ ಉದ್ಯಮ ಸರ್ಕಾರಕ್ಕೆ ದೊಡ್ಡಮಟ್ಟದಲ್ಲಿ ತೆರಿಗೆ ಕಟ್ಟುತ್ತಿದ್ದರೂ, ಅವರ ಹಿತ ಕಾಯಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಸರ್ಕಾರ ಸಿಲಿಂಡರ್ ಪೂರೈಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಆಸ್ಪತ್ರೆಯಂತೆ ಹೋಟೆಲ್ ಉದ್ಯಮವೂ ಮಹತ್ವದ್ದಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಹೋಟೆಲ್ ಉದ್ಯಮಿಗಳಾದ ಎ.ಆರ್.ರವೀಂದ್ರ ಭಟ್, ಅರುಣ್, ಸುಬ್ರಹ್ಮಣ್ಯ ತಂತ್ರಿ ಇದ್ದರು.






























