
ಕಲಬುರಗಿ:ಫೆ.19:ಅಗ್ಗದ ದರದಲ್ಲಿ ಉತ್ಕøಷ್ಟ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ಯುನೈಟೆಡ್ ಆಸ್ಪತ್ರೆ ಮಹತ್ತರ ಪಾತ್ರ ವಹಿಸಿದೆ ಹಾಗೂ ಕಲಬುರಗಿಯನ್ನು ಪ್ರಾದೇಶಿಕ ಆರೋಗ್ಯ ಹಬ್ ಆಗಿ ರೂಪಿಸುವಲ್ಲಿ ಈ ಆಸ್ಪತ್ರೆಯ ಕೊಡುಗೆ ಗಮನಾರ್ಹವಾಗಿದೆ ಎಂದು ಕಲಬುರಗಿ ಪೆÇಲೀಸ್ ಆಯುಕ್ತ ಎಸ್.ಡಿ. ಶರಣಪ್ಪ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಬುಧವಾರ ಯುನೈಟೆಡ್ ಆಸ್ಪತ್ರೆಯ 14ನೇ ವಾರ್ಷಿಕೋತ್ಸವದ ಅಂಗವಾಗಿ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ಉಚಿತ ಮೆಗಾ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಇಪ್ಪತ್ತು ವರ್ಷಗಳ ಹಿಂದೆ ಕಲಬುರಗಿಯಿಂದ ಗಂಭೀರ ಚಿಕಿತ್ಸೆಗಾಗಿ ಜನರು ಬೇರೆ ನಗರಗಳಿಗೆ ತೆರಳಬೇಕಾಗುತ್ತಿತ್ತು. ಅಪಘಾತ ಹಾಗೂ ತುರ್ತು ಚಿಕಿತ್ಸೆಗಳ ಕೊರತೆಯಿಂದ ಅನೇಕ ಪ್ರಾಣಹಾನಿಗಳು ಸಂಭವಿಸುತ್ತಿದ್ದವು. ಆದರೆ ಇಂದು ಯುನೈಟೆಡ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಶಸ್ತ್ರಚಿಕಿತ್ಸೆಗಳು ಹಾಗೂ ತೀವ್ರ ನಿಗಾ ಸೇವೆಗಳು ಲಭ್ಯವಿರುವುದರಿಂದ ಜನರು ತಮ್ಮದೇ ನಗರದಲ್ಲಿ ಚಿಕಿತ್ಸೆ ಉತ್ಕೃಷ್ಟ ದರ್ಜೆಯ ಆರೋಗ್ಯ ಸೇವೆಗಳನ್ನು ಕೈಗೆಟುಕುವ ದರಗಳಲ್ಲಿ ಪಡೆಯುತ್ತಿದ್ದಾರೆ,” ಎಂದು ಅವರು ಹೇಳಿದರು.
ಕಳೆದ 14 ವರ್ಷಗಳಲ್ಲಿ ಸುಮಾರು 40,000 ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಿರುವುದು ಆಸ್ಪತ್ರೆಯ ಮೇಲೆ ಜನರು ಇಟ್ಟಿರುವ ವಿಶ್ವಾಸಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ ಅವರು ಈ ಅಂಕಿ-ಅಂಶವೇ ಆಸ್ಪತ್ರೆಯ ಸೇವಾಭಾವ ಮತ್ತು ಆರೋಗ್ಯಕರ ಸಮಾಜ ನಿರ್ಮಾಣದ ಬದ್ಧತೆಯನ್ನು ತೋರಿಸುತ್ತದೆ ಎನ್ನುತ್ತಾ ಆಸ್ಪತ್ರೆಯು ಇನ್ನಷ್ಟು ಉನ್ನತ ಹಂತಕ್ಕೆ ಬೆಳೆಯಲಿ ಹಾಗೂ ಆ ಮೂಲಕ ಇನ್ನೂ ಹೆಚ್ಚಿನ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲಿ ಶುಭಾಶಯ ಕೋರಿದರು.
ಪೆÇಲೀಸ್ ಮತ್ತು ವೈದ್ಯ ವೃತ್ತಿಗಳ ನಡುವಿನ ಸಾಮ್ಯತೆಯನ್ನು ಉಲ್ಲೇಖಿಸಿದ ಅವರು, “ವೈದ್ಯರು ದೇಹದ ರೋಗಗಳ ವಿರುದ್ಧ ಹೋರಾಡಿ ಮಾನವ ಜೀವಗಳನ್ನು ಉಳಿಸುತ್ತಾರೆ. ಪೆÇಲೀಸರು ಅಪರಾಧಗಳಂತಹ ಸಮಾಜಿಕ ರೋಗಗಳ ವಿರುದ್ಧ ಹೋರಾಡಿ ಸಮಾಜವನ್ನು ರಕ್ಷಿಸುತ್ತಾರೆ. ಎರಡೂ ವೃತ್ತಿಗಳು ಆರೋಗ್ಯಕರ ಹಾಗೂ ಸುರಕ್ಷಿತ ಸಮಾಜ ನಿರ್ಮಾಣಕ್ಕೆ ಅಗತ್ಯವಾದವು,” ಎಂದರು.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಮಾತನಾಡಿ, ರಸ್ತೆ ಸುರಕ್ಷತೆ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮಗಳಲ್ಲಿ ಯುನೈಟೆಡ್ ಆಸ್ಪತ್ರೆ ಪೆÇಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿರುವುದನ್ನು ಶ್ಲಾಘಿಸಿದರು. “ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವುದು, ಪ್ರಥಮ ಚಿಕಿತ್ಸೆ ಕಿಟ್ಗಳು ಮತ್ತು ಹೆಲ್ಮೆಟ್ಗಳನ್ನು ವಿತರಿಸುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಆಸ್ಪತ್ರೆ ನಿರಂತರವಾಗಿ ಭಾಗವಹಿಸುತ್ತಿದೆ. ಪೆÇಲೀಸ್ ಸಿಬ್ಬಂದಿಗೂ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ನೀಡುತ್ತಿದೆ,” ಎಂದು ಹೇಳಿದರು.
ಯುನೈಟೆಡ್ ಆಸ್ಪತ್ರೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ವಿಕ್ರಮ್ ಸಿದ್ದಾರೆಡ್ಡಿ ಮಾತನಾಡಿ, 20 ಹಾಸಿಗೆಗಳ ಸಣ್ಣ ಆಸ್ಪತ್ರೆಯಿಂದ ಆರಂಭವಾದ ಈ ಸಂಸ್ಥೆ ಇಂದು ಕಲ್ಯಾಣ ಕರ್ನಾಟಕದ ಪ್ರಮುಖ ಬಹು ವಿಶೇಷತೆಗಳ ಆಸ್ಪತ್ರೆಯಾಗಿ ಬೆಳೆಯಿರುವುದನ್ನು ಸ್ಮರಿಸಿದರು.
“14 ವರ್ಷಗಳ ಹಿಂದೆ ಹಿರಿಯ ಮುತ್ಸದ್ದಿ ಮಲ್ಲಿಕಾರ್ಜುನ ಖರ್ಗೆ ಅವರು ಆಸ್ಪತ್ರೆಗೆ ಚಾಲನೆ ನೀಡಿದ್ದರು. ಆಗ ಸಮಯದಲ್ಲಿ ಕಲಬುರಗಿಯಲ್ಲಿ ಅಪಘಾತ ಮತ್ತು ತುರ್ತು ಚಿಕಿತ್ಸಾ ಸೌಲಭ್ಯಗಳ ಕೊರತೆಯಿಂದ ಅಫಘಾತಗಳಲ್ಲಿ ತೀವ್ರವಾಗಿ ಗಾಯಗೊಂಡವರು ಸಾಯುತ್ತಿದ್ದುದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಉನ್ನತ ಚಿಕಿತ್ಸೆಗಾಗಿ ಜನರು ಸೋಲಾಪುರ, ಹೈದರಾಬಾದ್ ಅಥವಾ ಬೆಂಗಳೂರುಗಳಿಗೆ ತೆರಳಬೇಕಾದ ಪರಿಸ್ಥಿತಿಯನ್ನು ಬದಲಿಸಬೇಕಾದ ಅನಿವಾರ್ಯತೆಯನ್ನು ವ್ಯಕ್ತಪಡಿಸಿದ್ದರು. ಆ ನಿಟ್ಟಿನಲ್ಲಿ ಯುನೈಟೆಡ್ ಆಸ್ಪತ್ರೆಯನ್ನು ಬೆಳೆಸಬೇಕು, ಅತ್ಯಾಧುನಿಕ ಸೇವೆಗಳನ್ನು ಅಗ್ಗದ ದರದಲ್ಲಿ ಒದಗಿಸುವ ಸಂಸ್ಥೆಯನ್ನಾಗಿ ಕಟ್ಟಬೇಕು ಎಂದು ಸೂಚಿಸಿದ್ದರು. ಕೆಲವೇ ವರ್ಷಗಳಲ್ಲಿ ನಾವು ಆ ಗುರಿಯನ್ನು ಸಾಧಿಸಿಬಿಟ್ಟೆವು,” ಎಂದು ಹೇಳಿದರು.
ಆಸ್ಪತ್ರೆಯಲ್ಲಿರುವ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು, ರೋಗಪತ್ತೆ ಸೌಲಭ್ಯಗಳು, ಮೋಡ್ಯೂಲರ್ ಕ್ಯಾಥ್ ಲ್ಯಾಬ್ ಹಾಗೂ ವಿಶೇಷ ತೀವ್ರ ನಿಗಾ ಘಟಕಗಳ ಬಗ್ಗೆ ಗಮನ ಸೆಳೆದ ಅವರು ಕಳೆದ ಹದಿನಾಲ್ಕು ವರ್ಷಗಳಲ್ಲಿ ಆಸ್ಪತ್ರೆಯು ಸಾವಿರಾರು ಅಮೂಲ್ಯ ಜೀವಗಳನ್ನು ಉಳಿಸಿದೆ ಎಂದರು.
ಇಡೀ ದಿನ ನಡೆದ ಮೆಗಾ ಆರೋಗ್ಯ ಶಿಬಿರದಲ್ಲಿ ಸಾವಿರಾರು ಜನರನ್ನು ತಜ್ಞ ವೈದ್ಯರು ಮತ್ತು ವಿಶೇಷಜ್ಞರು ಪರಿಶೀಲಿಸಿದರು. ಆಸ್ಪತ್ರೆ ನೀಡಿದ ಮಾಹಿತಿಯಂತೆ, 2,200ಕ್ಕೂ ಹೆಚ್ಚು ಹೊರರೋಗಿ (ಔPಆ) ಜನರು ತಪಾಸಣೆಗೆ ಒಳಗಾಗಿದ್ದು, ಎಂಆರ್‍ಐ, ಸಿಟಿ ಸ್ಕ್ಯಾನ್, 2ಡಿ ಎಕೊ, ಇಸಿಜಿ, ಯುಎಸ್‍ಜಿ, ಎಕ್ಸ್‍ರೇ ಹಾಗೂ ರಕ್ತ ಪರೀಕ್ಷೆಗಳು ಸೇರಿದಂತೆ ವಿವಿಧ ತನಿಖೆಗಳು ಉಚಿತವಾಗಿ ಮಾಡಿಸಲಾಯಿತು. ಶಿಬಿರದ ಸಂದರ್ಭದಲ್ಲಿ ವೈದ್ಯರು ಸೂಚಿಸಿದ ಔಷಧಿಗಳನ್ನು ಸಹ ಉಚಿತವಾಗಿ ವಿತರಿಸಲಾಯಿತು.
ಆಸ್ಪತ್ರೆಯ ಹಿರಿಯ ನೇತ್ರ ತಜ್ಞೆ ಹಾಗೂ ನಿರ್ದೇಶಕಿ ಡಾ. ವೀಣಾ ಸಿದ್ದಾರೆಡ್ಡಿ; ಮೂಳೆ ಶಸ್ತ್ರಚಿಕಿತ್ಸಕರಾದ ಡಾ. ರಾಜು ಕುಲಕರ್ಣಿ ಮತ್ತು ಡಾ. ನಿಶಾಂತ್ ಜಾಜಿ; ಸಾಮಾನ್ಯ ಶಸ್ತ್ರಚಿಕಿತ್ಸಕರಾದ ಡಾ. ಮೊಹಮ್ಮದ್ ಅಬ್ದುಲ್ ಬಸೀರ್; ಫಿಜಿಷಿಯನ್ನರಾದ ಡಾ. ವೀರೇಶ್ ಸಲಗಾರ್, ಡಾ. ದಯಾನಂದ ರೆಡ್ಡಿ ಮತ್ತು ಡಾ. ವಹೀದ್ ಅಲಿ; ಮಕ್ಕಳ ತಜ್ಞರಾದ ಡಾ. ಪ್ರಶಾಂತ್ ಕುಲಕರ್ಣಿ; ತೀವ್ರ ನಿಗಾ ತಜ್ಞರಾದ ಡಾ. ಸುದರ್ಶನ್ ಲಾಖೆ, ಡಾ. ಮಂಜುನಾಥ್ ರೆಡ್ಡಿ, ಡಾ. ಆನಂದ್ ಮತ್ತು ಡಾ. ರತೇಶ್; ನರಶಸ್ತ್ರಚಿಕಿತ್ಸಕರಾದ ಡಾ. ವಿನಯಸಾಗರ್ ಶರ್ಮಾ; ನರರೋಗ ತಜ್ಞರಾದ ಡಾ. ಅನಿಲ್ ಪಾಟೀಲ; ಮೂತ್ರರೋಗ ತಜ್ಞರಾದ ಡಾ. ಕೈಲಾಶ್ ಬನಾಲೆ; ಓಎಂಎಫ್ ಶಸ್ತ್ರಚಿಕಿತ್ಸಕರಾದ ಡಾ. ಯು.ಕೆ. ಜೋಶಿ; ಸ್ತ್ರೀರೋಗ ತಜ್ಞರಾದ ಡಾ. ಶ್ವೇತಾ ಆಳಂದ್; ರೇಡಿಯಾಲಜಿಸ್ಟ್ ಡಾ. ರಾಮಚಾರಿ; ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಕರಾದ ಡಾ. ಪವನ ಪಾಟೀಲ; ಜೀಣಾರ್ಂಗ ತಜ್ಞರಾದ ಡಾ. ಶ್ರನಾಥ್ ಪಾಟೀಲ; ನೇತ್ರ ತಜ್ಞೆಯರಾದ ಡಾ. ಸಫೀಹಾ ಮತ್ತು ಡಾ. ರೇಣುಕಾ; ನೇತ್ರತಜ್ಞೆಯರಾದ ಡಾ. ಸಫೀಹಾ ಮತ್ತು ಡಾ. ರೇಣುಕಾ; ಫಿಜಿಯೋಥೆರೆಪಿಸ್ಟ್ ಡಾ. ಅಬ್ದುಲ್ ಹಕೀಮ್ ಸೇರಿದಂತೆ ಇತರ ಹಿರಿಯ ವೈದ್ಯರು ಉಪಸ್ಥಿತರಿದ್ದರು.

























