Home Lead News ಕದನ ವಿರಾಮ

ಕದನ ವಿರಾಮ

ಹೋರ್ಮುಜ್ ಜಲಸಂಧಿ ಮುಕ್ತಕ್ಕೂ ಅಸ್ತು

ವಾಷಿಂಗ್ಟನ್/ಟೆಹರಾನ್, ಏ. ೮- ಮಧ್ಯಪ್ರಾಚ್ಯ ಸಂಘರ್ಷಕ್ಕೆ ತಾತ್ಕಾಲಿಕ ವಿರಾಮ ಬಿದ್ದಿದ್ದು, ಅಮೆರಿಕ ಮತ್ತು ಇರಾನ್ ಷರತ್ತು ಬದ್ಧವಾದ ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ.


ಈ ಕದನ ವಿರಾಮದಿಂದ ಕಳೆದ ೩೯ ದಿನಗಳ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧಕ್ಕೆ ಅಲ್ಪ ವಿರಾಮ ಬಿದ್ದಿದೆ.


ಈ ಕದನ ವಿರಾಮ ಷರತ್ತು ಬದ್ಧವಾಗಿದ್ದು, ಅಮೆರಿಕ ಮುಂದಿಟ್ಟ ೧೫ ಪ್ರಸ್ತಾವಗಳನ್ನು ಪರಿಷ್ಕರಿಸಿರುವ ಇರಾನ್ ೧೦ ಷರತ್ತುಗಳನ್ನು ವಿಧಿಸಿ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದೆ. ಜತೆಗೆ ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಲು ಒಪ್ಪಿಗೆ ನೀಡಿದೆ.


ಈ ಕದನ ವಿರಾಮದ ಮೂಲಕ ಅಮೆರಿಕ-ಇರಾನ್ ಪರಸ್ಪರ ಮಾತುಕತೆಗೆ ಮುಂದಾಗಿವೆ.


ಕದನ ವಿರಾಮ ಘೋಷಣೆಯಾಗುತ್ತಿದ್ದಂತೆಯೇ ಅಮೆರಿಕ ಇರಾನ್ ಮೇಲೆ ದಾಳಿ ನಡೆಸದಿರಲು ಒಪ್ಪಿದ್ದು, ಇರಾನ್ ಸಹ ತನ್ನ ಎಲ್ಲಾ ಮಿಲಿಟರಿ ಘಟಕಗಳಿಗೆ ಮಧ್ಯಪ್ರಾಚ್ಯ ದೇಶಗಳ ಮೇಲಿನ ದಾಳಿಯನ್ನು ನಿಲ್ಲಿಸುವಂತೆ ಸೂಚನೆ ನೀಡಿದೆ.


ಇರಾನ್ ಸರ್ವೋಚ್ಛ ನಾಯಕ ಮೊಜ್ತಾಬಾ ಖಮೇನಿ ಕದನ ವಿರಾಮವು ಯುದ್ಧದ ಅಂತ್ಯವಲ್ಲ. ಶತ್ರು ದೇಶಗಳ ವರ್ತನೆ ಮೇಲೆ ನಮ್ಮ ನಿರ್ಧಾರ ಇರುತ್ತದೆ. ನಮ್ಮ ಬೆರಳು ಯಾವಾಗಲೂ ಟ್ರಿಗರ್ ಮೇಲೆ ಇರುತ್ತದೆ ಎಂದು ಹೇಳುವ ಮೂಲಕ ಕದನ ವಿರಾಮವನ್ನು ಅಮೆರಿಕ ಉಲ್ಲಂಘಿಸಿದರೆ ಅದಕ್ಕೆ ಪ್ರತ್ಯುತ್ತರ ಕೊಡಲು ನಾವು ಸಿದ್ಧ ಎಂಬ ಸಂದೇಶವನ್ನು ರವಾನಿಸಿದ್ದಾರೆ.


ಷರತ್ತುಗಳು

  • ಇರಾನ್ ಮತ್ತು ಅದರ ಮೂಲ ಸೌಕರ್ಯಗಳ ಮೇಲೆ ಆಕ್ರಮಣ ನಿಲ್ಲಿಸಬೇಕು.
  • ಯುದ್ಧದಿಂದ ಇರಾನ್‌ಗೆ ಆಗಿರುವ ಹಾನಿಗೆ ಸಂಪೂರ್ಣ ಪರಿಹಾರ ನೀಡಬೇಕು.
  • ಇರಾನ್ ಮತ್ತು ವಿದೇಶಿ ಸ್ವತ್ತುಗಳ ಮೇಲಿನ ಪ್ರಾಥಮಿಕ ಮತ್ತು ದ್ವಿತೀಯ ನಿರ್ಬಂಧಗಳನ್ನು ತೆಗೆದು ಹಾಕಬೇಕು.
  • ಇರಾನ್‌ನ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವುದನ್ನು ಒಪ್ಪಿ ಮುಂದುವರೆಯಬೇಕು
  • ಮಧ್ಯ ಪ್ರಾಚ್ಯದಿಂದ ಅಮೆರಿಕ ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳಬೇಕು.
  • ಲೆಬನಾನ್ ಸೇರಿದಂತೆ ಎಲ್ಲ ಕಡೆ ಯುದ್ಧವನ್ನು ನಿಲ್ಲಿಸಬೇಕು.
  • ಇರಾನ್ ವಿರುದ್ಧದ ವಿಶ್ವ ಸಂಸ್ಥೆಯ ಎಲ್ಲಾ ನಿರ್ಣಯಗಳನ್ನು ರದ್ದು ಮಾಡಬೇಕು.
  • ಐಎಇಎ ಆಡಳಿತ ಮಂಡಳಿಯ ಎಲ್ಲಾ ನಿರ್ಣಯಗಳನ್ನು ಮುಕ್ತಾಯಗೊಳಿಸಬೇಕು.
  • ಹೊರ್ಮುಜ್ ಜಲಸಂಧಿಯು ಇರಾನ್ ಸೇನೆಯ ನಿರ್ವಹಣೆಯಲ್ಲೇ ನಡೆಯುತ್ತದೆ.
    ಹೀಗೆ ೧೦ ಷರತ್ತುಗಳನ್ನು ಇರಾನ್ ಅಮೆರಿಕ ಮುಂದಿಟ್ಟಿದೆ.
    ಇರಾನ್ ಷರತ್ತುಗಳ ಬಗ್ಗೆ ಅಮೆರಿಕ ಇನ್ನು ಸಂಪೂರ್ಣ ಒಪ್ಪಿಗೆ ನೀಡಿಲ್ಲವಾದರೂ ಕದನ ವಿರಾಮಕ್ಕೆ ಒಪ್ಪಿ ಇರಾನ್ ಮೇಲಿನ ದಾಳಿಯನ್ನು ನಿಲ್ಲಿಸಿದೆ.
    ಅಮೆರಿಕ-ಇರಾನ್ ನಡುವಿನ ಈ ಕದನ ವಿರಾಮದಲ್ಲಿ ಮಧ್ಯಸ್ಥಿಕೆ ವಹಿಸಿದ್ದ ಪಾಕಿಸ್ತಾನದ ಪ್ರಧಾನಿ ಶಹಬಾದ್ ಷರೀಫ್ ಅವರು ಸಹ ಇಂದು ಮುಂಜಾನೆಯಿಂದಲೇ ಅಮೆರಿಕ-ಇರಾನ್ ನಡುವೆ ಕದನ ವಿರಾಮ ಜಾರಿಗೆ ಬಂದಿದೆ. ತೈಲ ಮತ್ತು ಇತರ ರಫ್ತುಗಳಿಗೆ ಪ್ರಮುಖ ಹಡಗು ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಇರಾನ್ ಒಪ್ಪಿಕೊಂಡಿದೆ. ಇರಾನ್ ಮೇಲೆ ಬಾಂಬ್ ದಾಳಿ ಮಾಡದಿರಲು ಅಮೆರಿಕವು ಸಮ್ಮತಿಸಿದೆ ಎಂದು ಹೇಳಿದ್ದಾರೆ.
    ಕದನ ವಿರಾಮದ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕ ಇರಾನ್‌ಗೆ ಸಂಬಂಧಿಸಿದಂತೆ ತನ್ನ ಮಿಲಿಟರಿ ಉದ್ದೇಶಗಳನ್ನು ಪೂರೈಸಿದೆ. ತಾತ್ಕಾಲಿಕ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

  • ಕದನ ವಿರಾಮಕ್ಕೆ ಇಸ್ರೇಲ್ ಬೆಂಬಲ

  • ಇರಾನ್ ಮತ್ತು ಅಮೆರಿಕ ನಡುವೆ ಕದನ ವಿರಾಮಕ್ಕೆ ಇಸ್ರೇಲ್ ಬೆಂಬಲ ನೀಡಿದ್ದು, ಅಮೆರಿಕ ಮತ್ತು ಇರಾನ್ ಶಾಶ್ವತ ಶಾಂತಿ ಸೂತ್ರ ರೂಪಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಇರಾನ್ ಮೇಲಿನ ಅಮೆರಿಕ ದಾಳಿಯನ್ನು ಸ್ಥಗಿತಗೊಳಿಸುವ ಅಮೆರಿಕದ ನಿರ್ಧಾರವನ್ನು ಬೆಂಬಲಿಸುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

  • ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ನೆತನ್ಯಾಹು, ಇರಾನ್ ತಕ್ಷಣವೇ ಹೊರ್ಮುಜ್ ಜಲಸಂಧಿಯನ್ನು ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸುವ ಷರತ್ತಿನ ಮೇಲೆ ಇರಾನ್ ಮೇಲಿನ ದಾಳಿಯನ್ನು ೨ ವಾರಗಳ ಕಾಲ ನಿಲ್ಲಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರವನ್ನು ಬೆಂಬಲಿಸುತ್ತೇವೆ ಎಂದಿದ್ದಾರೆ.

  • ಅಮೆರಿಕ, ಇಸ್ರೇಲ್ ಹಾಗೂ ಅರಬ್ ರಾಷ್ಟ್ರಗಳು ಸೇರಿದಂತೆ ಇಡೀ ಜಗತ್ತಿಗೆ ಇರಾನ್‌ನಿಂದ ಇನ್ನು ಮುಂದೆ ಪರಮಾಣು, ಕ್ಷಿಪಣಿ ಮತ್ತು ಭಯೋತ್ಪಾದನೆಯ ಬೆದರಿಕೆ ಇಲ್ಲದಂತೆ ಮಾಡುವ ಅಮೆರಿಕದ ಪ್ರಯತ್ನವನ್ನು ಇಸ್ರೇಲ್ ಬೆಂಬಲಿಸುತ್ತದೆ. ಆದರೆ ಇರಾನ್ ಬೆಂಬಲಿತ ಹಿಜ್ಬುಲ್ಲಾ ಸಂಘಟನೆಯ ಬೆದರಿಕೆಯನ್ನು ಹತ್ತಿಕ್ಕುವ ಉದ್ದೇಶದಿಂದ ದಕ್ಷಿಣ ಲೆಬನಾಲ್‌ನಲ್ಲಿ ಆಕ್ರಮಣಕಾರಿ ಕಾರ್ಯಾಚರಣೆಯನ್ನು ಮುಂದುವರೆಸುತ್ತೇವೆ. ಎರಡು ವಾರಗಳ ಕದನ ವಿರಾಮವು ಲೆಬನಾನ್‌ನ್ನು ಒಳಗೊಂಡಿರುವುದಿಲ್ಲ ಎಂದು ಇಸ್ರೇಲ್ ಸ್ಪಷ್ಟಪಡಿಸಿದೆ.

  • ಷೇರುಪೇಟೆಯಲ್ಲಿ ಗೂಳಿ ಓಟ

  • ಮಧ್ಯಪ್ರಾಚ್ಯ ಯುದ್ಧದಿಂದ ಕರಡಿ ಕುಣಿತ ಅನುಭವಿಸಿದ್ದ ಷೇರುಪೇಟೆಯಲ್ಲಿ ಇಂದು ಗೂಳಿ ಓಟ ಕಂಡಿದ್ದು, ಅಮೆರಿ-ಇರಾನ್ ನಡುವಿನ ಯುದ್ಧ ವಿರಾಮ ಘೋಷಣೆಯಾದ ಬೆನ್ನಲ್ಲೆ ಜಾಗತಿಕ ಷೇರು ಪೇಟೆಯಲ್ಲಿ ಗೂಳಿ ಓಟ ಆರಂಭವಾಗಿದೆ.

  • ಯುದ್ಧದ ಕಾರಣದಿಂದ ಷೇರು ಪೇಟೆಯಲ್ಲಿ ಕುಸಿತ ಅನುಭವಿಸಿ ಹೂಡಿಕೆದಾರರು ಕಳೆದ ಕೆಲವು ದಿನಗಳಿಂದ ಲಕ್ಷಾಂತರ ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದರು.
    ಕದನ ವಿರಾಮ ಘೋಷಣೆಯಾಗುತ್ತಿದ್ದಂತೆಯೇ ಷೇರುಗಳು ಏರುಮುಖಗೊಂಡಿವೆ.

  • ಕಚ್ಚಾತೈಲ ಬೆಲೆ ಕುಸಿತ

  • ಅಮೆರಿಕ-ಇರಾನ್ ನಡುವೆ ಕದನ ವಿರಾಮ ಘೋಷಣೆಯಾಗುತ್ತಿದ್ದಂತೆಯೇ ಕಚ್ಚಾತೈಲ ಬೆಲೆಯೂ ಇಳಿಮುಖವಾಗಿದ್ದು, ಒಂದು ಬ್ಯಾರಲ್ ಕಚ್ಚಾತೈಲ ಬೆಲೆ ೧೦೦ ಡಾಲರ್‌ಗಳಿಗಿಂತ ಕಡಿಮೆಯಾಗಿದೆ.
    ಮಧ್ಯಪ್ರಾಚ್ಯ ಯುದ್ಧದಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಬ್ಯಾರಲ್‌ಗೆ ೧೧೩ ಡಾಲರ್ ತಲುಪಿತ್ತು. ಕದನ ವಿರಾಮದ ನಂತರ ಕಚ್ಚಾತೈಲ ದರ ಪ್ರತಿ ಬ್ಯಾರಲ್‌ಗೆ ೯೪ ಡಾಲರ್‌ಗೆ ಇಳಿಕೆಯಾಗಿದೆ.