
ಸಂಜೆವಾಣಿ ನ್ಯೂಸ್
ಮೈಸೂರು: ಜೂ.23:- ಕಳೆದ 45 ವರ್ಷಗಳಿಂದ ಭೋವಿ ಸಮುದಾಯದವರನ್ನು ಕಾಂಗ್ರೆಸ್ ಪಕ್ಷ ಎಂಎಲ್‍ಸಿ ಮಾಡಿಲ್ಲ. ಹೀಗಾಗಿ ಈ ಬಾರಿ ಈ ಸಮುದಾಯದ ಯಾರನ್ನಾದರೂ ಒಬ್ಬರನ್ನು ವಿಧಾನ ಪರಿಷತ್‍ಗೆ ನಾಮಕರಣ ಮಾಡಬೇಕೆಂದು ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹಾಗೂ ಕೆಪಿಸಿಸಿ ವಕ್ತಾರ ಜಿ.ವಿ.ಸೀತಾರಾಂ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷರಲ್ಲಿ ಮನವಿ ಮಾಡಿದರು.
ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಯಲ್ಲಿ ಈ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದೇವೆ. ಪಕ್ಷದ ಪರವಾಗಿ ಸಾಕಷ್ಟು ಕೆಲಸ ಮಾಡಿದ್ದು, ಕಳೆದ ಚುನಾವಣೆಯಲ್ಲಿ ಪಕ್ಷಕ್ಕೆ ಶೇ.80ರಷ್ಟು ಮಂದಿ ಮತ ಚಲಾಯಿಸಿದ ಅಂಕಿ ಅಂಶ ಇದೆ. ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರು ನಿಗಮಕ್ಕೆ ತಮ್ಮನ್ನು ಅಧ್ಯಕ್ಷರನ್ನಾಗಿಸಿದ್ದು, ಇವರು ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಈ ಸಮುದಾಯದ ಬಗ್ಗೆ ಒಲವಿದೆ. ಹೀಗಾಗಿ ಈ ಬಾರಿ ಸಮುದಾಯದ ಒಬ್ಬರನ್ನು ಎಂಎಲ್ಸಿ ಮಾಡಬೇಕೆಂದು ಕೋರುತ್ತಿರುವುದಾಗಿ ತಿಳಿಸಿದರು.
1980 ರಲ್ಲಿ ಪೀರಣ್ಣ ಅವರನ್ನು ಗುಂಡೂರಾವ್ ಅವರು ಎಂಎಲ್ಸಿ ಮಾಡಿದ್ದರು. ನಂತರ ಇದುವರೆಗೆ ಸಮುದಾಯದ ಯಾರೂ ಸಹಾ ಎಂಎಲ್ಸಿ ಆಗಿಲ್ಲ. ಪರಿಷತ್‍ನ 75 ಸ್ಥಾನಗಳಲ್ಲಿ 64 ಚುನಾಯಿತರು, 11 ನಾಮಕರಣದವಾಗಿರುತ್ತಾರೆ. ಈ 11 ಮಂದಿಯನ್ನು ರಾಜ್ಯಪಾಲರು ನಾಮ ನಿರ್ದೇಶನ ಮಾಡುತ್ತಾರೆ. ಹೀಗಾಗಿ ಪರಿಶಿಷ್ಟರ ಆಯ್ಕೆ ವೇಳೆ ಈ ಸಮುದಾಯಕ್ಕೆ ಆದ್ಯತೆ ನೀಡಬೇಕೆಂದರು.
ಕಾಂಗ್ರೆಸ್ ಪಕ್ಷದಿಂದ ಈಗ 33 ಮಂದಿ ಎಂಎಲ್‍ಸಿಗಳು ಇದ್ದಾರೆ. ಆದರೆ, ಇವರಲ್ಲಿ ಒಬ್ಬರೇ ಒಬ್ಬರು ಈ ಸಮುದಾಯದವರು ಇಲ್ಲ. 2013, 2023 ರ ಚುನಾವಣೆ ವೇಳೆ ಇವರು ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷದ ಪರವಾಗಿ ಕೆಲಸ ಮಾಡಿದ್ದಾರೆ. ಪಕ್ಷದ ಪರವಾಗಿ ನಿಂತಿದ್ದಾರೆ. ಆದರೂ ಒಂದೇ ಒಂದು ಸಂಸದ ಅಥವಾ ರಾಜ್ಯಸಭಾ ಸ್ಥಾನವೂ ದೊರೆತಿಲ್ಲ. ಆದ್ದರಿಂದ ಕನಿಷ್ಠ ಪಕ್ಷ ಈ ಬಾರಿ ಎಂಎಲ್ಸಿಯನ್ನಾದರೂ ಮಾಡಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಸಮುದಾಯದ ಮುಖಂಡರಾದ ಬಸವರಾಜು, ಪರಮೇಶ್, ರಾಮಸ್ವಾಮಿ ಹಾಜರಿದ್ದರು.