ನ್ಯಾಯಮಂಡಳಿ ರಚನೆಗೆ ಸುಪ್ರೀಂ ಆದೇಶ

ನವದೆಹಲಿ, ಫೆ. ೨- ಕರ್ನಾಟಕ ಮತ್ತು ತಮಿಳುನಾಡಿನ ನಡುವಿನ ಪೆನ್ನಾರ್ (ದಕ್ಷಿಣ ಪಿನಾಕಿನಿ) ನದಿ ನೀರು ಹಂಚಿಕೆ, ವಿವಾದ ಇತ್ಯರ್ಥಕ್ಕೆ ನ್ಯಾಯಮಂಡಳಿ ರಚಿಸುವಂತೆ ಇಂದು ಸರ್ವೋಚ್ಛ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ.


ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ನ್ಯಾಂiiಮೂರ್ತಿಗಳಾದ ವಿಕ್ರಮ್‌ನಾಥ್ ಹಾಗೂ ಎನ್.ವಿ. ಅಂಜಾರಿಯಾ ಅವರಿದ್ದ ಪೀಠ ನದಿ ನೀರು ಹಂಚಿಕೆ ವಿವಾದ ಬಗೆಹರಿಸಲು ನ್ಯಾಯಮಂಡಳಿ ರಚನೆ ಸೂಕ್ತ ಎಂದು ಹೇಳಿತು.


ಈ ಆದೇಶ ಪ್ರಕಟಗೊಂಡ ಒಂದು ತಿಂಗಳೊಳಗಾಗಿ ಜಲವಿವಾದ ನ್ಯಾಯಮಂಡಳಿಯನ್ನು ರಚಿಸುವಂತೆ ನ್ಯಾಯಪೀಠ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಈ ಹಿಂದೆ ನಡೆದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ನ್ಯಾಯಪೀಠ ಎರಡು ರಾಜ್ಯಗಳು ತಮ್ಮ ವಾದಗಳನ್ನು ನ್ಯಾಯಮಂಡಳಿಯಲ್ಲಿ ಮಂಡಿಸುವುದು ಉತ್ತಮ ಎಂದು ಅಭಿಪ್ರಾಯಪಟ್ಟಿತ್ತು.


ದಕ್ಷಿಣ ಪಿನಾಕಿನಿ ನದಿಯ ಕಣವೆಯಲ್ಲಿ ಕರ್ನಾಟಕ ಸರ್ಕಾರ ಮಾರ್ಕೆಂಡೆಯ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಿದೆ. ಬೆಂಗಳೂರಿನ ಎಲೆ ಮಲ್ಲಪ್ಪಚೆಟ್ಟಿ ಕೆರೆಯಿಂದ ಹೊಸಕೋಟೆಯವರೆಗೆ ನೀರು ಹರಿಸುವ ಕಾಮಗಾರಿ, ಬ್ಯಾಲಹಳ್ಳಿಯ ಹತ್ತಿರ ಪೆನ್ನಾರ್ ನದಿಯಿಂದ ನೀರು ಹರಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಈ ಯೋಜನೆಗೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿ, ೨೦೧೮ರ ಮೇ ೧೮ ರಂದು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.


ಜಲವಿವಾದ ನ್ಯಾಯಮಂಡಳಿ ಸ್ಥಾಪಿಸುವಂತೆ ಆಗ್ರಹಿಸಿ, ತಮಿಳುನಾಡು ಸರ್ಕಾರ ಕೇಂದ್ರ ಸರ್ಕಾರಕ್ಕೆ ೨೦೧೯ರ ನವೆಂಬರ್ ತಿಂಗಳಲ್ಲಿ ಮನವಿ ಮಾಡಿತ್ತು.
ಜಲಶಕ್ತಿ ಸಚಿವಾಲಯ ೨೦೨೦ರಲ್ಲಿ ಸಂಧಾನ ಸಭೆ ನಡೆಸಿದ ಸಂದರ್ಭದಲ್ಲಿ ಎರಡು ಸರ್ಕಾರಗಳು ಒಮ್ಮತಕ್ಕೆ ಬರಲು ವಿಫವಾಗಿತ್ತು. ಹೊಸದಾಗಿ ಸಂಧಾನ ನಡೆಸುವಂತೆ ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರಕ್ಕೆ ೨೦೨೪ರ ಜೂನ್‌ನಲ್ಲಿ ಒತ್ತಾಯಿಸಿತ್ತು.


ಕರ್ನಾಟಕ ಜಲಾನಯ ಪ್ರದೇಶದಲ್ಲಿ ಒಟ್ಟು ೧೧.೭೭ ಟಿಸಿಎಂ ನೀರಿನಲ್ಲಿ ೯.೭೭ ಟಿಸಿಎಂ ನೀರನ್ನು ಬಳಸಲು ಯೋಜಿಸಲಾಗಿದೆ. ಇದರಲ್ಲಿ ೨ ಟಿಎಂಸಿ ಮತ್ತು ಹೆಚ್ಚುವರಿ ನೀರು ತಮಿಳುನಾಡು ಬಳಿ ಉಳಿದಿದೆ. ಹೀಗಾಗಿ ತಮಿಳುನಾಡಿನ ಅವಶ್ಯಕತೆಗಳನ್ನು ಪೂರೈಸಲು ಸಾಕಾಗುತ್ತದೆ ಎಂದು ರಾಜ್ಯ ಸರ್ಕಾರ ವಾದ ಮಂಡಿಸಿತ್ತು.