
ಕಲಬುರಗಿ,ಅ.17: ನಗರದ ಯದುಲ್ಲಾ ಕಾಲೋನಿಯಲ್ಲಿರುವ ಹಮೀದ್ ಪಿಯಾರೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕಲಬುರಗಿಯ ಭಾರತೀಯ ಚುನಾವಣಾ ಸುಧಾರಣಾ ಹೋರಾಟ ಸಮಿತಿ ವತಿಯಿಂದ ನನ್ನ ಮತ ಮಾರಾಟಕ್ಕಿಲ್ಲ -ಮತದಾರರ ಜಾಗೃತಿ ಆಂದೋಲನ ಹಮ್ಮಿಕೊಳ್ಳಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ಡಾ. ರಾಬಿಯಾ ಖಾನಂ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮೃದ್ಧವಾದ ದೇಶ ಕಟ್ಟುವಲ್ಲಿ ಚುನಾವಣೆಗಳು ಮಹತ್ತರವಾದ ಪಾತ್ರವಹಿಸುತ್ತವೆ.ಅದಕ್ಕಾಗಿ ಪ್ರತಿಯೊಬ್ಬ ಮತದಾರರು ತಪ್ಪದೆ ತಮ್ಮ ಮತವನ್ನು ಚಲಾಯಿಸುವ ಮೂಲಕ ತಮ್ಮ ಕರ್ತವ್ಯವನ್ನು ನಿಭಾಯಿಸಬೇಕು.ಇತ್ತೀಚಿಗೆ ಬಹಳಷ್ಟು ಚುನಾವಣೆಗಳಲ್ಲಿ ಬಹುತೇಕ ರಾಜಕಾರಣಿಗಳು ಹಣಬಲದಿಂದ ಚುನಾಯಿತರಾಗುತ್ತಿದ್ದು ಇದೇ ರೀತಿ ಮುಂದುವರೆದರೆ ಮುಂಬರುವ ದಿನಗಳಲ್ಲಿ ಪ್ರಜಾಪ್ರಭುತ್ವಕ್ಕೆ ಅಪಾಯ ಕಾದಿದೆ .ಹೀಗಾಗಿ ಮತದಾರರು ಚುನಾವಣೆಯಲ್ಲಿ ಹಣ ಪಡೆಯದೆ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಭಾರತೀಯ ಚುನಾವಣಾ ಸುಧಾರಣಾ ಹೋರಾಟ ಸಮಿತಿ ಸಂಸ್ಥಾಪಕ ರಮೇಶ ಆರ್ ದುತ್ತರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ವನಿತಾ ಜಾದವ ಮಾತನಾಡುತ್ತಾ ವಿದ್ಯಾರ್ಥಿಗಳು ತಪ್ಪದೇ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಬೇಕು ಹಾಗೆಯೇ ವಿದ್ಯಾರ್ಥಿಗಳು ಮತದಾನದ ಮಹತ್ವವನ್ನು ಅರಿತುಕೊಂಡು ಪ್ರತಿ ಚುನಾವಣೆಯಲ್ಲಿಯೂ ತಪ್ಪದೆ ಯೋಗ್ಯರಿಗೆ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಬೇರನ್ನು ಬಲಗೊಳಿಸಬೇಕು ಎಂದು ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಫರೀದಾ ಫಾತಿಮಾ, ನಾಗಮ್ಮ ಹೀರಾಣಿ, ಮಕ ತುಮ್ ಬಿ, ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿಗಳಾದ ನೇಹಾ ತಬಸುಮ್,ಉಮಾಶ್ರೀ ಪ್ರಾರ್ಥನೆ ಗೀತೆ ಹಾಡಿದರು.ಉಪನ್ಯಾಸಕರಾದ ರುಹಿ ಮಹಮ್ಮದಿ ಸ್ವಾಗತಿಸಿದರು.ಉಪನ್ಯಾಸಕರಾದ ಆಶಾಬೇಗಂ ನಿರೂಪಣೆ ಮಾಡಿದರು.ಉಪನ್ಯಾಸಕರಾದ ಸಿದ್ದರಾಮ ಹಿರೇಮಠ ವಂದನಾರ್ಪಣೆ ಮಾಡಿದರು.ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.