
ಬೆಂಗಳೂರು, ಡಿ. ೧೩- ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ಮತಗಳ್ಳತನದ ವಿರುದ್ಧ ನಾಳೆ ನಡೆಯಲಿರುವ ಹೋರಾಟದಲ್ಲಿ ಪಾಲ್ಗೊಳ್ಳಲು ಸಂಜೆ ದೆಹಲಿಗೆ ತೆರಳುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಈಗಾಗಲೇ ಮತಗಳ್ಳತನದ ವಿರುದ್ಧ ಅಭಿಯಾನ ಆರಂಭಿಸಿದೆ. ನಾಳೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ರಾಜ್ಯದಿಂದ ೧೦೦ಕ್ಕೂ ಹೆಚ್ಚು ಕಾಂಗ್ರೆಸ್ ಮುಖಂಡರು ಭಾಗವಹಿಸಲಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ನೂರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಮತಗಳ್ಳತನದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಪಕ್ಷದ ಮುಖಂಡರಾದ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶಕ್ತಿ ತುಂಬುವ ಸಲುವಾಗಿ ರಾಜ್ಯದ ಮುಖಂಡರು, ಕಾರ್ಯಕರ್ತರು ನಾಳಿನ ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ಹೇಳಿದರು.
ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಈಗಾಗಲೇ ದೆಹಲಿಗೆ ತೆರಳಿರುವ ಮುಖಂಡರು ಮತ್ತು ಕಾರ್ಯಕರ್ತರಿಗೆ ವ್ಯವಸ್ಥೆಗಳನ್ನು ಮಾಡಬೇಕಾದ ಜವಾಬ್ದಾರಿ ತಮ್ಮ ಮೇಲೆ ಇದೆ ಎಂದರು.
ದೆಹಲಿ ಭೇಟಿ ವೇಳೆ ಪಕ್ಷದ ವರಿಷ್ಠರನ್ನು ಭೇಟಿ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ಬಂದಿರುವ ಸಮನ್ಸ್ ಬಗ್ಗೆ ವಿವರಗಳನ್ನು ಸಿದ್ಧಪಡಿಸಬೇಕಾಗಿದೆ. ತಮಗೆ ಸiಯಾವಕಾಶ ಕಡಿಮೆಯಿದೆ ಎಂದು ಉತ್ತರಿಸಿದರು.
ನಾಳೆ ನಡೆಯಲಿರುವ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಭಾಗವಹಿಸಲಿದ್ದು ಅವರು ಕೂಡ ದೆಹಲಿಗೆ ತೆರಳಲಿದ್ದಾರೆ.




























