
ಕಲಬುರಗಿ,ಸೆ.11-ದುಶ್ಚಟಗಳಿಗೆ ಹಣ ಹೊಂದಿಸಲು ಒಂಟಿ ಮಹಿಳೆಯರನ್ನು ಗುರಿಯಾಗಿಸಿ ಸುಲಿಗೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಡಣಿ ಗ್ರಾಮದ ಕಲ್ಲಾಲಿಂಗ ಅಲಿಯಾಸ್ ಕಲ್ಮೇಶ ತಂದೆ ಬಸವರಾಜ ದ್ಯಾಮನ್ (27) ಮತ್ತು ಕಡಣಿ ತಾಂಡಾದ ಮಹೇಶ ತಂದೆ ಪಾಂಡು ರಾಠೋಡ್ (27) ಎಂಬುವವರನ್ನು ಬಂಧಿಸಿ 2 ಲಕ್ಷ ರೂ.ಮೌಲ್ಯದ 20 ಗ್ರಾಂ.ತೂಕದ 2 ಬಂಗಾರದ ತಾಳಿ ಸರ ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ಮತ್ತು ಇತರೆ ವಸ್ತುಗಳನ್ನು ಜಪ್ತಿ ಮಾಡಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.
ಇವರು ತಮ್ಮ ದುಶ್ಚಟಗಳಿಗೆ ಹಣ ಹೊಂದಿಸಲು ಬುರ್ಖಾ ಧರಿಸಿಕೊಂಡು ಒಂಟಿ ಮಹಿಳೆಯರನ್ನು ಸುಲಿಗೆ ಮಾಡುತ್ತಿದ್ದರು ಎಂದು ತಿಳಿಸಿದರು.
ಕಡಣಿ ಗ್ರಾಮದ ಕೊಳ್ಳಾ ಹೊಲದಲ್ಲಿ ಮಹಿಳೆಯೊಬ್ಬರು ತರಕಾರಿ ಕಡಿಯುತ್ತಿದ್ದಾಗ ಬುರ್ಖಾ ಧರಿಸಿಕೊಂಡು ಬಂದ ಅಪರಿಚಿತ ವ್ಯಕ್ತಿಯೊಬ್ಬ ಅವರ ಕೊರಳಲ್ಲಿನ 80 ಸಾವಿರ ರೂ.ಮೌಲ್ಯದ 12 ಗ್ರಾಂ.ಬಂಗಾರದ ಮಂಗಳಸೂತ್ರವನ್ನು ಕಸಿದುಕೊಂಡು ಹೋಗಿದ್ದ. ಈ ಸಂಬಂಧ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೆ ಫರಹತಾಬಾದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಇನ್ನೊಂದು ಸುಲಿಗೆ ಪ್ರಕರಣದ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಲು ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ಹೆಚ್.ನಾಯಕ್ ಅವರ ಮಾರ್ಗದರ್ಶನದಲ್ಲಿ ಸಬ್-ಅರ್ಬನ್ ಉಪ ವಿಭಾಗದ ಎಸಿಪಿ ಡಿ.ಜಿ.ರಾಜಣ್ಣ ಅವರ ನೇತೃತ್ವದಲ್ಲಿ ಫರಹತಾಬಾದ ಪಿಐ ಮಲ್ಲಿಕಾರ್ಜುನ ಇಕ್ಕಳಕಿ, ಎಎಸ್ಐ ಅಶೋಕ, ಸಿಬ್ಬಂದಿಗಳಾದ ತುಕಾರಾಮ, ಕಲ್ಯಾಣಕುಮಾರ, ಆನಂದ, ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ತನಿಖೆ ನಡೆಸಿ ಇಬ್ಬರು ಸುಲಿಗೆ ಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಸುಲಿಗೆಕೋರರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ಅವರು ಶ್ಲಾಘಿಸಿದರು.