ಜ್ವಾಲಾಮುಖಿ ಸ್ಫೋಟ:ಏರ್ ಇಂಡಿಯಾ ದೆಹಲಿಗೆ

ನವದೆಹಲಿ,ಜೂ.೧೮-ದೆಹಲಿಯಿಂದ ಬಾಲಿಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನ ಎಐ೨೧೪೫ ವಿಮಾನವು ವಿಮಾನ ನಿಲ್ದಾಣದ ಬಳಿ ಜ್ವಾಲಾಮುಖಿ ಸ್ಫೋಟದಿಂದಾಗಿ ದೆಹಲಿಗೆ ಮರಳಿದೆ. ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ. ವಿಮಾನವು ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿದಿದೆ ಮತ್ತು ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಸುರಕ್ಷಿತವಾಗಿ ಇಳಿಸಲಾಗಿದೆ.


ಇಂಡೋನೇಷ್ಯಾದ ಬಾಲಿ ಬಳಿ ಪ್ರಬಲ ಜ್ವಾಲಾಮುಖಿ ಸ್ಫೋಟದಿಂದಾಗಿ ಅನೇಕ ಅಂತರರಾಷ್ಟ್ರೀಯ ವಿಮಾನಗಳು ರದ್ದಾಗಿವೆ ಜೊತೆಗೆ ಮಧ್ಯದಲ್ಲಿ ಹಿಂತಿರುಗಿವೆ. ಲೆವೊಟೊಬಿ ಲಕಿ-ಲಕಿ ಪರ್ವತದಿಂದ ಭಾರೀ ಬೂದಿ ಆಕಾಶವನ್ನು ಆವರಿಸಿ ಸುಮಾರು ೧೦,೦೦೦ ಮೀಟರ್ (೩೨,೮೦೦ ಅಡಿ) ಎತ್ತರಕ್ಕೆ ಏರಿದೆ. ಇದರಿಂದಾಗಿ ಏರ್ ಇಂಡಿಯಾ ಸೇರಿದಂತೆ ಅನೇಕ ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನಗಳನ್ನು ಸ್ಥಗಿತಗೊಳಿಸಿವೆ.


ಜೂನ್ ೧೮, ೨೦೨೫ ರಂದು, ಬಾಲಿ ವಿಮಾನ ನಿಲ್ದಾಣದ ಬಳಿ ಜ್ವಾಲಾಮುಖಿ ಸ್ಫೋಟದ ವರದಿಗಳಿಂದಾಗಿ ದೆಹಲಿಯಿಂದ ಬಾಲಿಗೆ ಹೋಗುವ ಎಐ೨೧೪೫ ವಿಮಾನವನ್ನು ದೆಹಲಿಗೆ ಹಿಂತಿರುಗಲು ಸೂಚಿಸಲಾಯಿತು. ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ವಿಮಾನವು ದೆಹಲಿಯಲ್ಲಿ ಸುರಕ್ಷಿತವಾಗಿ ಇಳಿಯಿತು ಮತ್ತು ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು ಎಂದು ಏರ್ ಇಂಡಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.


ಪ್ರಯಾಣಿಕರಿಗಾದ ಅನಾನುಕೂಲತೆಗೆ ವಿಮಾನಯಾನ ಸಂಸ್ಥೆಯು ಹೇಳಿಕೆಯಲ್ಲಿ ವಿಷಾದ ವ್ಯಕ್ತಪಡಿಸಿದ್ದು, ತೊಂದರೆಗೊಳಗಾದ ಪ್ರಯಾಣಿಕರಿಗೆ ಹೋಟೆಲ್ ವಸತಿ ಒದಗಿಸುವ ಮೂಲಕ ಅನಕೂಲ ಒದಗಿಸುವ ಎಲ್ಲ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಹೇಳಿದೆ. ಇದಲ್ಲದೆ, ವಿಮಾನಯಾನ ಸಂಸ್ಥೆಯು ಪ್ರಯಾಣಿಕರಿಗೆ ಟಿಕೆಟ್ ರದ್ದತಿಯ ಸಂಪೂರ್ಣ ಮರುಪಾವತಿ ಅಥವಾ ಅವರ ಆಯ್ಕೆಯ ಉಚಿತ ವಿಮಾನ ಪ್ರಯಾಣ ಸಹ ನೀಡಿದೆ.


ಮಂಗಳವಾರ ಸಂಜೆ ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ೧೪ ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಭೋಪಾಲ್‌ಗೆ ಆರು ವಿಮಾನಗಳು, ಚಂಡೀಗಢಕ್ಕೆ ಮೂರು, ಅಮೃತಸರಕ್ಕೆ ಎರಡು, ಅಹಮದಾಬಾದ್, ವಾರಣಾಸಿ ಮತ್ತು ಲಕ್ನೋಗೆ ತಲಾ ಒಂದು ವಿಮಾನಗಳನ್ನು ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.