
ಏ.3ಕ್ಕೆ ಪ್ರೇಮಕಥೆ ಬಿಡುಗಡೆ
ಹಳೆಯ ಕಾಲದ ಪ್ರೀತಿಯ ಮತ್ತು ಇಂದಿನ ಭಾವನೆಗಳ ಸಂಘರ್ಷವನ್ನು ಒಟ್ಟುಗೂಡಿಸಿರುವ “ಪ್ರೇಮಿ” ಸಿನಿಮಾ ಈಗಾಗಲೇ ತನ್ನ ಟ್ರೇಲರ್ ಮೂಲಕ ಸಿನಿಪ್ರೇಕ್ಷಕರ ಗಮನ ಸೆಳೆದಿದೆ. ಎ2 ಮ್ಯೂಸಿಕ್ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆಯಾದ ಟ್ರೇಲರ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಏಪ್ರಿಲ್ 3ರಂದು ಚಿತ್ರಮಂದಿರಗಳಲ್ಲಿ ಪ್ರೇಮಕಥೆಯ ಜಾತ್ರೆ ಆರಂಭವಾಗಲಿದೆ.
ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ನಿರ್ಮಾಪಕ ಭಾ.ಮ.ಹರೀಶ್, ನಿರ್ದೇಶಕ ಸತ್ಯ, ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಹಾಗೂ ನೃತ್ಯ ನಿರ್ದೇಶಕ ಟಗರು ರಾಜು ಮಾಸ್ಟರ್ ಟ್ರೇಲರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕ ಪ್ರದೀಪ್ ವರ್ಮ ಮಾತನಾಡಿ, “ಈ ಚಿತ್ರಕ್ಕೆ ಮೊದಲು ಸಂಗೀತ ನಿರ್ದೇಶಕನಾಗಿ ಸೇರಿದ್ದೆ. ನಂತರ ನಿರ್ದೇಶನದ ಹೊಣೆ ಹೊತ್ತೆ. ನಾಯಕ ಅದ್ವಿಕ್ ಅವರ ತಾಯಿ ಅಕ್ಕಮಹಾದೇವಿ ಕಥೆ ಬರೆದಿದ್ದಾರೆ. ನಾನು ಚಿತ್ರಕಥೆ ರೂಪಿಸಿದ್ದೇನೆ. 90ರ ದಶಕದ ಪ್ರೀತಿಯ ವಿಶೇಷತೆಯನ್ನು ಇಂದಿನ ಪ್ರೀತಿಯೊಂದಿಗೆ ಹೋಲಿಸುವ ಕಥೆ ಇದಾಗಿದೆ,” ಎಂದರು.
ನಾಯಕ ಅದ್ವಿಕ್ ಹೇಳಿದ್ದು, “ಇದು ನನ್ನ ಮೊದಲ ನಾಯಕತ್ವದ ಚಿತ್ರ. ಸಂಪೂರ್ಣ ತಯಾರಿ ಮಾಡಿಕೊಂಡು ಈ ಪಾತ್ರಕ್ಕೆ ಜೀವ ತುಂಬಿದ್ದೇನೆ. ನನ್ನ ತಾಯಿ ಕಥೆ ಬರೆದು, ತಂದೆ ನಿರ್ಮಾಣ ಮಾಡಿರುವುದು ವಿಶೇಷ. ನಿರ್ದೇಶಕ ಪ್ರದೀಪ್ ವರ್ಮ ಪ್ರೇಮಕಥೆಯನ್ನು ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ. ಪ್ರೇಕ್ಷಕರು ಚಿತ್ರಮಂದಿರಗಳಲ್ಲಿ ನೋಡಿ ನಮ್ಮನ್ನು ಬೆಂಬಲಿಸಬೇಕು,” ಎಂದರು.
ಚಿತ್ರದಲ್ಲಿ ಸಾತ್ವಿಕ ಹಾಗೂ ಶೋಭಿತ ನಾಯಕಿಯರಾಗಿ ನಟಿಸಿದ್ದಾರೆ. ಕಾರ್ಯಕಾರಿ ನಿರ್ಮಾಪಕ ವೀರೇಶ್ ಎರೆಕುಪ್ಪಿ, ಲೈನ್ ಪ್ರೊಡ್ಯೂಸರ್ ಹರೀಶ್ ಉಕ್ಕಡಗಾತ್ರಿ ಚಿತ್ರಕ್ಕೆ ಬೆಂಬಲ ನೀಡಿದ್ದಾರೆ.
ನಿರ್ಮಾಪಕ ಸಿದ್ದಲಿಂಗಯ್ಯ, ದ್ವಿತೀಯ ನಾಯಕಿ ಶೋಭಿತ, ಕಲಾವಿದರಾದ ದ್ವಿತ ಕೆ ಗೌಡ, ಸಂತೃಪ್ತಿ, ಹರ್ಷಿತಾ, ನೃತ್ಯ ನಿರ್ದೇಶಕ ರಾಜು ಮಾಸ್ಟರ್ ಹಾಗೂ ವಿತರಕ ಬಸಪ್ಪ ಸೇರಿದಂತೆ ಹಲವರು ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.


























