
ನವದೆಹಲಿ, ಏ. ೮- ದೇಶಾದ್ಯಂತ ಕುತೂಹಲ ಮೂಡಿಸಿರುವ ಪಂಚರಾಜ್ಯ ವಿಧಾನಸಭಾ ಕ್ಷೇತ್ರಗಳ ಚುನಾವಣೆಗಳ ಪೈಕಿ ನಾಳೆ ಕೇರಳಂ, ಅಸ್ಸಾಂ, ಪುದುಚೆರಿ ವಿಧಾನಸಭಾ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಮತದಾನ ಒಂದೇ ಹಂತದಲ್ಲಿ ನಡೆಯಲಿದೆ.
ಈ ಮೂರು ರಾಜ್ಯಗಳ ಚುನಾವಣಾ ಬಹಿರಂಗ ಪ್ರಚಾರಕ್ಕೆ ನಿನ್ನೆ ಸಂಜೆ ತೆರೆ ಬಿದ್ದಿದ್ದು, ನಾಳೆ ಮತದಾನ ನಡೆಯಲಿದೆ.
ಈ ಮೂರು ರಾಜ್ಯಗಳಲ್ಲಿ ಸುಗಮ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಚುನಾವಣಾ ಆಯೋಗ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದು, ಚುನಾವಣೆಯಲ್ಲಿ ಯಾವುದೇ ಅಕ್ರಮಗಳು, ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಿ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ.
ಕೇರಳಂನ ವಿಧಾನಸಭೆಯ ಒಟ್ಟು ೧೪೦ ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯಲಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಆಡಳಿತ ರೂಢ ಲೆಫ್ಟ್ ಡೆಮಾಕ್ರೆಟಿಕ್ ಫ್ರೆಂಟ್ (ಎಲ್ಡಿಎಫ್) ಹ್ಯಾಟ್ರಿಕ್ ವಿಜಯ ಸಾಧಿಸಿ ಮತ್ತೆ ಅಧಿಕಾರ ಹಿಡಿಯಲು ಶತ ಪ್ರಯತ್ನ ನಡೆಸಿದ್ದು, ಎಲ್ಡಿಎಫ್ಗೆ ಸೆಡ್ಡು ಹೊಡೆದಿರುವ ಕಾಂಗ್ರೆಸ್ ನೇತೃತ್ವದಲ್ಲಿ ಯುನೈಟೆಡ್ ಡೆಮಾಕ್ರೆಟಿಕ್ ಫ್ರೆಂಟ್ (ಯುಡಿಎಫ್) ಮತ್ತು ಬಿಜೆಪಿ ನೇತೃತ್ವದ ಎನ್ಡಿಎಗಳು ಗೆಲುವಿಗಾಗಿ ಪೈಪೋಟಿ ನಡೆಸಿದ್ದು, ಕೇರಳದಲ್ಲಿ ತ್ರಿಕೋನ ಸ್ಪರ್ಧೆ ಇದೆ.
ಕೇರಳದಲ್ಲಿ ಒಟ್ಟು ೨.೭೧ ಕೋಟಿ ಮತದಾರರಿದ್ದು, ೨೫ ಸಾವಿರಕ್ಕೂ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಅಸ್ಸಾಂನಲ್ಲೂ ಚುನಾವಣೆ ಗೆದ್ದು ಅಧಿಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ನೇತೃತ್ವದ ಬಿಜೆಪಿ ಹರಸಾಹಸ ನಡೆಸಿದ್ದು, ಇಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಬಿಜೆಪಿಯನ್ನು ಮಣಿಸಿ ಮತ್ತೆ ಅಧಿಕಾರ ಹಿಡಿಯುವ ತವಕದಲ್ಲಿದೆ.
ಅಸ್ಸಾಂನಲ್ಲಿ ಒಟ್ಟು ೧೨೬ ವಿಧಾನಸಭಾ ಕ್ಷೇತ್ರಗಳಿದ್ದು, ಕಳೆದ ಚುನಾವಣೆಯಲ್ಲಿ ಬಿಜೆಪಿ ೭೫ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದು, ಮತ್ತೆ ಅಧಿಕಾರ ಹಿಡಿಯಲು ಎಲ್ಲಾ ರೀತಿಯ ತಂತ್ರಗಳನ್ನು ಹೆಣೆದಿದೆ.
ಅಸ್ಸಾಂನಲ್ಲಿ ಸುಮಾರು ೨.೪ ಕೋಟಿ ಮತದಾರರಿದ್ದಾರೆ. ಇಲ್ಲಿ ಸುಗಮ ಹಾಗೂ ನ್ಯಾಯ ಸಮ್ಮತ ಮತದಾನಕ್ಕೆ ಆಯೋಗ ಅಗತ್ಯ ಕ್ರಮ ಕೈಗೊಂಡಿದೆ.
ಪುದುಚೆರಿಯ ೩೦ ವಿಧಾನಸಭಾ ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯಲಿದ್ದು, ಆಡಳಿತರೂಢ ಕಾಂಗ್ರೆಸ್ ಆರ್. ನೇತೃತ್ವದಲ್ಲಿ ಬಿಜೆಪಿ ಎನ್ಡಿಎ ಮೈತ್ರಿಕೂಟಕ್ಕೆ ಕಾಂಗ್ರೆಸ್ ಡಿಎಂಕೆ ಮೈತ್ರಿಕೂಟ ಪ್ರಬಲ ಸವಾಲುವೊಡ್ದಿದೆ.
ಪುದುಚೆರಿಯಲ್ಲಿ ಒಟ್ಟು ೯.೪೪ ಲಕ್ಷ ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದಾರೆ.
ತಮಿಳುನಾಡು ರಾಜ್ಯದ ವಿಧಾನಸಭೆಗೆ ಏಪ್ರಿಲ್ ೨೩ ರಂದು, ಪಶ್ಚಿಮಬಂಗಾಳದ ವಿಧಾನಸಭೆಗೆ ಏ. ೨೯ ರಂದು ಚುನಾವಣೆ ನಡೆಯಲಿದ್ದು, ಈ ಪಂಚರಾಜ್ಯಗಳ ಚುನಾವಣಾ ಮತ ಎಣಿಕೆ ಮೇ ೪ ರಂದು ನಡೆಯಲಿದೆ.























