
ಪುತ್ತೂರು: ಹರಕೆ ಕಾರ್ಯಕ್ರಮದ ಕೊನೆಯಲ್ಲಿ ಪ್ರಸಾದವನ್ನು ಬೇಗ ಬೇಗ ಕೊಡುವಂತೆ ಹೇಳಿದ ಕಾರಣಕ್ಕಾಗಿ ಯುವಕನೊಬ್ಬನ ಮೇಲೆ ನಾಲ್ವರು ಸೇರಿಕೊಂಡು ಕೈಯಿಂದ ಹೊಡೆದು, ಕಾಲಿನಿಂದ ತುಳಿದು ಹಲ್ಲೆ ನಡೆಸಿದ ಘಟನೆ ಪುತ್ತೂರು ತಾಲ್ಲೂಕಿನ ಒಳಮೊಗ್ರು ಗ್ರಾಮದ ಕಟ್ಟಿನೋಪಿನಡ್ಕ ಮೈದಾನಿಮೂಲೆ ಮಸೀದಿಯಲ್ಲಿ ಶನಿವಾರ ಸಂಜೆ ನಡೆದಿದೆ.
ಒಳಮೊಗ್ರು ಗ್ರಾಮದ ಮೈದಾನಿಮೂಲೆ ಸಮೀಪದ ಹಿಡಿಂಜಿಲ ನಿವಾಸಿ ಅಬೂಬಕ್ಕರ್ ಸಿದ್ದೀಕ್ (೩೪) ಹಲ್ಲೆಗೊಳಗಾದವರು. ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಸ್ಥಳೀಯರಾದ ಯು.ಕೆ.ನಾಸೀರ್, ಒಳಮೊಗ್ರು ಗ್ರಾಮದ ಶಾಂತಿಗೋಡು ಸಿದ್ದೀಕ್, ಶಾಂತಿಗೋಡು ನಾಸೀರ್ ಮತ್ತು ಸ್ಥಳೀಯರಾದ ಯು.ಕೆ.ಇರ್ಷಾದ್ ಎಂಬವರು ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.
ಮಸೀದಿಯಲ್ಲಿ ಶನಿವಾರ ಹರಕೆ ಕಾರ್ಯಕ್ರಮ ಮುಗಿದ ಬಳಿಕ ಕೊಡುವ ಪ್ರಸಾದವನ್ನು ನಾನು ಬೇಗ ಬೇಗ ಕೊಡುವಂತೆ ಹೇಳಿ ಅಲ್ಲಿಂದ ಹೊರಟಲು ಮುಂದಾದ ವೇಳೆ ಯು.ಕೆ.ನಾಸೀರ್, ಸಿದ್ದೀಕ್ ಮತ್ತು ಶಾಂತಿಗೋಡು ನಾಸೀರ್, ಇರ್ಷಾದ್ ಯು.ಕೆ ಎಂಬವರು ಸೇರಿಕೊಂಡು ಕೈಯಿಂದ ಹೊಡೆದು, ಕಾಲಿನಿಂದ ತುಳಿದು ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಹಲ್ಲೆಗೊಳಗಾಗಿರುವ ಅಬೂಬಕ್ಕರ್ ಸಿದ್ದೀಕ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹರಕೆ ಕಾರ್ಯಕ್ರಮದ ವೇಳೆ ಮಸೀದಿ ಆವರಣದಲ್ಲಿ ಸೇರಿದ್ದ ಮಂದಿಯ ಸಮ್ಮುಖದಲ್ಲೇ ನಡೆದ ಈ ಹಲ್ಲೆ ಘಟನೆಯ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.





























