
ಕಲಬುರಗಿ,ಡಿ.೧೩- ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದ್ದ ಮತಗಳ್ಳತನ ಪ್ರಕರಣದ ಸಂಬಂಧ ಸಿಐಡಿ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿರುವ ವಿಚಾರ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಚಾರ್ಜ್‌ಶೀಟ್‌ನಲ್ಲಿ ಬಿಜೆಪಿಯ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಹಾಗೂ ಅವರ ಪುತ್ರ ಹರ್ಷಾನಂದ್ ಗುತ್ತೆದಾರ್ ಸೇರಿ ಒಟ್ಟು ಏಳು ಮಂದಿಯ ಹೆಸರು ಉಲ್ಲೇಖಿಸಲಾಗಿದೆ.
ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಎಸ್‌ಐಟಿ ತಂಡ ಬೆಂಗಳೂರು ನಗರದ ಎಸಿಎಂಎಂ ನ್ಯಾಯಾಲಯಕ್ಕೆ ನಿನ್ನೆ ಚಾರ್ಜ್‌ಶೀಟ್ ಸಲ್ಲಿಸಿದೆ. ಬಿಜೆಪಿಯ ಮಾಜಿ ಶಾಸಕ ಸುಭಾಷ್ ಗುತ್ತೇದಾರ್, ಅವರ ಪುತ್ರ ಹರ್ಷಾನಂದ ಸೇರಿದಂತೆ ಒಟ್ಟು ೭ ಜನರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ೨೦೨೩ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಡೆದಿದೆ ಎನ್ನಲಾಗಿದ್ದ ಮತಗಳ್ಳತನ ಪ್ರಕರಣದಲ್ಲಿ ಸುಭಾಷ್ ಗುತ್ತೇದಾರ್ ಪಾತ್ರವಿದೆ ಎಂಬುದು ತನಿಖೆಯಿಂದ ದೃಢಪಟ್ಟಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ರಾಜ್ಯ ಸರ್ಕಾರದ ಆದೇಶದಂತೆ ಸಿಐಡಿ ಎಡಿಜಿಪಿ ಬಿಕೆ ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿತ್ತು. ತನಿಖೆ ಪೂರ್ಣಗೊಳಿಸಿದ ಬಳಿಕ ಸುಮಾರು ೨೨ ಸಾವಿರ ಪುಟಗಳ ಚಾರ್ಜ್‌ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
೨೦೨೩ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಆಳಂದ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂದು ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಆರೋಪಿಸಿದ್ದರು. ನಂತರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ವಿಷಯವನ್ನು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೂಡ ಪ್ರಸ್ತಾಪಿಸಿ ಆರೋಪ ಮಾಡಿದ್ದರು.
ತನಿಖೆಯ ವೇಳೆ ಆಳಂದ ಕ್ಷೇತ್ರದಲ್ಲಿ ೫,೯೯೪ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಅಳಿಸಲಾಗಿದೆ ಎಂಬುದು ಪತ್ತೆಯಾಗಿತ್ತು. ಮತದಾರರ ಹೆಸರು ಅಳಿಸಲು ಸೈಬರ್ ಸೆಂಟರ್ ಬಳಸಿಕೊಂಡು ಹಣ ಪಾವತಿ ಮಾಡಲಾಗಿದೆ ಎಂಬ ಆರೋಪ ತನಿಖೆಯಲ್ಲಿ ಹೊರಬಿದ್ದಿತ್ತು.
೮೦ ರೂ. ಪಾವತಿ:
ಪ್ರಕರಣದಲ್ಲಿ, ಪ್ರತಿ ಮತದಾರರ ಹೆಸರು ಅಳಿಸಲು ೮೦ ರೂ. ಹಣ ಪಾವತಿಸಲಾಗಿದೆ ಎಂಬ ಆರೋಪವಿದ್ದು, ೨೦೨೨ರ ಡಿಸೆಂಬರ್‌ನಿಂದ ೨೦೨೩ರ ಫೆಬ್ರವರಿವರೆಗೆ ೬,೦೧೮ ಮತಗಳ ರದ್ದತಿಗೆ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಲಾಗಿತ್ತು ಎಂಬ ಆರೋಪವೂ ಇದೆ. ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಮತಗಳ್ಳತನ ಮಾಡಲು ಹಣ ಪಾವತಿ ಮಾಡಿಸಿದ್ದರು ಎಂಬ ಆರೋಪವನ್ನೂ ಚಾರ್ಜ್‌ಶೀಟ್‌ನಲ್ಲಿ ಹೊರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಮ್ಮ ಪಾತ್ರವಿಲ್ಲ:ಹರ್ಷಾನಂದ್ ಸ್ಪಷ್ಟನೆ
ಚಾರ್ಜ್‌ಶೀಟ್‌ನಲ್ಲಿ ಏನೆಲ್ಲಾ ಅಂಶಗಳಿವೆ ಎಂಬ ಬಗ್ಗೆ ನಮಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ನೋಟಿಸ್ ನೀಡಿ ನಮ್ಮ ಹೇಳಿಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ನಮ್ಮ ಯಾವುದೇ ಪಾತ್ರವಿಲ್ಲ ಎಂಬುದನ್ನು ನಾವು ಸ್ಪಷ್ಟವಾಗಿ ಹೇಳಿದ್ದೇವೆ” ಎಂದು ಸುಭಾಷ್ ಗುತ್ತೇದಾರ್ ಪುತ್ರ ಹರ್ಷಾನಂದ್ ಗುತ್ತೆದಾರ್ ಹೇಳಿದ್ದಾರೆ
ಸರ್ಕಾರ ತಮ್ಮದೇ ಇದ್ದ ಕಾರಣ ಅಧಿಕಾರಿಗಳನ್ನು ಬಳಸಿಕೊಂಡು ನನ್ನ ತಂದೆ ಹಾಗೂ ನನ್ನ ಹೆಸರನ್ನು ಚಾರ್ಜ್‌ಶೀಟ್‌ನಲ್ಲಿ ಸೇರಿಸಲಾಗಿದೆ ಎಂದು ಹರ್ಷಾನಂದ್ ಗುತ್ತೆದಾರ್ ಆರೋಪಿಸಿದ್ದಾರೆ.
ಇದು ಬಿಜೆಪಿ ವಿರುದ್ಧ ‘ವೋಟ್ ಚೋರಿ’ ಎಂಬ ಕಥೆಕಟ್ಟಲು ಕಾಂಗ್ರೆಸ್ ಮಾಡುತ್ತಿರುವ ರಾಜಕೀಯ ತಂತ್ರ. ಜನ ಕಾಂಗ್ರೆಸ್‌ನ್ನು ತಿರಸ್ಕರಿಸಿದ್ದಾರೆ. ಅದಕ್ಕಾಗಿಯೇ ಈಗ ವೋಟ್ ಚೋರಿ ಎನ್ನುವ ಆರೋಪಗಳನ್ನು ಮುಂದಿಟ್ಟು ದೇಶದ ಗಮನ ಸೆಳೆಯಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಆರೋಪ ರಾಜಕೀಯ ಪ್ರೇರಿತ: ಸುಭಾಷ್
೨೦೨೩ರಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣೆ ವೇಳೆ ವ್ಯಾಪಕ ಮತಗಳ್ಳತನಕ್ಕೆ ಪೂರಕವಾಗಿ ಮತ ಪತ್ರಗಳನ್ನು ತಿದ್ದಿದ ಆರೋಪದ ಮೇಲೆ ಆರೋಪ ಪಟ್ಟಿಯಲ್ಲಿ ತಮ್ಮ ಹಾಗೂ ಪುತ್ರ ಹರ್ಷಾನಂದ ಗುತ್ತೇದಾರ್ ಹೆಸರು ಸೇರ್ಪಡೆ ಮಾಡಿರುವ ಎಸ್.ಐ.ಟಿ ಕ್ರಮ ರಾಜಕೀಯ ಪ್ರೇರಿತ ಎಂದು ಆಳಂದ ಮಾಜಿ ಶಾಸಕ ಸುಭಾಷ್ ಗುತ್ತೇದಾರ ಹೇಳಿದರು.
ಆದರೆ ಈ ಎಲ್ಲ ಆರೋಪಗಳನ್ನು ಸುಭಾಷ್ ಗುತ್ತೇದಾರ್ ಅಲ್ಲಗಳೆದಿದ್ದು, ಪ್ರತಿ ಬಾರಿ ಚುನಾವಣೆಗೂ ಮುನ್ನ ಇಂತಹ ಆಧಾರ ರಹಿತ ಆರೋಪಗಳನ್ನು ಮಾಡುವುದು ಹಾಲಿ ಶಾಸಕ ಬಿ.ಆರ್. ಪಾಟೀಲರಿಗೆ ರೂಢಿಯಾಗಿದೆ. ಅದರಲ್ಲೂ ಮುಖ್ಯವಾಗಿ ಡಿ.೧೫ರಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಮತಗಳ್ಳತನ ವಿರುದ್ಧದ ಬೃಹತ್ ಹೋರಾಟದಲ್ಲಿ ರಾಹುಲ್ ಗಾಂಧಿ ಗಮನ ಸೆಳೆದು, ಕರ್ನಾಟಕದ ಸರ್ಕಾರದಲ್ಲಿ ಮಂತ್ರಿಗಿರಿ ಪಡೆಯಬೇಕೆಂಬ ಲೆಕ್ಕಾಚಾರದಿಂದ ಹೀಗೆ ತಳಬುಡವಿಲ್ಲದ ಆರೋಪ ಮಾಡಿದ್ದಾರೆ. ಇಂತಹ ಆರೋಪಗಳಿಂದ ಏನೂ ಆಗುವುದಿಲ್ಲ ಎಂದರು.




























