
ಕೋಲಾರ,ಫೆ.೧೯- ತಾಲೂಕಿನ ವೇಮಗಲ್-ಕುರುಗಲ್ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಹಲವು ಸರ್ಕಾರಿ ಕಾರ್ಯಕ್ರಮಗಳು ನಡೆದಿದ್ದು ಸರ್ಕಾರಿ ಕಾರ್ಯಕ್ರಮಗಳಲ್ಲಿ ಸ್ಥಳೀಯ ಜನಪ್ರತಿನಿಧಿಗಳನ್ನು ಆಹ್ವಾನ ಮಾಡದೇ ಶಿಷ್ಟಾಚಾರ ಉಲ್ಲಂಘನೆ ಸೇರಿದಂತೆ ಪಟ್ಟಣ ಪಂಚಾಯತಿ ಅಭಿವೃದ್ಧಿ ಕಾರ್ಯಗಳಿಗೆ ವಿಶೇಷ ಅನುದಾನ ನೀಡುವಂತೆ ವೇಮಗಲ್ ಕುರುಗಲ್ ಪಟ್ಟಣ ಪಂಚಾಯತಿ ಅಧ್ಯಕ್ಷೆ ಅನುಷ ಡಿ ಹಾಗೂ ಉಪಾಧ್ಯಕ್ಷ ಸಿ.ಎಸ್ ವೆಂಕಟೇಶ್ ನೇತೃತ್ವದಲ್ಲಿ ಸದಸ್ಯರು ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ಪಟ್ಟಣ ಪಂಚಾಯತಿ ಸದಸ್ಯರು ಕಳೆದ ವರ್ಷ ೨೦೨೫ ಸೆಪ್ಟೆಂಬರ್ ತಿಂಗಳಲ್ಲಿ ಪಟ್ಟಣ ಪಂಚಾಯತಿಗೆ ಆಧ್ಯಕ್ಷರು, ಉಪಾಧ್ಯಕ್ಷರು ನೇಮಕವಾಗಿ ಆಡಳಿತ ಮಂಡಳಿ ರಚನೆಯಾದಗಿನಿಂದಲೂ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹಲವು ಇಲಾಖೆ ಕಾರ್ಯಕ್ರಮಗಳು ನಡೆದಿದ್ದು ಸ್ಥಳೀಯ ಜನಪ್ರತಿನಿಧಿಗಳನ್ನು ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘನೆ ಮಾಡಲಾಗಿದೆ ಎಂದು ದೂರಿದರು.
ಕುರುಗಲ್ ಪ್ರದೇಶ ವಾರ್ಡ್ ನಂ ೮ರಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಖಾಸಗಿಯವರು ದತ್ತು ಪಡೆಯುವ ಕಾರ್ಯಕ್ರಮಕ್ಕೆ ಸ್ಥಳೀಯ ಜನಪ್ರತಿನಿಧಿಗಳನ್ನು ಶಿಕ್ಷಣ ಇಲಾಖೆ ಆಹ್ವಾನಿಸದೆ ನಿರ್ಲಕ್ಷ್ಯ ಮಾಡಿದೆ, ಬೆಂಗಳೂರಿಗೆ ಹೊಸದಾಗಿ ಬಸ್ ಸಂಚಾರ ಕಾರ್ಯಕ್ರಮ, ರೈತರ ಜಮೀನುಗಳನ್ನು ಭೂಸ್ವಾದೀನ ಪಡಿಸಿಕೊಳ್ಳುವ ಮತ್ತು ಭೂಮಿಗೆ ಬೆಲೆ ನಿಗದಿ ಮಾಡುವ ಸರ್ಕಾರಿ ಸಭೆ, ನೆನ್ನೆ ಮಂಗಳವಾರ ನಡೆದ ಎಚ್ ೧೨೫ ಹೆಲಿಕಾಪ್ಟರ್ ಘಟಕ ಕಾರ್ಯಕ್ರಮಕ್ಕೆ ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳನ್ನು ಆಹ್ವಾನಿಸದೇ ಅಯಾ ಸರ್ಕಾರಿ ಇಲಾಖೆಗಳು ಶಿಷ್ಟಾಚಾರ ಉಲ್ಲಂಘನೆ ಮಾಡಿವೆ ಎಂದು ವಿವರಿಸಿದರು
ಯಾವುದೇ ಸರ್ಕಾರಿ ಕಾರ್ಯಕ್ರಮಗಳಿಗೆ ಸ್ಥಳೀಯ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು ಎಂದು ಸಂವಿಧಾನದಲ್ಲಿ ಅವಕಾಶ ಇದೆ. ಶಿಷ್ಟಾಚಾರ ಉಲ್ಲಂಘಿಸಿರುವ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಇನ್ನೂ ಮುಂದೆ ಈ ರೀತಿ ಆಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸದಸ್ಯರು ಡಿಸಿ ಅವರಲ್ಲಿ ಮನವಿ ಮಾಡಿದರು.
ವೇಮಗಲ್ ಕುರುಗಲ್ ಪಟ್ಟಣ ಪಂಚಾಯತಿ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವಂತೆ ಮನವಿ ಮಾಡಿದ ಸದಸ್ಯರು ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ, ಶುದ್ದಕುಡಿಯುವ ನೀರು, ಬೀದಿ ದೀಪ ಮತ್ತು ಇತರೆ ಸಾರ್ವಜನಿಕ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ ಪಟ್ಟಣ ಪಂಚಾಯಿತಿಗೆ ವೇಮಗಲ್ ಕೈಗಾರಿಕೆ ಪ್ರದೇಶ ಮತ್ತು ನರಸಾಪುರ ಕೈಗಾರಿಕಾ ಪ್ರದೇಶ ಕಂಪನಿಗಳಿಂದ ಬರುವ ಸಿ.ಎಸ್.ಆರ್ ಅನುದಾನ ಮತ್ತು ಸರ್ಕಾರದಿಂದ ಬರುವ ವಿಶೇಷ ಅನುದಾನಗಳನ್ನು ಪಟ್ಟಣ ಪಂಚಾಯಿತಿಗೆ ಕಲ್ಪಿಸಿಕೊಡಲು ಮನವಿ ಮಾಡಿಸರು.
ಮತ್ತು ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಭೂಸ್ವಾದೀನ ಪಡಿಸಿ ಕೊಂಡಿರುವ ರೈತರ ಕುಟುಂಬಗಳಿಗೆ ಮತ್ತು ಸ್ಥಳೀಯ ವಿದ್ಯಾರ್ಹತೆಯ ಮೇಲೆ ಉದ್ಯೋಗ ನೀಡುವುದು, ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕುರುಗಲ್ ಗ್ರಾಮದಲ್ಲಿ ನಮ್ಮ ಕ್ಲಿನಿಕ್ ಮಂಜೂರಾಗಿದ್ದು ಕ್ಲಿನಿಕ್‌ನ್ನು ತ್ವರಿತವಾಗಿ ಪ್ರಾರಂಭಿಸಲು ಕ್ರಮ, ವೇಮಗಲ್ ಗ್ರಾಮದ ಸರ್ವೆ ನಂ ೩೧ ರಲ್ಲಿ ೨ ಎಕರೆ ಸ್ಮಶಾನ ಜಾಗದ ಒತ್ತುವರಿ ತೆರವುಗೊಳಿಸಿ ಸರ್ವೆ ಮಾಡಿ ಗಡಿ ಗುರ್ತಿಸಿ ಕೊಡುವುದು, ಬಾಕಿ ಇರುವ ಹಕ್ಕ ಪತ್ರ ವಿತರಣೆ ಹಾಗೂ ಸದ್ಯ ನೀಡಿರುವ ಹಕ್ಕಪತ್ರಗಳ ಗೊಂದಲ ನಿವಾರಣೆ, ಸ್ಥಳೀಯವಾಗಿ ಕೌಶಲ್ಯಾಭಿವೃದ್ದಿ ತರಬೇತಿ ಕೇಂದ್ರ ಸ್ಥಾಪನೆ, ವೇಮಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ಇಪ್ಪತ್ನಾಲ್ಕು ಗಂಟೆಗಳ ಕಾಲ ವೈದ್ಯರ ಲಭ್ಯತೆ ಸೇರಿದಂತೆ ಹಲವು ಯೋಜನೆಗಳನ್ನು ಕಲ್ಪಿಸಿಕೊಡುವ ಕುರಿತು ಜಿಲ್ಲಾಧಿಕಾರಿಗಳಲ್ಲಿ ಸದಸ್ಯರು ಮನವಿ ಮಾಡಿದರು.
ಸದಸ್ಯರ ಮನವಿ ಅಲಿಸಿದ ಜಿಲ್ಲಾಧಿಕಾರಿಗಳು ಶಿಷ್ಟಾಚಾರ ಉಲ್ಲಂಘನೆ ಕುರಿತು ಇಲಾಖೆ ಅಧಿಕಾರಿಗಳಿಂದ ಮಾಹಿತಿ ತರಿಸಿಕೊಂಡು ಮುಂದೆ ಈ ರೀತಿ ಆಗದಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡುವುದಾಗಿ ಹೇಳಿದರು. ಸದಸ್ಯರು ಪಕ್ಷತೀತವಾಗಿ ಜೊತೆ ಗೂಡಿ ಪಟ್ಟಣ ಪಂಚಾಯತಿ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಕೇಳಿದ್ದು ರಾಜ್ಯದಲ್ಲಿ ವೇಮಗಲ್ ಕುರುಗಲ್ ಪಟ್ಟಣ ಪಂಚಾಯತಿಯನ್ನು ಮಾದರಿ ಪಟ್ಟಣ ಪಂಚಾಯತಿಯಾಗಿ ಮಾಡುವುದಕ್ಕೆ ಜಿಲ್ಲಾಡಳಿತದಿಂದ ಪೂರ್ಣ ಸಹಕಾರ ನೀಡುವುದಾಗಿ ಸದಸ್ಯರಿಗೆ ಭರವಸೆ ನೀಡಿದರು.
ವೇಮಗಲ್ ಕುರುಗಲ್ ಪಟ್ಟಣ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ನಾಮಿನಿ ಸದಸ್ಯರು ಮತ್ತು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ವೆಂಕಟೇಶ್ ಸಭೆಯಲ್ಲಿ ಉಪಸ್ಥಿತರಿದ್ದರು.


























