Home ಜಿಲ್ಲೆ ಮಹಿಳಾ ಮೀಸಲಾತಿ ವಿರೋಧಿಸಿದ ಕಾಂಗ್ರೆಸ್ ವಿರುದ್ದ ಜೆಡಿಎಸ್ ಪ್ರತಿಭಟನೆ

ಮಹಿಳಾ ಮೀಸಲಾತಿ ವಿರೋಧಿಸಿದ ಕಾಂಗ್ರೆಸ್ ವಿರುದ್ದ ಜೆಡಿಎಸ್ ಪ್ರತಿಭಟನೆ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಏ.21: ಕೇಂದ್ರ ಸರ್ಕಾರ ಸಂಸತ್ ಮತ್ತು ಶಾಸನ ಸಭೆಗಳಲ್ಲಿ ಜಾರಿಗೆ ತರಲು ಮುಂದಾದ ಶೇ 33 ರಷ್ಡು ಮಹಿಳಾ ಮೀಸಲಾತಿಯ ಮಸೂದೆ ವಿರೋಧಿಸಿದ ಕಾಂಗ್ರೆಸ್ ವಿರುದ್ಧ ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿ ನಗರದಲ್ಲಿ ಇಂದು ಪ್ರತಿಭಟನೆ ನಡೆಸಿತು.

ಪಕ್ಷದ ಜಿಲ್ಲಾ ಅಧ್ಯಕ್ಷ ಮೀನಳ್ಳಿ ತಾಯಣ್ಣ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು ಪಕ್ಷದ ಕಚೇರಿಯಿಂದ ಗಡಿಗಿ ಚೆನ್ನಪ್ಪ ಸರ್ಕಲ್ ಗೆ ಬಂದು ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು.

ಮಹಿಳೆಯರಿಗೆ ಶೇ. 33 ರಷ್ಟು ರಾಜಕೀಯ ಮೀಸಲಾತಿ ನೀಡುವ ಮಸೂದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸುವ ಮೂಲಕ ಕಾಂಗ್ರೆಸ್ ಮಹಿಳಾ ವಿರೋಧಿ ಧೋರಣೆ ತೋರಿದೆ ಎಂದು ಆರೋಪಿಸಿದರು.

ಈ ವೇಳೆ ಮಾತನಾಡಿದ ಜೆಡಿಎಸ್ ಮುಖಂಡರು, ಮಹಿಳೆಯರ ರಾಜಕೀಯ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಕಿಡಿಕಾರಿದರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಅವಧಿಯಲ್ಲೇ ಮಹಿಳಾ ಮೀಸಲಾತಿ ಜಾರಿಯ ಪ್ರಯತ್ನ ನಡೆದಿತ್ತು ಎಂದು ನೆನಪಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಹಿಳಾ ಘಟಕದ ಸದಸ್ಯರು, ತಕ್ಷಣ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್ ತನ್ನ ನಿಲುವು ಪರಿಷ್ಕರಿಸಿ ಮಹಿಳೆಯರ ಪರವಾಗಿ ನಿಲ್ಲಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜೆಡಿಎಸ್ ಮಹಿಳಾ ಘಟಕದ ಪದಾಧಿಕಾರಿಗಳು, ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.