
ಮೃತರ ಸಂಖ್ಯೆ ೯ಕ್ಕೆ ಏರಿಕೆ
ಹಾಸನ,ಸೆ.೧೩-ಗಣೇಶ ವಿಸರ್ಜನೆ ಸಂಭ್ರಮದಲ್ಲಿದ್ದವರ ಮೇಲೆ ರಕ್ಕಸನಂತೆ ನುಗ್ಗಿದ್ದ ಟ್ರಕ್‌ಗೆ ಸಿಲುಕಿ ಬಲಿಯಾದವರ ಸಂಖ್ಯೆ ೯ಕ್ಕೇರಿದೆ. ಈ ಘೋರ ದುರಂತದಲ್ಲಿ ಮೃತಪಟ್ಟವರಲ್ಲಿ ಯುವಕರೇ ಹೆಚ್ಚಾಗಿದ್ದಾರೆ. ಮನೆಗೆ ಆಧಾರವಾಗಬೇಕಿದ್ದ ಯುವಕರ ಭೀಕರ ಅಂತ್ಯವಾಗಿದೆ. ಮಕ್ಕಳ ಕಳೆದುಕೊಂಡ ಹೆತ್ತವರ ಕಣ್ಣೀರ ಕೋಡಿ ಒಡೆದಿದೆ.
ಕುಟುಂಬದವರ ಆಕ್ರಂದನ
೧೭, ೧೯, ೨೩, ೨೫ ವರ್ಷ ಸಾಯುವ ವಯಸ್ಸು ಅಲ್ಲ. ಎದೆಯುದ್ದ ಬೆಳೆದು ನಿಂತಿದ್ದ ಮಕ್ಕಳು ಮನೆಗೆ ಆಧಾರವಾಗಬೇಕಿದ್ದರು. ಆದರೆ ನಿನ್ನೆ ರಾತ್ರಿ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮೂಸಳೆ ಹೊಸಳ್ಳಿ ಬಳಿ ಸಂಭವಿಸಿದ ದುರಂತ ಹಲವು ಯುವಕರ ಬದುಕನ್ನೇ ಕಿತ್ತುಕೊಂಡಿದೆ.ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಹುಟ್ಟು ಹಬ್ಬದಂದೇ ಸಾವು:
ಮೃಥ ಮಿಥುನ್, ವಯಸ್ಸು ಇನ್ನು ೨೨ ವರ್ಷ ಅಷ್ಟೇ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದವನು.ಹೊಳೆನರಸೀಪುರದಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ನಿನ್ನೆ ರಾತ್ರಿಯಷ್ಟೇ ತನ್ನ ಬರ್ತಡೇ ಆಚರಿಸಿಕೊಂಡಿದ್ದ. ಸ್ನೇಹಿತರು ಕೇಕ್‌ಕಟ್‌ಮಾಡಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು.
ಹುಟ್ಟುಹಬ್ಬ ಸಂಭ್ರಮದಲ್ಲೇ ಮೂಳೆಹಸಹಳ್ಳಿಯ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಹೆಜ್ಜೆಹಾಕಲು ತೆರಳಿದ್ದ. ಆದರೆ ಯಮಸ್ವರೂಪಿಯಂತೆ ನುಗ್ಗಿಬಂದ ಟ್ರಕ್ ಈತನ ಜೀವವನ್ನೇ ಬಲಿ ತೆಗೆದುಕೊಂಡಿದೆ. ಈತನ ಪಾಲಿಗೆ ಹುಟ್ಟಿದ ಹಬ್ಬದ ದಿನವೇ ಸಾವಿನ ಕದ ತಟ್ಟಿದ್ದಾನೆ.
ಹಬ್ಬಕ್ಕೆ ಹೋದ ಮಗ ಬಲಿ:
ಯುವಕ ಮಿಥುನ್‌ದು ಒಂದು ಕಥೆಯಾದರೆ, ೧೭ ವರ್ಷದ ಈಶ್ವರ ಎನ್ನುವ ಬಾಲಕನದ್ದು ಮತ್ತೊಂದು ಕಥೆ. ಹೊಳೆನರಸೀಪುರದ ಢಣಾಯಕನಹಳ್ಳಿ ಗ್ರಾಮದ ಈತ ಹಾಸನದ ಪ್ರೈವೇಟ್ ಕಾಲೇಜಿನಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದ.ನಿನ್ನೆ ಇವರ ಊರಲ್ಲಿ ಹಬ್ಬ ಇತ್ತು.
ಮಗನಿಗೆ ಫೋನ್ ಮಾಡಿದ್ದ ಅಪ್ಪ ಹಬ್ಬಕ್ಕೆ ಮನೆಗೆ ಬಾ ಅಂತಾ ಕರೆದಿದ್ದರು. ಆದರೆ ಮಿಥುನ್ ಆರ್ಕೆಸ್ಟ್ರಾ ಇದೆ. ಗಣೇಶ ಮೆರವಣಿಗೆ ನೋಡಿಕೊಂಡು ಬರುವೆ ಎಂದು ಹೇಳಿದ್ದ. ವಿಧಿಯಾಟಕ್ಕೆ ಈತನೂ ಟ್ರಕ್ ಹರಿದು ಬಲಿಯಾಗಿದ್ದಾನೆ. ಮನೆಗೆ ಬರ್ತೀನಿ ಅಂದಿದ್ದ ಮಗ ಈಗ ಬದುಕಿಲ್ಲ ಎಂದು ತಂದೆ ರವಿ ಅವರು ಗೋಳಾಡಿದ ದೃಶ್ಯ ಮನಕಲಕುವಂತಿತ್ತು.
ಇನ್ನು ಟ್ರಕ್ ಹರಿದು ಕಬ್ಬಿನಹಳ್ಳಿ ಗ್ರಾಮದ ೨೫ ವರ್ಷದ ಕುಮಾರ್ ಮತ್ತು ೨೫ ವರ್ಷದ ಪ್ರವೀಣ್ ಎನ್ನುವರು ಕೊನೆಯುಸಿರೆಳೆದಿದ್ದಾರೆ. ಆರ್ಕೆಸ್ಟ್ರಾ ನೋಡಿ, ಗಣೇಶವಿಸರ್ಜನೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಇವರಿಬ್ಬರು ದುರಂತ ಅಂತ್ಯಕಂಡಿದ್ದಾರೆ.
ಮೂವರು ಸ್ಥಳೀಯರು:
ಈವರೆಗೆ ದುರಂತದಲ್ಲಿ ಮೃತರ ಸಂಖ್ಯೆ ೯ಕ್ಕೆ ಏರಿಕೆಯಾಗಿದೆ. ಈ ಪೈಕಿ ೬ ಜನ ಸ್ಥಳೀಯರು, ಮೂವರು ವಿದ್ಯಾರ್ಥಿಗಳಾಗಿದ್ದಾರೆ. ಹಾಸನದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಚಿಕ್ಕಮಗಳೂರು ಜಿಲ್ಲೆ ಮರ್ಲೆಯ ಮಾಣೇಹಳ್ಳಿಯ ಸುರೇಶ್, ಚಿತ್ರದುರ್ಗ ಜಿಲ್ಲೆ ಹೊಸದುರ್ಗದ ಮಿಥುನ್, ಅಂತಿಮ ಬಿಇ ಓದುತ್ತಿದ್ದ ಬಳ್ಳಾರಿಯ ಪ್ರವೀಣ್ ಕುಮಾರ್ ಮೃತಪಟ್ಟಿದ್ದಾರೆ. ಹಾಸನದ ಹಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹಗಳನ್ನು ಇರಿಸಲಾಗಿದ್ದು, ಪೋಷಕರ ರೋದನ ಕರುಳು ಕಿವುಚುವಂತಿದೆ.
ಪೊಲೀಸರ ನಿರ್ಲಕ್ಷ್ಯ:
ಇನ್ನು ದುರಂತಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು ಇದಕ್ಕೆಲ್ಲ ಪೊಲೀಸರ ನಿರ್ಲಕ್ಷ್ಯವೇ ಕಾರಣ ಅಂತೇಳಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಮಾಜಿ ಸಚಿವ ಹೆಚ್‌ಡಿ ರೇವಣ್ಣ, ಎಂಎಲ್‌ಸಿ ಸೂರಜ್ ರೇವಣ್ಣ, ಹಾಸನ ಸಂಸದ ಶ್ರೇಯಸ್ ಪಟೇಲ್ ದೌಡಾಯಿಸಿದ್ದರು ಈ ವೇಳೆ ಪೊಲೀಸರ ವೈಫಲ್ಯದಿಂದಲೇ ಈ ಘಟನೆ ನಡೆದಿದೆ ಎಂದು ಸೂರಜ್ ರೇವಣ್ಣ ಆರೋಪಿಸಿದರು. ಸಂಸದ ಶ್ರೇಯಸ್ ಪಟೇಲ್ ಅಪಘಾತದ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಕಾಲೇಜಿಗೆ ರಜೆ
ಗಣಪತಿ ಮೆರವಣಿಗೆ ವೇಳೆ ಕ್ಯಾಂಟರ್ ಹರಿದು ಸಾವನ್ನಪ್ಪಿದ ೯ ಮಂದಿಯಲ್ಲಿ ತಮ್ಮ ಕಾಲೇಜಿನ ವಿದ್ಯಾರ್ಥಿ ಸೇರಿದ್ದರಿಂದ ಮೊಸಳೆ ಹೊಸಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ.
ಅಪಘಾತದಲ್ಲಿ ಮೃತರಾದ ಕಾಲೇಜಿನ ವಿದ್ಯಾರ್ಥಿ ರಾಜೇಶ್ ಸಾವಿಗೆ ಕಂಬನಿ ಮಿಡಿದಿರುವ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಕೇಂದ್ರದಿಂದ ೨ ಲಕ್ಷ ಪರಿಹಾರ
ಹಾಸನದಲ್ಲಿ ಸಂಭವಿಸಿದ ಭೀಕರ ದುರಂತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಈ ಘಟನೆಗೆ ಸಂತಾಪ ಸೂಚಿಸಿದ್ದಾರೆ ಮತ್ತು ಇದು ಹೃದಯ ವಿದ್ರಾವಕ ಘಟನೆ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ ಮತ್ತು ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.
ಮೃತರ ಕುಟುಂಬಗಳಿಗೆ ಅವರು ಸಂತಾಪ ಸೂಚಿಸಿದ್ದಾರೆ. ಈ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ಸೂಚಿಸಿ ಮೃತರ ಕುಟುಂಬಗಳಿಗೆ ತಲಾ ೨ ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳಿಗೆ ೫೦,೦೦೦ ರೂ. ಪರಿಹಾರ ಘೋಷಿಸಲಾಗಿದೆ. ರಾಜ್ಯ ಸರ್ಕಾರವು ಮೃತರ ಕುಟುಂಬಗಳಿಗೆ ೫ ಲಕ್ಷ ರೂ. ಪರಿಹಾರವನ್ನು ಸಹ ಘೋಷಿಸಿದೆ.