
ಸಂಜೆವಾಣಿ ನ್ಯೂಸ್
ಮೈಸೂರು: ಜ.31:- ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಮರುಸ್ಥಾಪನೆಗೆ ಒತ್ತಾಯಿಸಿ ಫೆ.1 ರಂದು ಸಂಜೆ 7 ಗಂಟೆಯಿಂದ ಫೆ.2ರಂದು ಬೆಳಗ್ಗೆ 7 ಗಂಟೆವರೆಗೆ ಪುರಭವನದ ಬಳಿ ಅಹೋರಾತ್ರಿ ಧರಣಿ ನಡೆಸಲು ಕಾಂಗ್ರೆಸ್ ತೀರ್ಮಾನಿಸಿದೆ ಎಂದು ಪಕ್ಷದ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪೆÇೀಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮನಮೋಹನ್‍ಸಿಂಗ್ ಅವರು ಪ್ರಧಾನಿಯಾಗಿದ್ದ ವೇಳೆ 2005ರಲ್ಲಿ ನರೇಗಾ ಯೋಜನೆ ಜಾರಿಗೊಳಿಸಿದರು. ಆದರೆ, ಈಗಿನ ಸರ್ಕಾರ ಯೋಜನೆಗೆ ತಿದ್ದುಪಡಿ ತಂದಿರುವುದು ಗ್ರಾಮೀಣರ ಉದ್ಯೋಗಕ್ಕೆ ದೊಡ್ಡ ಪೆಟ್ಟಾಗಿದೆ. 125 ದಿನಗಳ ಕೂಲಿ ನೀಡಲಾಗುತ್ತಿತ್ತು. ಉದ್ಯೋಗ ನೀಡುವ ಕುರಿತು ಗ್ರಾ.ಪಂಗಳು ನಿರ್ಧಾರ ಮಾಡುತ್ತಿದ್ದವು. ಆದರೆ ಈಗ ಉದ್ಯೋಗ ನೀಡುವುದನ್ನು ಕೇಂದ್ರ ಸರ್ಕಾರವೇ ತೀರ್ಮಾನಿಸುತ್ತದೆ ಎಂದರು.
ಅಲ್ಲದೆ, ಈ ಯೋಜನೆಗೆ ಮಹಾತ್ಮ ಗಾಂಧೀಜಿ ಅವರ ಹೆಸರು ಕೈ ಬಿಟ್ಟಿರುವುದು ಖಂಡನೀಯ. ರಾಜ್ಯದಲ್ಲಿ ಒಟ್ಟು 6 ಸಾವಿರ ಗ್ರಾಪಂಗಳಿವೆ. ಒಂದೊಂದು ಗ್ರಾಪಂನಲ್ಲಿ ಸಾಮಾನ್ಯವಾಗಿ 1 ರಿಂದ 4 ಕೋಟಿ ರೂ. ಮೊತ್ತದ ಕಾಮಗಾರಿ ನಡೆಯುತ್ತದೆ. ಒಂದೊಂದು ಕೋಟಿ ಎಂದರೂ 6 ಸಾವಿರ ಕೋಟಿ ಬರುತ್ತಿತ್ತು. ಈ ಯೋಜನೆಗೆ ತಿದ್ದುಪಡಿ ತಂದಿರುವುದರಿಂದ ಮುಂದೆ ಅದು ಬರುವುದಿಲ್ಲ ಎಂದು ಆರೋಪಿಸಿದರು.
ಈಗ ಉದ್ಯೋಗ ಕೇಳಿದವರಿಗೆ ಅರ್ಜಿ ಕೊಡಿ ಎನ್ನುತ್ತಾರೆ. ಉದ್ಯೋಗ ಕೊಡುವುದು, ಬಿಡುವುದು ಕೇಂದ್ರ ಸರ್ಕಾರ ತೀರ್ಮಾನಿಸುತ್ತದೆ. ಗ್ರಾಮೀಣ ಪ್ರದೇಶದ ರೈತರಿಗೆ, ಬಡವರಿಗೆ, ಮಹಿಳೆಯರಿಗೆ ಇದ್ದ ಯೋಜನೆಗೆ ತಿದ್ದುಪಡಿ ತಂದು ಅವರ ಬದುಕಿನ ಮೇಲೆ ಚಪ್ಪಡಿ ಕಲ್ಲು ಎಳೆದಂತೆ ಆಗಿದೆ ಎಂದು ಆರೋಪಿಸಿದರು.
ಈ ಯೋಜನೆಗೆ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಬಾರಿ ವಿರೋಧ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ನಾವು ಹೋರಾಟ ನಡೆಸುತ್ತಿದ್ದೇವೆ. ಗಾಂಧಿ ಹೆಸರನ್ನು ತೆಗೆದು ಹಾಕಿರುವ ಕೇಂದ್ರ ಸರ್ಕಾರ ಈ ಯೋಜನೆಯನ್ನು ಗೋಪಾಲ್‍ರಾವ್ ನಾರಾಯಣ ರಾವ್‍ಗೋಡ್ಸೆ ಕಾಯ್ದೆಯಂತೆ ರೂಪಿಸಿದೆ. ಗ್ರಾ.ಪಂಗಳ ಸ್ವಾಯತ್ತತೆ ಕಿತ್ತುಕೊಂಡಿದ್ದಾರೆ ಎಂದು ಅವರು ದೂರಿದರು.
ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿ ಎಂದರೆ ಪಕೋಡ ಮಾರಿ ಎನ್ನುತ್ತಾರೆ. ನಿರಂತರವಾಗಿ ಒಂದು ವರ್ಷ ರೈತರು ಹೋರಾಟ ಮಾಡಿ, ಅನೇಕರು ಮೃತಪಟ್ಟ ಮೇಲೆ ಕಾಯ್ದೆ ಹಿಂತೆಗೆದುಕೊಂಡಿದ್ದಾಗಿ ಕಿರಿ ಕಾರಿದರು.
ಮೈಸೂರಿನಲ್ಲಿ ಸಂಸದರಾಗಿ ಆಯ್ಕೆಯಾಗಿರುವವರ ಕೊಡುಗೆ ಏನು? ಅವರು ಸಂಸದರಾಗಿ ಆಯ್ಕೆಯಾಗುವ ಮುನ್ನ ಏನು ಕೆಲಸ ಮಾಡಿದ್ದಾರೆ. ಕೇಂದ್ರ ಸರ್ಕಾರ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡಿದೆ. ಆದ್ದರಿಂದ ಬ್ಯಾಲೆಟ್‍ಪೇಪರ್‍ನಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುತ್ತಿರುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್‍ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಮುಖಂಡರಾದ ನಾಗೇಶ್, ರಮೇಶ್, ಶಿವಣ್ಣ, ರವಿಪ್ರಕಾಶ್ ಇದ್ದರು.



























