Home ಜಿಲ್ಲೆ ಬೆಂಗಳೂರು ಚನ್ನಯ್ಯ ಪುತ್ಥಳಿ ಅನಾವರಣ – ದಲಿತ ಸಂಘಟನೆಗಳ ಕಡೆಗಣೆನೆಗೆ ಖಂಡನೆ

ಚನ್ನಯ್ಯ ಪುತ್ಥಳಿ ಅನಾವರಣ – ದಲಿತ ಸಂಘಟನೆಗಳ ಕಡೆಗಣೆನೆಗೆ ಖಂಡನೆ

ಕೋಲಾರ,ಮಾ.೦೫: ಕೋಲಾರ ನಗರ ನಿರ್ಮಾತೃ ಹಾಗೂ ಸಂವಿಧಾನ ರಚನಾ ಸಮಿತಿ ಸದಸ್ಯ ಮತ್ತು ಮಾಜಿ ಸಂಸದ ಟಿ.ಚನ್ನಯ್ಯ ನವರ ಪೂರ್ಣ ಪುತ್ಥಳಿಗೆ ಬದಲಾಗಿ ಕಾಟಾಚಾರಕ್ಕೆ ಅರ್ದ ಪ್ರತಿಮೆಯನ್ನು ಜಿಲ್ಲಾಡಳಿತದಿಂದ ಅನಾವರಣ ಮಾಡಲಾಗಿರುವುದು ಖಂಡನೀಯವಾಗಿದೆ ಎಂದು ಭಾರತೀಯ ದಲಿತ ಸೇನೆ ಸಂಸ್ಥಾಪಕ ಅಧ್ಯಕ್ಷ ದಲಿತ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೋಲಾರ ಜಿಲ್ಲೆಯ ಇತಿಹಾಸದಲ್ಲಿ ಚಾರಿತ್ರಿಕವಾಗಿ ರೂಪುಗೊಂಡ ಸಂವಿಧಾನ ರಚನಾ ಸಮಿತಿ ಸದಸ್ಯ ಮತ್ತು ಮಾಜಿ ಸಂಸದ ಟಿ.ಚನ್ನಯ್ಯನವರ ಪ್ರತಿಮೆ ಜಿಲ್ಲಾ ಕೇಂದ್ರದಲ್ಲಿ ಇರಬೇಕು ಎಂಬ ಬೇಡಿಕೆ ಬಹುದಿನಗಳದ್ದಾಗಿದ್ದು, ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಂಗಮಂದಿರ ಆವರಣದಲ್ಲಿ ಕಲ್ಲಿನಲ್ಲಿ ಕೆತ್ತಿದ ಅರ್ಧ ದೇಹದ ಪುತ್ಥಳಿ ಇಟ್ಟು ಉದ್ಘಾಟಿಸಿರುವುದು ಖಂಡನೀಯವಾಗಿದೆ ಎಂದು ಹೇಳಿದರು.


ಅಷ್ಟೇ ಅಲ್ಲದೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಸ್ಥಳೀಯ ಸಂಘ ಸಂಸ್ಥೆಗಳು ಮತ್ತು ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರನ್ನು ಆಹ್ವಾನಿಸದೆ ಕಡೆಗಣಿಸಿರುವುದು ಸರಿಯಲ್ಲ, ಈಗಾಗಲೇ ಉದ್ಘಾಟನೆ ವೇಳೆ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರು ಅಧಿಕಾರಿಗಳ ಈ ನಡೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದ್ದೂರಿಯಾಗಿ ನಡೆಯಬೇಕಾದ ಕಾರ್ಯಕ್ರಮ ಕಾಟಾಚಾರಕ್ಕೆ ಎಂಬಂತೆ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದು ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿಗೆ ಕನ್ನಡಿ ಹಿಡಿಯುತ್ತದೆ ಎಂದು ತಿಳಿಸಿದರು.


ನಗರ ನಿರ್ಮಾತೃ ಟಿ. ಚನ್ನಯ್ಯ ಅವರ ಪೂರ್ಣ ಪ್ರಮಾಣದ ಪುತ್ಥಳಿಯನ್ನು ನಗರದ ಯಾವುದಾದರೂ ಪ್ರಮುಖ ವೃತ್ತದಲ್ಲಿ ಅಥವಾ ಉದ್ಯಾನದಲ್ಲಿ ಸ್ಥಾಪನೆ ಮಾಡಲು ಭಾರತೀಯ ದಲಿತ ಸೇನೆ ಈ ಸಂದರ್ಭದಲ್ಲಿ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.