
ಕಲಬುರಗಿ,ಆ.21: ರಾಜ್ಯದಾದ್ಯಂತ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಡಿಯಲ್ಲಿ ಗ್ರಾಮ ಪಂಚಾಯಿತಿ ಒಳಗೊಂಡಂತೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪುನರ್ವಸತಿ ಕಾರ್ಯಕರ್ತರಿಗೆ ಪ್ರತ್ಯೇಕವಾಗಿ ಬಯೊಮೆಟ್ರಿಕ್ ಹಾಜರಾತಿ ಜಾರಿಗೊಳಿಸುವವರೆಗೆ ಕಾರ್ಯಕರ್ತರ ಗೌರವಧನ ಅವೈಜ್ಞಾನಿಕವಾಗಿ ಕಡಿತಗೊಳಿಸುವ ಪದ್ಧತಿ ಕೈಬಿಡದೆ ಹೋದರೆ ಹೋರಾಟ ರೂಪಿಸಲಾಗುವುದು ಎಂದು ನವ ಕರ್ನಾಟಕ ಎಂ.ಆರ್.ಡಬ್ಲ್ಯು, ವಿ.ಆರ್.ಡಬ್ಲ್ಯು, ಯು.ಆರ್.ಡಬ್ಲ್ಯು ವಿಕಲಚೇತನ ಗೌರವಧನ ಕಾರ್ಯಕರ್ತರ ಸಂಘದ ಸಂಸ್ಥಾಪಕ ಅಧ್ಯಕ್ಷ ಡಾ.ಅಂಬಾಜಿ ಪಿ.ಮೇಟಿ ಎಚ್ಚರಿಕೆ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಗ್ರಾಮೀಣ, ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ 6500ಕ್ಕೂ ಹೆಚ್ಚು ವಿವಿಧೋದ್ದೇಶ, ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದು, ಈ ಎಲ್ಲ ಪುನರ್ವಸತಿ ಕಾರ್ಯಕರ್ತರು ಅವೈಜ್ಞಾನಿಕ ಬಯೋಮೆಟ್ರಿಕ್ ಹಾಜರಾತಿ ಸೃಷ್ಟಿಸಿರುವ ಸಮಸ್ಯೆಯಿಂದಾಗಿ ಗೌರವಧನ ಕಡಿತ ಶಿಕ್ಷೆಗೆ ಒಳಗಾಗುತ್ತಿದ್ದಾರೆ. ಹೀಗಾಗಿ, ಸ್ವತಃ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಸ್ಥಳೀಯ ಸಂಸ್ಥೆಗಳಲ್ಲಿ ಬಯೊಮೆಟ್ರಿಕ್ ಹಾಜರಾತಿ ಯಂತ್ರಗಳನ್ನು ಅಳವಡಿಸಬೇಕು. ಒಂದುವೇಳೆ, ಹೀಗೆ ಯಂತ್ರಗಳನ್ನು ಅಳವಡಿಸುವುದು ಸಾಧ್ಯವಾಗದೇ ಹೋದಲ್ಲಿ ಪುನರ್ವಸತಿ ಕಾರ್ಯಕರ್ತರಿಗೆ ಅವರ ಕಾರ್ಯನಿರ್ವಹಣಾ ಕ್ಷೇತ್ರದಲ್ಲಿ ಲೈವ್ ಲೊಕೇಷನ್ ಸಾಬೀತುಪಡಿಸಿದ ಬಳಿಕ ಮೊಬೈಲ್ ಮೂಲಕವೇ ಹಾಜರಾತಿಗೆ ಅವಕಾಶ ಕಲ್ಪಿಸಬೇಕೆಂದು ಅವರು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿ.ಆರ್.ಡಬ್ಲ್ಯುಗಳು ಆಯಾ ಗ್ರಾಪಂ. ಕಚೇರಿಯಲ್ಲಿ ಅಳವಡಿಸಿರುವ ಬಯೊಮೆಟ್ರಿಕ್ ಯಂತ್ರದಲ್ಲಿ ನಿತ್ಯ ಮುಂಜಾನೆ ತಮ್ಮ ಒಳ ಪ್ರವೇಶದ ಇ-ಹಾಜರಾತಿ ಸಾಬೀತುಪಡಿಸಿದ ಬಳಿಕ ನಿತ್ಯ ಸಂಜೆ ಕೆಲಸ ಮುಗಿಸಿದ ಬಳಿಕ ನಿರ್ಗಮನ ಹಾಜರಾತಿ ಸಾಬೀತುಪಡಿಸುವಂತೆ ಪುನರ್ವಸತಿ ಕಾರ್ಯಕರ್ತರಿಗೆ ನಿಯಮ ರೂಪಿಸಲಾಗಿದೆ. ಆದರೆ, ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಗ್ರಾಪಂ. ಸಿಬ್ಬಂದಿ ಇಲ್ಲದಿದ್ದಾಗ ಬಯೊಮೆಟ್ರಿಕ್ ವ್ಯವಸ್ಥೆ ಮೂಲಕ ನಿರ್ಗಮನ ಹಾಜರಾತಿ ಸಾಬೀತುಪಡಿಸುವುದು ಕಷ್ಟವಾಗುತ್ತಿದೆ ಎಂದು ಅವರು ವಾಸ್ತವಾಂಶ ಬಿಡಿಸಿ ಹೇಳಿದರು.
ತಮ್ಮ ವ್ಯಾಪ್ತಿಯ ವಿಕಲಚೇತನ ಫಲಾನುಭವಿಗಳಿಗೆ ಸೇವೆ ಒದಗಿಸುವ ಭಾಗವಾಗಿ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಿಗೆ ಪ್ರಯಾಣಿಸಿದ ಸಂದರ್ಭದಲ್ಲಿ ಸಂಜೆ ಎಷ್ಟೇ ಹೊತ್ತಾದರೂ ಆಯಾ ಗ್ರಾಪಂ. ಕಚೇರಿಗೆ ತಲುಪಿದ ಬಳಿಕ ನಿರ್ಗಮನ ಇ-ಹಾಜರಾತಿ ಮಾಡಲು ಸಾಧ್ಯವಾಗುತ್ತಿಲ್ಲ. ಇದು ಒಂದು ರೀತಿಯ ಸಮಸ್ಯೆಯಾದರೆ, ಮತ್ತೊಂದೆಡೆ, ಸಂಜೆ ವೇಳೆಗೆ ಪುನರ್ವಸತಿ ಕಾರ್ಯಕರ್ತರು ಗ್ರಾಪಂ. ಕಚೇರಿಗೆ ತಲುಪಿದ ನಂತರವೂ ಗ್ರಾಪಂ. ಸಿಬ್ಬಂದಿಯ ಅಲಭ್ಯತೆಯಿಂದ ಹಾಗೂ ಕೆಲವೊಮ್ಮೆ ವಿದ್ಯುತ್ ಸಮಸ್ಯೆಯಿಂದ ಇ-ಹಾಜರಾತಿ ಸಾಬೀತುಪಡಿಸುವುದು ಸಾಧ್ಯವಾಗುತ್ತಿಲ್ಲ. ಇಂತಹ ಎಲ್ಲ ಆಕಸ್ಮಿಕ ಸಂದರ್ಭಗಳಲ್ಲಿ ವಿ.ಆರ್.ಡಬ್ಲ್ಯುಗಳ ಒಂದು ದಿನದ ವೇತನ ಕಡಿತಗೊಳಿಸಲಾಗುತ್ತಿದೆ. ಇದರಿಂದಾಗಿ, ರಾಜ್ಯದ ಬಹುತೇಕ ವಿ.ಆರ್.ಡಬ್ಲ್ಯುಗಳು ಪ್ರತಿ ತಿಂಗಳು ತಮ್ಮದಲ್ಲದ ತಪ್ಪಿಗಾಗಿ ವೇತನ ಕಡಿತ ಶಿಕ್ಷೆಗೆ ಗುರಿಯಾಗುತ್ತಿದ್ದಾರೆ. ಹೀಗಾಗಿ, ವಿಕಲಚೇತನ ಪುನರ್ವಸತಿ ಕಾರ್ಯಕರ್ತರ ಕುಟುಂಬಗಳು ತೀವ್ರ ಸ್ವರೂಪದ ಆರ್ಥಿಕ ಮುಗ್ಗಟ್ಟು ಎದುರಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇಂಥದ್ದೇ ಸಮಸ್ಯೆಯನ್ನು ತಾಲೂಕು ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು (ಎಂ.ಆರ್.ಡಬ್ಲ್ಯು) ಹಾಗೂ ನಗರ ಪುನರ್ವಸತಿ ಕಾರ್ಯಕರ್ತರು (ಯು.ಆರ್.ಡಬ್ಲ್ಯು) ಸಹ ಅನುಭವಿಸುತ್ತಿದ್ದು, ಅವರ ಗೌರವಧನದಲ್ಲೂ ಪ್ರತಿ ತಿಂಗಳು ಕಡಿತಗೊಳಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಪಂ. ತಾಪಂ. ಹಾಗೂ ನಗರ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂ.ಆರ್.ಡಬ್ಲ್ಯು, ವಿ.ಆರ್.ಡಬ್ಲ್ಯು ಮತ್ತು ಯು.ಆರ್.ಡಬ್ಲ್ಯುಗಳ ಹಿತರಕ್ಷಣೆಗಾಗಿ ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಖುದ್ದು ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದಲೇ ಬಯೋಮೆಟ್ರಿಕ್ ಯಂತ್ರಗಳನ್ನು ಅಳವಡಿಸುವವರೆಗೆ ಪುನರ್ವಸತಿ ಕಾರ್ಯಕರ್ತರ ಗೌರವಧನ ಕಡಿತಗೊಳಿಸಬಾರದು ಎಂದು ಒತ್ತಾಯಿಸಿದರು.
ಒಂದುವೇಳೆ, ಇ-ಹಾಜರಾತಿ ಹೆಸರಿನಲ್ಲಿ ಅವೈಜ್ಞಾನಿಕವಾಗಿ ವಿಕಲಚೇತನ ಪುನರ್ವಸತಿ ಕಾರ್ಯಕರ್ತರ ಗೌರವಧನ ಕಡಿತಗೊಳಿಸುವುದನ್ನು ತಕ್ಷಣ ನಿಲ್ಲಿಸದೆ ಹೋದರೆ, ಮಕ್ಕಳ ಅಭಿವೃದ್ಧಿ ಖಾತೆ ಸಚಿವರಾಗಿರುವ ಶ್ರೀಮತಿ ಲಕ್ಷ್ಮಿ ಹೆಬ್ಬಾಳಕರ್ ಅವರ ಬೆಳಗಾವಿಯ ನಿವಾಸದ ಎದುರು ರಾಜ್ಯದ ಎಲ್ಲ ಪುನರ್ವಸತಿ ಕಾರ್ಯಕರ್ತರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಅನಿವಾರ್ಯವಾಗಲಿದೆ ಅವರು ಎಚ್ಚರಿಕೆ ನೀಡಿದರು.
ಜಾಗೃತ ಜನ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಮಹೇಶ್ ಕುಲಕರ್ಣಿ, ಜೈಭೀಮ ಕೊಳೆಗೇರಿ ನಿವಾಸಿಗಳ ಸಂಘದ ಅಧ್ಯಕ್ಷ ತುಳಸಿರಾಂ ಹಿರೊಳ್ಳಿ, ನವ ಕರ್ನಾಟಕ ಸಂಘದ ಸಂಚಾಲಕ ಖಾಸಿಂಸಾಬ್ ಐ.ಡೊಂಗರಗಾಂವ್, ರಾಜ್ಯ ಖಜಾಂಚಿ ರಾಜೇಂದ್ರ ಕಮಕನೂರ, ಶರಣು ಹತ್ತರಕಿ, ರೇವಣಸಿದ್ದಪ್ಪ, ಧರ್ಮಣ್ಣ ನವಣಿ, ನಾಗರಾಜ ನಂದೂರ ಉಪಸ್ಥಿತರಿದ್ದರು.