
ಔರಾದ್ :ಅ.೧೯: ಕನ್ನಡ ರಾಜ್ಯೋತ್ಸವ ನಿಮಿತ್ತ ವಾರದಾದ್ಯಂತ ಕನ್ನಡ ಕಾರ್ಯಕ್ರಮಗಳು ಹಮ್ಮಿಕೊಳ್ಳುವ ಮೂಲಕ ವಿಶಿಷ್ಟ ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ತಾಲೂಕು ಆಡಳಿತ ಮುಂದಾಗಿದೆ.
ಶನಿವಾರ ಇಲ್ಲಿಯ ತಹಸೀಲ್ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಮಹೇಶ ಪಾಟೀಲ್ ಮಾತನಾಡಿ, ಗಡಿ ಭಾಗದಲ್ಲಿ ಕನ್ನಡ ರಾಜ್ಯೋತ್ಸವ ತುಂಬ ವಿಶೇಷವಾಗಿ ಆಚರಿಸಲು ಎಲ್ಲರು ಸಹಕರಿಸಬೇಕು.
ಅಕ್ಟೋಬರ್ ೨೭ ರಿಂದ ೩೧ರ ವರೆಗೆ ತಾಲೂಕಿನ ವಿವಿಧ ಶಾಲಾ ಕಾಲೇಜುಗಳಲ್ಲಿ ತಾಲೂಕು ಆಡಳಿತ ವತಿಯಿಂದ ಕನ್ನಡ ಕಾರ್ಯಕ್ರಮಗಳು ಹಮ್ಮಿಕೊಂಡು ಎಲ್ಲೆಡೆ ಕನ್ನಡ ಕಂಪು ಪಸರಿಸಲು ನಿರ್ಧರಿಸಲಾಗಿದೆ. ಬಳಿಕ ನವೆಂಬರ್ ೧ ರಂದು ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುವುದು. ಅಲ್ಲದೇ ಪ್ರೌಢಶಾಲಾ ಹಾಗೂ ಕಾಲೇಜು ಹಂತದ ಮಕ್ಕಳಿಗೆ ಪ್ರಬಂಧ ಹಾಗೂ ಭಾಷಣ ಸ್ಪರ್ಧೆ ಆಯೋಜಿಸಲಾಗುವುದು.
ಕಾರ್ಯಕ್ರಮ ತಾಲೂಕು ಕ್ರೀಡಾಂಗಣದಲ್ಲಿಯೇ ಆಚರಿಸಲು ತಿರ್ಮಾನಿಸಲಾಗಿ, ಬಸವೇಶ್ವರ ವೃತ್ತದಿಂದ ಮೆರವಣಿಗೆ ಚಾಲನೆ ನೀಡಿ, ಬಸ್ ನಿಲ್ದಾಣ, ಕನ್ನಡ ಭವನ, ತಾಲೂಕು ಪಂಚಾಯತಿ, ಮಾರ್ಗವಾಗಿ ಕನ್ನಡಾಂಬೆ ವೃತ್ತಕ್ಕೆ ತೆರಳಿ ಅಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸುವ ಧ್ವಜಾರೋಹಣ ನೆರವೇರಿಸಿ ಅಲ್ಲಿಂದ ಕ್ರೀಡಾಂಗಣಕ್ಕೆ ತೆರಳಿ ಅದ್ದೂರಿಯಾಗಿ ಸಮಾರಂಭ ನಡೆಸಲಾಗುವುದು.
ಈ ಹಿಂದಿನAತೆ ವಿವಿಧ ಕ್ಷೇತ್ರದ ಐವರು ಸಾಧಕರನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಬಳಿಕ ಉಪನ್ಯಾಸ, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು ಎಂದರು.
ಈ ಸಂದರ್ಭದಲ್ಲಿ ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಕಸಾಪ ಅಧ್ಯಕ್ಷ ಬಿ.ಎಂ ಅಮರವಾಡಿ, ಮಾಣಿಕ ನೇಳಗಿ, ರವಿ ಕಾರಬಾರಿ, ಗುರುನಾಥ ದೇಶಮುಖ, ಜಗನ್ನಾಥ ಮೂಲಗೆ, ವಿರೇಶ ಅಲಮಾಜೆ, ಅಮರಸ್ವಾಮಿ ಸ್ಥಾವರಮಠ , ಓಂಪ್ರಕಾಶ ದಡ್ಡೆ, ಶಿವಶಂಕರ ನಿಷ್ಪತೆ, ಅನೀಲ ದೇವಕತೆ, ಬಾಲಾಜಿ ದಾಮಾ, ನಾಗನಾಥ ಸಾಡಂಗಲೆ ಸೇರಿದಂತೆ ವಿವಿಧ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ತಾಲೂಕು ಅಧಿಕಾರಿಗಳು ಉಪಸ್ಥಿತರಿದ್ದರು.