ಸದನದಲ್ಲಿ ಗದ್ದಲ-ಕೋಲಾಹಲ

ಬೆಂಗಳೂರು, ಫೆ. ೪- ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಸದಸ್ಯರು ಸದನದಲ್ಲಿಂದು ಧರಣಿ ಮುಂದುವರೆಸಿದ್ದರಿಂದ ಗದ್ದಲ, ಕೋಲಾಹಲ ವಾತಾವರಣ ಉಂಟಾಗಿ ಒಂದು ಬಾರಿ ಸದನವನ್ನು ಮುಂದೂಡಿ ಮತ್ತೆ ಬಿಜೆಪಿ ಸದಸ್ಯರ ಧರಣಿ ಗದ್ದಲದ ನಡುವೆಯೇ ವಿಬಿಜಿ ರಾಮ್‌ಜಿ ಕಾಯ್ದೆಯ ಚರ್ಚೆಯ ಕಲಾಪವನ್ನು ನಡೆಸಲಾಯಿತು.


ಇಂದು ಸದನ ಆರಂಭವಾಗುತ್ತಿದ್ದಂತೆಯೇ ಅಬಕಾರಿ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರ ಹೊಣೆ ಹೊತ್ತು ಅಬಕಾರಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿ ಪಕ್ಷಗಳಾದ ಬಿಜೆಪಿ-ಜೆಡಿಎಸ್ ಇಂದೂ ಸಹ ವಿಧಾನಸಭೆಯಲ್ಲಿ ಧರಣಿ ಮುಂದುವರೆಸಿ ಘೋಷಣೆಗಳನ್ನು ಕೂಗಿ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದರು.


ಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ಧರಣಿ ಕೈಬಿಡಿ ವಿಬಿಜಿ ಗ್ರಾಮ್‌ಜಿ ಕಾಯ್ದೆ ಚರ್ಚೆಯಲ್ಲಿ ಪಾಲ್ಗೊಳ್ಳಿ ಎಂದು ವಿಪಕ್ಷ ಸದಸ್ಯರಿಗೆ ಮನವಿ ಮಾಡಿದರೂ ಅದಕ್ಕೆ ಅವರು ಕಿವಿಗೊಡದೆ ಧರಣಿ ಮುಂದುವರೆಸಿ ಘೋಷಣೆಗಳನ್ನು ಕೂಗತೊಡಗಿದರು. ಇದರಿಂದ ಸದನದಲ್ಲಿ ಗದ್ದಲ ತಾರಕಕ್ಕೇರಿತು.


ಈ ಗದ್ದಲದ ನಡುವೇಯೆ ಮಾತನಾಡಿದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಧರಣಿ ಕೈಬಿಡಿ ಚರ್ಚೆಗೆ ಅವಕಾಶ ಕೊಡಿ ಎಂದು ಪದೇ ಪದೇ ಮನವಿ ಮಾಡಿದರಾದರೂ ಅದಕ್ಕೆ ವಿಪಕ್ಷ ಸದಸ್ಯರು ಸ್ಪಂದಿಸಲಿಲ್ಲ.


ಆ ಹಂತದಲ್ಲಿ ಪ್ರತಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ಅಬಕಾರಿ ಇಲಾಖೆಯಲ್ಲಿ ೬ ಸಾವಿರ ಕೋಟಿ ರೂ. ಭ್ರಷ್ಟಾಚಾರ ನಡೆದಿದೆ. ಇದೊಂದು ದೊಡ್ಡ ಭ್ರಷ್ಟಾಚಾರ ಹಗರಣ. ನಾವು ಭ್ರಷ್ಟಾಚಾರದ ಬಗ್ಗೆ ದಾಖಲೆಗಳನ್ನು ಕೊಟ್ಟರೂ ಸಚಿವರ ರಾಜೀನಾಮೆ ಆಗುತ್ತಿಲ್ಲ. ಇದನ್ನು ನೋಡಿದರೆ ಭ್ರಷ್ಟಾಚಾರದಲ್ಲಿ ಮುಖ್ಯಮಂತ್ರಿಗಳಿಗೂ ಪಾಲು ಇದ್ದಂತಿದೆ. ಅಬಕಾರಿ ಸಚಿವರು ರಾಜೀನಾಮೆ ಕೊಡಲಿ ತನಿಖೆ ಎದುರಿಸಿ ದೋಷ ಮುಕ್ತರಾದರೆ ಮತ್ತೆ ಸಚಿವರಾಗಲಿ ಎಂದು ಒತ್ತಾಯಿಸಿದರು.


ಈ ಹಿಂದೆ ಆರೋಪಗಳು ಕೇಳಿ ಬಂದಾಗ ಸಚಿವರಾದ ಕೆ.ಜೆ. ಜಾರ್ಜ್, ಕೆ.ಎಸ್. ಈಶ್ವರಪ್ಪ ರಾಜೀನಾಮೆ ನೀಡಿ ದೋಷಮುಕ್ತರಾಗಿ ಸಚಿವರಾಗಿದ್ದಾರೆ. ಅಬಕಾರಿ ಹಗರಣದಲ್ಲೂ ತಿಮ್ಮಾಪುರ ಅವರು ರಾಜೀನಾಮೆ ನೀಡಿ, ತನಿಖೆ ಎದುರಿಸಿ ದೋಷಮುಕ್ತರಾದರೆ ಮತ್ತೆ ಸಚಿವರಾಗಲಿ. ನಮ್ಮದೇನು ಅಭ್ಯಂತರ ಇಲ್ಲ ಎಂದರು.


ಕೇಂದ್ರದ ಕಾಂಗ್ರೆಸ್ ನಾಯಕರ ಪಾಲಿಗೆ ಕರ್ನಾಟಕ ಎಟಿಎಂ ಅಲ್ಲ, ಆರ್‌ಬಿಐ ಆಗಿದೆ. ಮುಖ್ಯಮಂತ್ರಿಗಳು ನಮಗೆ ನೈತಿಕತೆ ಪಾಠ ಹೇಳುತ್ತಾರೆ. ಅವರಿಗೆ ನೈತಿಕತೆ ಇದ್ದಿದ್ದರೆ ತಿಮ್ಮಾಪುರ ಅವರ ರಾಜೀನಾಮೆ ಪಡೆದು, ಅಬಕಾರಿ ಹಗರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಿ. ತಮ್ಮ ಜಾತಿಯವರೇ ಎಂಬ ಕಾರಣಕ್ಕೆ ಹಗರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಆಗಿಲ್ಲ. ಕೆಳ ಹಂತದ ಅಧಿಕಾರಿಗಳನ್ನು ಮಾತ್ರ ಅಮಾನತು ಮಾಡಲಾಗಿದೆ. ಅಬಕಾರಿ ಸಂಘದ ಅಧ್ಯಕ್ಷರು, ಮುಖ್ಯಮಂತ್ರಿಗಳ ಸ್ನೇಹಿತರು ಆದ ಗುರುಸ್ವಾಮಿ ಅವರೇ ಅಬಕಾರಿ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಇದೆಲ್ಲಾ ಸಾಕ್ಷಿ ಅಲ್ಲವೆ. ಹೀಗಿರುವಾಗ ಸಚಿವರು ರಾಜೀಮಾಮೆ ನೀಡಬೇಕು. ಅಲ್ಲಿವರೆಗೂ ನಮ್ಮ ಹೋರಾಟ ನಿಲ್ಲದು ಎಂದರು.


ಆಗ ಸಭಾಧ್ಯಕ್ಷರು ನೀವು ಧರಣಿ ಮಾಡಿ ನಾನು ರಾತ್ರಿವರೆಗೂ ಕಲಾಪ ನಡೆಸುತ್ತೇನೆ ಎಂದು ಹೇಳಿ, ವಿಬಿಜಿ ಗ್ರಾಮ್ ಜಿ ಕಾಯ್ದೆ ಬಗ್ಗೆ ಮಾತನಾಡುವಂತೆ ಕಾಂಗ್ರೆಸ್‌ನ ಕೋನರೆಡ್ಡಿ ಅವರಿಗೆ ಸೂಚಿಸಿದರು.


ವಿಬಿಜಿ ಗ್ರಾಮ್‌ಜಿ ಕಾಯ್ದೆ ಬಗ್ಗೆ ಕೋನರೆಡ್ಡಿ ಅವರು ಮಾತನಾಡಿ, ಕಾಯ್ದೆಯನ್ನು ರದ್ದು ಮಾಡುವಂತೆ ಆಗ್ರಹಿಸಿದ ನಂತರ ಕಾಂಗ್ರೆಸ್‌ನ ಶರತ್ ಬಚ್ಚೇಗೌಡ ಅವರು ಕಾಯ್ದೆ ವಿರೋಧಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಸಭಾಧ್ಯಕ್ಷ ಪೀಠದಲ್ಲಿದ್ದ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರು ಸದನದಲ್ಲಿ ಗದ್ದಲ ಹೆಚ್ಚಾಗಿದೆ ಎಂದು ಸದನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿದರು.


ಮತ್ತೆ ಹತ್ತು ನಿಮಿಷದ ನಂತರ ಸದನ ಸಮಾವೇಶಗೊಂಡಾಗ ಸಭಾಧ್ಯಕ್ಷ ಯು. ಟಿ ಖಾರದ್, ವಿಬಿಜಿ ಗ್ರಾಮ್‌ಜ ಚರ್ಚೆಯನ್ನು ಮುಂದುವರೆಸಿ ಎಂದು ಶರತ್ ಬಚ್ಚೇಗೌಡ ರವರಿಗೆ ಸೂಚಿಸಿದರು. ಇಷ್ಟೆಲ್ಲಾ ಕಲಾಪ ಬಿಜೆಪಿ ಸದಸ್ಯರ ಧರಣಿ, ಘೋಷಣೆಗಳ ಮಧ್ಯೆಯೇ ನಡೆಯಿತು.


ಶರತ್ ಬಚ್ಚೇಗೌಡ ಮಾತನಾಡಿ, ವಿಬಿಜಿ ಗ್ರಾಮ್ ಜಿ ಕಾಯ್ದೆ ಸಂವಿಧಾನ ವಿರೋಧಿಯಾಗಿದೆ. ಗ್ರಾಮೀಣ ಭಾಗದ ಜನರ ಜೀವನಕ್ಕೆ ಮಾರಕವಾಗಿದೆ ಎಂದು ಹೇಳಿ, ಮನರೇಗಾವನ್ನು ಪುನರ್ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು. ಇದಾದ ಬಳಿಕ ಶಿವಲಿಂಗೇಗೌಡ ಅವರಿಗೆ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡಲು ಅವಕಾಶ ನೀಡಿದರು.


ಇದಾದ ಬಳಿಕ ಕಾಂಗ್ರೆಸ್‌ನ ರಂಗನಾಥ್, ನಾರಾಯಣಸ್ವಾಮಿ ಇವರುಗಳು, ವಿಬಿಜಿ ಗ್ರಾಮ್‌ಜಿ ಕಾಯ್ದೆಯ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿ, ಮನರೇಗಾ ಪುನರ್ ಸ್ಥಾಪಿಸಬೇಕು. ಗ್ರಾಮೀಣ ಜನರಿಗೆ ಮಾರಕವಾಗಿರುವ ವಿಬಿಜಿ ರಾಮ್‌ಜಿ ಕಾಯ್ದೆಯನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು.


ಒಂದೆಡೆ ಕಾಂಗ್ರೆಸ್ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರೆ, ಬಿಜೆಪಿ ಸದಸ್ಯರು ಧರಣಿ ನಡೆಸಿ ಘೋಷಣೆಗಳನ್ನು ಕೂಗುತ್ತಲೆ ಇದ್ದರು. ಇಡೀ ದಿನದ ಕಲಾಪ ಗದ್ದಲದ ನಡುವೆಯೇ ನಡೆಯಿತು.


ಅಬಕಾರಿ ಸಚಿವ ತಿಮ್ಮಾಪುರ ಅವರ ರಾಜೀನಾಮೆಗೆ ಪಟ್ಟು ಹಿಡಿದು ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ನಿನ್ನೆಯೆಂದ ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದು, ನಿನ್ನೆ ಇಡೀ ರಾತ್ರಿ ಸದನದಲ್ಲೇ ಮಲಗಿ ತಿಮ್ಮಾಪುರ ರಾಜೀನಾಮೆಗೆ ಪಟ್ಟು ಹಿಡಿದಿದ್ದರು.


ಇಂದು ಬೆಳಗ್ಗೆ ವಿಧಾನಸಭೆ ಆರಂಭವಾಗುತ್ತಿದ್ದಂತೆಯೇ ಸಭಾಧ್ಯಕ್ಷರ ಮುಂದಿನ ಬಾವಿಗೆ ಆಗಮಿಸಿ ಧರಣಿ ಮುಂದುವರೆಸಿದ ಬಿಜೆಪಿ ಸದಸ್ಯರು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರ ರಾಜೀನಾಮೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಇದರಿಂದ ಸದನದಲ್ಲಿ ಗದ್ದಲ, ಕೋಲಾಹಲದ ವಾತಾವರಣ ರೂಪುಗೊಂಡಿತು.