ಇಬ್ಬರು ಅಂತರ್‍ರಾಜ್ಯ ಕಳ್ಳರ ಬಂಧನ: 17.50 ಲಕ್ಷ ರೂ ಮೌಲ್ಯದ ನಗನಾಣ್ಯ ವಶ

ಕಲಬುರಗಿ,ಫೆ.10: ಸೇಡಂ ತಾಲೂಕಿನ ಭೂತಪೂರ ಗ್ರಾಮದ ಮನೆಗಳ್ಳತನದಲ್ಲಿ ಭಾಗಿಯಾಗಿದ್ದ ಇಬ್ಬರು ಅಂತರ್ ರಾಜ್ಯ ಕಳ್ಳರನ್ನು ಬಂಧಿಸಿದ ಮುಧೋಳ ಠಾಣೆ ಪೊಲೀಸರು ಬಂಧಿತರಿಂದ 17.50 ಲಕ್ಷ ರೂ ಮೌಲ್ಯದ ಬೆಳ್ಳಿ ಬಂಗಾರದ ಆಭರಣ ಮತ್ತು ಕೃತ್ಯಕ್ಕೆ ಬಳಸಿದ ಮೋಟರ್ ಸೈಕಲ್ ವಶಪಡಿಸಿಕೊಂಡಿದ್ದಾರೆ ಎಸ್ಪಿ ಅಡ್ಡೂರು ಶ್ರೀನಿವಾಸಲು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಿಲಾರಕೋಟ ಗ್ರಾಮದ ಶ್ರೀನಿವಾಸ ಸಾಯಪ್ಪ ಬೈರಗೊಂಡ ಮತ್ತು ನವೀನ ನರಸಪ್ಪ ಕುರುಕು ಬಂಧಿತ ಆರೋಪಿಗಳು.
ಕಳೆದ ಜನವರಿ 29 ರಂದು ಭೂತಪೂರ ಗ್ರಾಮದ ಕಾಶಿನಾಥ ಏನಕಿ ಎಂಬುವವರ ಮನೆಯಲ್ಲಿ ಅಲ್ಮಾರಿ ಮುರಿದು 113 ಗ್ರಾಮ್ ಚಿನ್ನ,444 ಗ್ರಾಮ್ ಬೆಳ್ಳಿ ಮತ್ತು 10 ಸಾವಿರ ರೂ ನಗದು ಹಣ ಕಳ್ಳರು ದೋಚಿಕೊಂಡ ಹೋದ ಬಗ್ಗೆ ಮುಧೋಳ ಠಾಣೆಗೆ ದೂರು ಸಲ್ಲಿಸಲಾಗಿತ್ತು.
ಕಳ್ಳರ ಪತ್ತೆಗಾಗಿ ಚಿಂಚೋಳಿ ಉಪವಿಭಾಗದ ಡಿವೈಎಸ್ಪಿ ಸಂಗಮನಾಥ ಹಿರೇಮಠ ಅವರ ಮಾಗದರ್ಶನದಲ್ಲಿ ಮುಧೋಳ ಪಿಐ ದೌಲತ ಎನ್.ಕೆ ಅವರ ನೇತೃತ್ವದಲ್ಲಿ ಪ್ರೋ. ಪಿಎಸ್‍ಐ ಮುರುಡೇಶ್ವರ ,ಎಎಸ್‍ಐ ಭೀಮಪ್ಪ ಮತ್ತು ಸಿಬ್ಬಂದಿಯವರನ್ನು ಒಳಗೊಂಡ ತಂಡ ರಚಿಸಲಾಗಿತ್ತು.
ತಂಡವು ಶಿಲಾರಕೋಟ ಬಸ್ ನಿಲ್ದಾಣದ ಹತ್ತಿರ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಎಸ್ಪಿ ಅಡ್ಡೂರು ಶ್ರೀನಿವಾಸಲು ಅವರು ವಿವರಿಸಿದರು