
ಕಲಬುರಗಿ,ಮಾ.22: ಶ್ರೀಮದ್ ಕಣ್ವ ಮಠದ ಸಂಸ್ಥಾಪಕರಾದ ಮಾಧವತೀರ್ಥರ 216ನೇ ಆರಾಧನಾ ಮಹೋತ್ಸವವು ಚೈತ್ರ ಶುಕ್ಲ ಚತುರ್ಥಿ, ಭಾನುವಾರದಂದು ನಗರದ ಸಂಗಮೇಶ್ವರ ಬಡಾವಣೆಯ ಸೂರ್ಯನಾರಾಯಣ ದೇವಸ್ಥಾನದ ಶ್ರೀಯಾಜ್ಞವಲ್ಕ್ಯ ಭವನದಲ್ಲಿ ಭಕ್ತಿಭಾವಪೂರ್ಣವಾಗಿ ನೆರವೇರಿತು.
ಈ ಸಂದರ್ಭದಲ್ಲಿ ಶ್ರೀಯೋಗೀಶ್ವರ ಯಾಜ್ಞವಲ್ಕ್ಯ ಸೇವಾ ಸಮಿತಿಯ ಖಜಾಂಚಿ ಅಶೋಕ ಮಳ್ಳಿ ಅವರು ಮಾತನಾಡಿ, ಮಾಧವ ತೀರ್ಥರು ಶೇಷಾಂಶ ಸಂಭೂತರು. ವಿಷ್ಣು ಸರ್ವೋತ್ತಮ ತತ್ವಜ್ಞಾನದಲ್ಲಿ ನಿಪುಣರಾಗಿದ್ದ ಅವರು ಉಪಾಸ್ಯ ಮೂರ್ತಿಯಾದ ಶ್ರೀವಿಠ್ಠಲ ಕೃಷ್ಣನಲ್ಲಿ ಅನನ್ಯ ಭಕ್ತಿ ಹೊಂದಿದ್ದರು. ಧರ್ಮನಿಷ್ಠರು, ಸರ್ವವಿದ್ಯಾ ಪ್ರವೀಣರು ಆಗಿದ್ದ ಯತಿವರ್ಯರು ಶಿಷ್ಯಕೋಟಿಗಾಗಿ ಶ್ರೀಮದ್ ಕಣ್ವ ಮಠವನ್ನು ಸ್ಥಾಪಿಸಿ ಮಹತ್ತರ ಸೇವೆ ಸಲ್ಲಿಸಿದರು ಎಂದು ಹೇಳಿದರು.
ಸಮಿತಿಯ ಹಿರಿಯ ಸದಸ್ಯರಾದ ವೆಂಕಟೇಶ ಕುಲಕರ್ಣಿ ಅವರು ಮಾತನಾಡಿ, ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಶ್ರೀಕ್ಷೇತ್ರ ಬುದ್ಧಿನ್ನಿ ಗ್ರಾಮದಲ್ಲಿರುವ ಮಾಧವ ತೀರ್ಥರ ವೃಂದಾವನಕ್ಕೆ ಕಲಬುರಗಿಯ ಶ್ರೀಯೋಗೀಶ್ವರ ಯಾಜ್ಞವಲ್ಕ್ಯ ಸಮಿತಿಯ ವತಿಯಿಂದ ಭಕ್ತರೊಂದಿಗೆ ಯಾತ್ರೆ ಆಯೋಜಿಸಲಾಗಿದ್ದು, ದರ್ಶನ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಈಕಾರ್ಯಕ್ರಮದಲ್ಲಿ ವಾಸುದೇವರಾವ್ ಕುಳಗೇರಿ, ವೆಂಕಟೇಶ ಕುಲಕರ್ಣಿ, ಸತ್ಯನಾರಾಯಣ ಕುಲಕರ್ಣಿ, ಶಂಕರರಾವ ಕುಲಕರ್ಣಿ, ವಿನುತ ಜೋಶಿ, ಶ್ರೀನಿವಾಸರಾವ ಕುಲಕರ್ಣಿ ಸೇರಿದಂತೆ ಪಾರಾಯಣ ಸಂಘದ ಸದಸ್ಯರು ಹಾಗೂ ಅನೇಕ ಭಕ್ತರು ಭಾಗವಹಿಸಿದ್ದರು.




























