
ಯಾದಗಿರಿ:ಮಾ.22: ಪ್ರಕೃತಿ ವೈಪರೀತ್ಯಗಳ ಸರಮಾಲೆಯ ನಡುವೆ ಇದೀಗ ಅಕಾಲಿಕವಾಗಿ ಸುರಿದ ಆಲೆಕಲ್ಲು ಮಳೆಯ ಭೀಕರ ಅಟ್ಟಹಾಸಕ್ಕೆ ವಡಗೇರಾ ಭಾಗದ ರೈತ ಸಮುದಾಯ ಸಂಪೂರ್ಣವಾಗಿ ಕುಗ್ಗಿಹೋಗಿದ್ದು, ತಕ್ಷಣವೇ ಸರ್ಕಾರದಿಂದ ಸಮಗ್ರ ಪರಿಹಾರ ಪ್ಯಾಕೇಜ್ ಘೋಷಣೆ ಅಗತ್ಯವಿದೆ ಎಂದು ಬಿಜೆಪಿ ಜಿಲ್ಲಾ ಯುವ ಘಟಕದ ಜಿಲ್ಲಾಧ್ಯಕ್ಷ ಶ್ರೀಧರ ಸಾಹುಕಾರ ತೀವ್ರ ಆಗ್ರಹ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆಯ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಅವರು, ಚನ್ನೂರ.ಜೆ, ಗೊಂದೆನೂರ, ಕೊಂಕಲ್, ಕುರಿಹಾಳ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತ, ಜೋಳ, ಸಜ್ಜೆ ಹಾಗೂ ಹತ್ತಿ ಬೆಳೆಗಳು ಕಣ್ಣೆದುರೇ ನಾಶವಾಗಿ, ರೈತರ ಜೀವನಾಧಾರವೇ ಕುಸಿದು ಬಿದ್ದಂತಾಗಿದೆ ಎಂದು ತಿಳಿಸಿದ್ದಾರೆ. ತಿಂಗಳ ತನಕ ಹಗಲಿರುಳು ಶ್ರಮಿಸಿ ಬೆಳೆದ ಬೆಳೆಗಳು ಕೆಲವೇ ನಿಮಿಷಗಳಲ್ಲಿ ಹಾಳಾಗಿರುವುದು ರೈತ ಕುಟುಂಬಗಳ ಮೇಲೆ ಅಸಹನೀಯ ಆಘಾತ ಉಂಟುಮಾಡಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಭೀಮಾ ಹಾಗೂ ಕೃಷ್ಣಾ ನದಿಗಳ ತೀರ ಪ್ರದೇಶಗಳಲ್ಲಿ ನೆಲೆಸಿರುವ ರೈತರು ಬ್ಯಾಂಕ್‍ಗಳು ಹಾಗೂ ಸಹಕಾರ ಸಂಘಗಳಿಂದ ಲಕ್ಷಾಂತರ ರೂಪಾಯಿ ಸಾಲ ಪಡೆದು ನೀರಾವರಿ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಿಕೊಂಡು ಕೃಷಿ ಚಟುವಟಿಕೆಗಳನ್ನು ಮುಂದುವರೆಸುತ್ತಿದ್ದಾರೆ. ಆದರೆ ಪ್ರತೀ ವರ್ಷ ಮೇಲ್ಭಾಗಗಳಲ್ಲಿ ಸುರಿಯುವ ಭಾರೀ ಮಳೆಯ ಪರಿಣಾಮವಾಗಿ ನದಿಗಳಲ್ಲಿ ಉಂಟಾಗುವ ಪ್ರವಾಹದಿಂದ ಬೆಳೆ ಹಾನಿ ಸಾಮಾನ್ಯವಾಗಿಬಿಟ್ಟಿದೆ. ಇದರಿಂದಲೇ ರೈತರು ಆರ್ಥಿಕ ಸಂಕಷ್ಟದ ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅವರು ವಿವರಿಸಿದರು.
ಇದಕ್ಕೆ ಜೊತೆಯಾಗಿ ಇದೀಗ ಆಲೆಕಲ್ಲು ಮಳೆಯ ದಾಳಿ ರೈತರ ಮೇಲೆ ಮತ್ತೊಂದು ಭಾರೀ ವಿಪತ್ತು ಆಗಿ ಬಿದ್ದಿದ್ದು, ಈಗಾಗಲೇ ಸಾಲದ ಹೊರೆ ಹೊತ್ತಿರುವ ರೈತರು ಆತಂಕದ ಅಂಚಿನಲ್ಲಿದ್ದಾರೆ. ಕೆಲವರಲ್ಲಿ ನಿರಾಶೆ, ನಿರ್ಗತಿಕತೆ ಹೆಚ್ಚಾಗಿ ಆತ್ಮಹತ್ಯೆಯಂತಹ ದುರಂತ ನಿರ್ಧಾರಗಳತ್ತ ಒಲವು ಮೂಡುವ ಸಾಧ್ಯತೆ ಹೆಚ್ಚುತ್ತಿದೆ ಎಂದು ಅವರು ಎಚ್ಚರಿಕೆ ನೀಡಿದರು.
ಹೀಗಾಗಿ, ಸರ್ಕಾರವು ಕೇವಲ ಮೇಲ್ಮೈಯ ಕ್ರಮಗಳಲ್ಲಿ ಸೀಮಿತವಾಗದೆ, ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ ನಿಖರ ನಷ್ಟದ ಅಂದಾಜು ಮಾಡಿ, ಪೀಡಿತ ರೈತರಿಗೆ ಸಮರ್ಪಕ ಮತ್ತು ಸಮಗ್ರ ಪರಿಹಾರವನ್ನು ಬಿಡುಗಡೆ ಮಾಡಬೇಕು. ಜೊತೆಗೆ ಭವಿಷ್ಯದಲ್ಲಿ ಇಂತಹ ಪ್ರಕೃತಿ ವೈಪರೀತ್ಯಗಳಿಂದ ರೈತರನ್ನು ರಕ್ಷಿಸುವ ಶಾಶ್ವತ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ ಎಂದು ಶ್ರೀಧರ ಸಾಹುಕಾರ ಒತ್ತಾಯಿಸಿದರು.




























