
ಬೆಳಗಾವಿ, ಡಿ. ೧೦- ದ್ವೇಷ ಭಾಷಣಕ್ಕೆ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸುವ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ಮತ್ತು ನಿಯಂತ್ರಣ ವಿಧೇಯಕವನ್ನು ವಿರೋಧ ಪಕ್ಷಗಳ ವಿರೋಧದ ನಡುವೆಯೇ ವಿಧಾನಸಭೆಯಲ್ಲಿಂದು ಮಂಡಿಸಲಾಯಿತು.
ಪ್ರಶ್ನೋತ್ತರ ಕಲಾಪದ ನಂತರ ಗೃಹ ಸಚಿವ ಡಾ.ಜಿ. ಪರಮೇಶ್ವರ್ ರವರು ೨೦೨೫ನೇ ಸಾಲಿನ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ಮತ್ತು ನಿಯಂತ್ರಣ ವಿಧೇಯಕವನ್ನು ಮಂಡಿಸಿದರು.
ವಿಧೇಯಕ ಮಂಡನೆಗೆ ಸಭಾಧ್ಯಕ್ಷರು ಸದನದ ಅನುಮತಿ ಕೋರಿದಾಗ ಪ್ರತಿಪಕ್ಷ ಸದಸ್ಯರುಗಳು ಬೇಡ ಬೇಡ ವಿಧೇಯಕ ಬೇಡ ಎಂದು ಘೋಷಣೆ ಕೂಗಿ ವಿಧೇಯಕ ಮಂಡನೆಗೆ ವಿರೋಧ ವ್ಯಕ್ತಪಡಿಸಿದರು. ಪ್ರತಿ ಪಕ್ಷಗಳ ವಿರೋಧದ ನಡುವೆಯೆ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಧ್ವನಿಮತದಿಂದ ವಿಧೇಯಕವನ್ನು ಮಂಡಿಸಲಾಗಿದೆ ಎಂದು ಘೋಷಿಸಿದರು.
ಈ ವಿಧೇಯಕದ ಪ್ರಕಾರವ್ಯಕ್ತಿ, ವ್ಯಕ್ತಿಗಳ ಸಮೂಹ, ಸಂಸ್ಥೆಗಳ ವಿರುದ್ಧ ಸಮಾಜದಲ್ಲಿ ಅಸಾಮರಸ್ಯ ದ್ವೇಷವನ್ನುಂಟು ಮಾಡುವ ದ್ವೇಷ ಭಾಷಣದ ಪ್ರಸರಣೆ, ಪ್ರಕಟಣೆ ಅಥವಾ ಪ್ರಚಾರವನ್ನು ಹಾಗೂ ಅಪರಾಧಗಳನ್ನು ತಡೆಗಟ್ಟಲು ಮತ್ತು ಪ್ರತಿಬಂಧಿಸಲುಈ ವಿಧೇಯಕವನ್ನು ಜಾರಿಗೆ ತರಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.
ಇಂತಹ ಅಪರಾಧಗಳಿಗೆ ದಂಡನೆಯನ್ನು ಉಪಬಂಧಿಸಲು ಹಾಗೂ ಹಾನಿಗೊಳಗಾದ ಸಂತ್ರಸ್ತರಿಗೆ ತಕ್ಕಷ್ಟು ಪರಿಹಾರವನ್ನು ಒದಗಿಸಲು ಶಾಸನ ರೂಪಿಸಲಾಗುತ್ತಿದೆ ಎಂದು ಹೇಳಲಾಗಿದೆ.
ದ್ವೇಷ ಭಾಷಣಕ್ಕೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶವಿದೆ. ದ್ವೇಷ ಭಾಷಣವು ಗಂಭೀರ ಅಪರಾಧ ಪ್ರಕರಣವಾಗಿದ್ದು, ದ್ವೇಷ ಭಾಷಣವನ್ನು ಉತ್ತೇಜಿಸುವಂತೆ ನಡೆದುಕೊಳ್ಳುವವರು ದ್ವೇಷ ಭಾಷಣ ಮಾಡುವವರು ಇವರುಗಳನ್ನು ಈ ವಿಧೇಯಕದಡಿ ಶಿಕ್ಷಸಲು ಅವಕಾಶ ಕಲ್ಪಿಸಲಾಗಿದೆ.
ದ್ವೇಷ ಭಾಷಣ ಎಂಬುದು ಯಾವುದೇ ಪೂರ್ವಕಲ್ಪಿತ ಹಿತಾಸಕ್ತಿಯನ್ನು ಸಾಧಿಸಲು ಬದುಕಿರುವ ವ್ಯಕ್ತಿ ಅಥವಾ ಮೃತ ವ್ಯಕ್ತಿಗಳ ವರ್ಗ ಅಥವಾಗುಂಪು, ಅಥವಾ ಸಮುದಾಯದ ವಿರುದ್ಧ ಹಾನಿ ಅಸಾಮರಸ್ಯ ಅಥವಾ ವೈರುತ್ವದ ಅಥವಾದ್ವೇಷದ ಅಥವಾ ಕೆಡುಕಿನ ಭಾವನೆಗಳನ್ನು ಮೂಡಿಸುವ ಉದ್ದೇಶದೊಂದಿಗೆ ಸಾರ್ವಜನಿಕ ನೋಟದಲ್ಲಿ ಮೌಖಿಕವಾಗಿ ಅಥವಾ ಲಿಖಿತ ರೂಪದ ಪದದಲ್ಲಿ ಅಥವಾ ಸಂಕೇತಗಳ ಮೂಲಕ ಅಥವಾ ದೃಶ್ಯ ರೂಪಕಗಳ ಮೂಲಕ ಅಥವಾ ವಿದ್ಯುನ್ಮಾನ ಸಮ್ಮೂಹನ ಮೂಲಕ ಅಥವಾ ಇನ್ಯಾವುದೇ ರೀತಿಯಲ್ಲಿ ಮಾಡಲಾದ ಪ್ರಕಟಿಸಲಾದ ಪರಿಚಯಿಸಲಾದ ಯಾವುದೇ ಅಭಿವ್ಯಕ್ತಿಯನ್ನು ಒಳಗೊಂಡಿದೆ.
ಪೂರ್ವಕಲ್ಪಿತ ಹಿತಾಸಕ್ತಿ ಎಂಬುದು ಧರ್ಮ, ಜನಾಂಗ, ಜಾತಿ ಅಥವಾ ಸಮುದಾಯ, ಲಿಂಗ, ಲಿಂಗತ್ವ, ಲೈಂಗಿಕ ಮನೋಗುಣ, ಜನ್ಮಸ್ಥಳ, ವಾಸಸ್ಥಳ, ಭಾಷೆ, ನ್ಯೂನ್ಯತೆ ಅಥವಾ ಪಂಗಡ ಇವುಗಳ ಆಧಾರದ ಮೇಲಿನ ಪೂರ್ವಾಗ್ರಹಗಳನ್ನು ಒಳಗೊಂಡಿದೆ.
ದ್ವೇಷ ಅಪರಾಧ ಎಂಬುದು ಬದುಕಿರುವ ಅಥವಾ ಮೃತರಾಗಿರುವ ಯಾವುದೇ ವ್ಯಕ್ತಿ, ವ್ಯಕ್ತಿಗಳ ಸಮೂಹದ ಅಥವಾ ಅಸಾಮರಸ್ಯ ಅಥವಾ ಹಗೆತನ, ದ್ವೇಷ ಅಥವಾ ಕೆಡುಕಿನ ಭಾವನಗೆಳನ್ನು ಮೂಡಿಸಲು ದ್ವೇಷ ಭಾಷಣ ಮಾಡುವ ಅಥವಾ ಪ್ರಕಟಿಸುವ ಅಥವಾ ಪರಿಚಲನೆ ಮಾಡುವ ಮೂಲಕ ಅಂತಹ ದ್ವೇಷ ಭಾಷಣವನ್ನು ಪ್ರಚಾರ ಮಾಡುವ, ವ್ಯಾಪಕಗೊಳಿಸುವ, ಪ್ರಚೋದಿಸುವ ಅಥವಾ ದುಷ್ರೇಪಿರಿಸುವ ಅಥವಾ ಅದಕ್ಕೆ ಪ್ರಯತ್ನಿಸುವ ಮೂಲಕ ಅಂತಹ ದ್ವೇಷ ಭಾಷಣ ಸಂವಹನದ ಯಾವುದೇ ಕೃತ್ಯವನ್ನು ಒಳಗೊಳ್ಳುವುದು ಮತ್ತು ಸಂವಹನ ಎಂಬುದು ಸಾರ್ವಜನಿಕ ದೃಷ್ಟಿಗೆ ಬೀಳುವಂತೆ ಮೌಖಿಕ, ಮುದ್ರಣ, ಪ್ರಕಟಣೆ, ವಿದ್ಯುನ್ಮಾನ ವಿಧಾನಗಳ ಮೂಲಕ ಅಥವಾ ಇತರ ವಿಧಾನಗಳ ಮೂಲಕ ಅಂತ ಅಭಿವ್ಯಕ್ತಿಯ ಸಂವಹನವನ್ನು ತಿಳಿ ಹೇಳುವುದಕ್ಕಾಗಿ ಮಾಡಲಾದ ಅಭಿವ್ಯಕ್ತಿಯ ಸಂವಹನವನ್ನು ಒಳಗೊಳ್ಳುವುದು.
ದ್ವೇಷ ಅಪರಾಧಕ್ಕಾಗಿ ದಂಡನೆ
ಯಾರೇ ವ್ಯಕ್ತಿಯು ಅಪರಾಧ ಎಸಗಿದರೆ ಅವರಿಗೆ ಒಂದು ವರ್ಷಕ್ಕೆ ಕಡಿಮೆ ಇಲ್ಲದ ೭ ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಯ ಜೈಲು ಶಿಕ್ಷೆಯೊಂದಿಗೆ ೫೦ ಸಾವಿರ ರೂ.ಗಳ ಜುಲ್ಮಾನೆ ವಿಧಿಸಲು ಮತ್ತು ಯಾವುದೇ ತದನಂತರದ ಅಥವಾ ಪುನರಾವರ್ತಿತ ಅಪರಾಧಗಳಿಗೆ ೨ ವರ್ಷಗಳಿಗೆ ಕಡಿಮೆ ಇಲ್ಲದ ೧೦ ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಯ ಜೈಲು ಶಿಕ್ಷೆಯೊಂದಿಗೆ ೧ ಲಕ್ಷ ರೂ. ಜುಲ್ಮಾನೆ ವಿಧಿಸಲು ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಇದರ ಜತೆಗೆ ಅಪರಾಧ ಪರಿಣಾಮದ ತೀವ್ರತೆಯ ಆಧಾರದ ಮೇಲೆ ದ್ವೇಷ ಅಪರಾಧದಿಂದಾಗಿ ಸಂತ್ರಸ್ತನಿಗೆ ಉಂಟಾದ ಹಾನಿಯನ್ನು ಲೆಕ್ಕ ಹಾಕುವ ಮೂಲಕ ನ್ಯಾಯಾಲಯವು ಆತನಿಗೆ ತಕ್ಕಷ್ಟು ಪರಿಹಾರ ನೀಡಲು ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಸುವರ್ಣ ಸೌಧದ ಮುಂಭಾಗ ಸಿರಿ ಧಾನ್ಯದಲ್ಲಿ ಕರ್ನಾಟಕ ಭೂಪಟದಲ್ಲಿ ಸಂಸ್ಕೃತಿ ಬಿಂಬಿಸುವ ಮಾದರಿ ಗಮನ ಸೆಳೆಯಿತು.
ಅಧಿನಿಯಮದಡಿಯಲ್ಲಿನ ದ್ವೇಷ ಅಪರಾಧಗಳು ಜಾಮೀನು ರಹಿತವಾಗಿದೆ. ಸಂಜ್ಞೇಯಾವಾಗಿರತಕ್ಕದ್ದು ಹಾಗೂ ಜಾಮೀನು ರಹಿತವಾಗಿದೆ.
ಈ ವಿಧೇಯಕವನ್ನು ಸದನದಲ್ಲಿಂದು ಮಂಡನೆ ಮಾಡಲಾಗಿದ್ದು, ವಿಧೇಯಕದ ಚರ್ಚೆ ಮತ್ತು ಅಂಗೀಕಾರ ಬಾಕಿ ಇದೆ.
ರಾಜಕೀಯ ನಾಯಕರ ಟಾರ್ಗೆಟ್: ಅಶೋಕ್ ಕಿಡಿ
ದ್ವೇಷ ಭಾಷಣ ತಡೆ ಮಸೂದೆಗೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ವಿರೋಧ ವ್ಯಕ್ತಪಡಿಸಿದ್ದು, ರಾಜಕೀಯ ನಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ದೂರಿದರು.
ಬೆಳಗಾವಿಯಲ್ಲಿ ಸುವರ್ಣಸೌಧದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ದ್ವೇಷ ಭಾಷಣ ಮಾಡಿದರೆ ಕಡಿವಾಣಕ್ಕೆ ಈಗಾಗಲೇ ಬೇಕಾದಷ್ಟು ಕಾನೂನುಗಳಿವೆ. ಇದು ಕೋಮು ಸೌಹಾರ್ದತೆ ಹಾಳು ಮಾಡುವುದಕ್ಕಷ್ಟೇ ಎಂದು ಟೀಕಿಸಿದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕಾಂಗ್ರೆಸ್ ಶಾಸಕರೇ ಗ್ಯಾರಂಟಿ ಬೇಡ ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಗ್ಯಾರಂಟಿ ವಿರೋಧಿ ಎನ್ನುತ್ತಿದ್ದರು ಈಗ ಕಾಂಗ್ರೆಸ್ ಶಾಸಕರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್‌ನವರಿಗೆ ಈಗಲಾದರೂ ಬುದ್ಧಿ ಬಂದಿದೆ. ಇನ್ನು ಮೇಲಾದರೂ ಅಭಿವೃದ್ಧಿಗೆ ಒತ್ತು ನೀಡಲಿ ಎಂದರು.
ಷಡ್ಯಂತ್ರ
ಧರ್ಮಸ್ಥಳ ಪ್ರಕರಣ ಆರು ಜನರ ಷಡ್ಯಂತ್ರ, ಇದರ ಹಿಂದಿನ ಸೂತ್ರಧಾರ ಯಾರು, ಹಣ ನೀಡಿದವರು ಯಾರು ಎಲ್ಲವೂ ಬಹಿರಂಗವಾಗಬೇಕಿದೆ. ಸೂತ್ರದಾರನನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಇದೇ ರೀತಿ ಹಿಂದೂ ದೇವಸ್ಥಾನಗಳಿಗೆ ಅಪಪ್ರಚಾರ ಮಾಡಿದರೆ ನಾವು ಸಹಿಸಲ್ಲ ಎಂದು ಅಶೋಕ್ ಹೇಳಿದರು.

























