
ಕಲಬುರಗಿ,ಏ 1: ಅಮೆರಿಕಾ-ಇಸ್ರೆಲ್ ಜಂಟಿ ದಾಳಿಯಲ್ಲಿ ಹತ್ಯೆಗೀಡಾದ ಇರಾನ್ ಪರಮೋಚ್ಚ ನಾಯಕ ಅಯಾತೊಲ್ಲಾ ಖಮೇನಿಗೆ ಕಲಬುರಗಿ ಮಹಾನಗರ ಪಾಲಿಕೆ ಬಜೆಟ್ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದನ್ನು ಶಿವಸೇನಾ ರಾಜ್ಯಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಆಂದೋಲಾ ಅವರು ಉಗ್ರವಾಗಿ ಖಂಡಿಸಿದರು.
ಇಂದು ಪತ್ರಿಕಾಭವನದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ,ಪಹಲ್ಗಾಮ ದಾಳಿಯಾದಾಗ ಪಾಲಿಕೆಯಲ್ಲಿ ಸಂತಾಪ ಸೂಚಿಸಲಿಲ್ಲ. ಅಯಾತೊಲ್ಲಾ ಖಮೇನಿಗೆ ವಿಧಾನಸಭೆ ಮತ್ತು ಸಂಸತ್‍ನಲ್ಲಿ ಸಲ್ಲಿಸದ ಸಂತಾಪ ಪಾಲಿಕೆಯಲ್ಲೇಕೆ ? ಎಂದು ಪ್ರಶ್ನಿಸಿದರು.
24 ನೇ ವಾರ್ಡಿನ ಕಾಂಗ್ರೆಸ್ ಸದಸ್ಯೆ ಸಯೀದಾ ನೂರ್ ಫಾತಿಮಾ ಅವರು ಸಂತಾಪ ಸೂಚಿಸುವ ನಿರ್ಣಯ ಮಂಡಿಸಿ ಅಯಾತೊಲ್ಲಾ ಖಮೇನಿಯ ಹತ್ಯೆ ಮಾನವೀಯತೆಯ ಕೊಲೆ ಎಂದು ಕೊಂಡಾಡಿದ್ದಾರೆ. ಇರಾನಿನಲ್ಲಿ ಮಹಿಳೆಯರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸುವಾಗ ಇವರ ಮನ ಮಿಡಿಯಲಿಲ್ಲವೇಕೆ?
.ಕಾಂಗ್ರೆಸ್ ಸದಸ್ಯರ ಜೊತೆ ಬಿಜೆಪಿ ಸದಸ್ಯರು ಕೂಡ ಕಾಂಗ್ರೆಸ್ ನಿಲುವನ್ನು ಬೆಂಬಲಿಸಿ ನಾವು ಕೂಡ ಖಮೇನಿ ಬೆಂಬಲಿಗರೆಂದು ಸಾಬೀತು ಪಡಿಸಿದ್ದಾರೆ. ಸಂತಾಪ ಸೂಚಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಪಾಲಿಕೆ ಸಭೆಯಲ್ಲಿ ಅಯಾತೊಲ್ಲಾ ಖಮೇನಿಗೆ ಸಂತಾಪ ಸೂಚಿಸುವಾಗ ಪಾಲಿಕೆ ಆಯುಕ್ತರು ಏಕೆ ಸುಮ್ಮನಿದ್ದರು ? ಇಲ್ಲಿನ ಉಸ್ತುವಾರಿ ಸಚಿವರು ಕಲಬುರಗಿಗೆ ಪ್ರತ್ಯೇಕ ರಾಷ್ಟ್ರದ ಸ್ಥಾನಮಾನ ಕೊಡಿಸಿದ್ದಾರೆಯೇ ? ಎಂದರು.
ಸುದ್ದಿಗೋಷ್ಠಿಯಲ್ಲಿ ಶಿವರಾಜ ಬಾಳಿ,ರಾಕೇಶ ಜಮಾದಾರ,ರೋಹಿತ್,ಶರಣು ಶಿವಣಗಿ,ಬಾಗೇಶ ಆಂದೋಲಾ ಉಪಸ್ಥಿತರಿದ್ದರು.




























