ಧಾರಾಕಾರ ಮಳೆ: ಕೊಚ್ಚಿ ಹೋದ ಸೇತುವೆ

ಕಮಲಾಪುರ,ಸೆ.11-ತಾಲ್ಲೂಕಿನಾದ್ಯಂತ ಬುಧವಾರ ಸುರಿದ ಧಾರಾಕಾರ ಮಳೆಗೆ ಪ್ರವಾಹ ಉಂಟಾಗಿ ಅಪಾರ ಹಾನಿಯಾಗಿದೆ. ಜೀವಣಗಿ ಮಾರ್ಗದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ ಸೇತುವೆ ಕಿತ್ತು ಹೋಗಿದ್ದು, ಇದರಿಂದಾಗಿ ಗ್ರಾಮದ ಸಂಪರ್ಕ ಕಡಿತಗೊಂಡಿತ್ತು. ಕೆಲವರು ಪ್ರವಾಹದಲ್ಲೇ ಹಳ್ಳ ದಾಟುವ ದುಸ್ಸಾಹಸ ಮಾಡಿದ್ದು, ಪ್ರಾಣಾಪಾಯದಿಂದ ಪಾರಾದರು.
ಕಮಲಾಪುರ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಮೊಳಕಾಲವರೆಗೆ ನೀರು ಸಂಗ್ರಹಗೊಂಡಿತ್ತು. ತರಗತಿ ಕೋಣೆಯಲ್ಲಿ ನೀರು ನುಗ್ಗಿ ಪಾಠ ಪ್ರವಚನ ಸ್ಥಗಿತಗೊಂಡಿತ್ತು. ಓಕಳಿ ಗ್ರಾಮದಲ್ಲಿ ಹಳ್ಳ ತುಂಬಿ ಹರಿದಿದ್ದು ಪ್ರವಾಹದ ನೀರು ರೈತರ ಜಮೀನಿಗೆ ನುಗ್ಗಿದೆ. ತೊಗರಿ, ಚೆಂಡು ಹೂ ಸೇರಿದಂತೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.
ಕಳೆದ ವಾರ ಸುರಿದ ಮಳೆಗೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ಈ ಮಳೆಯಿಂದಾಗಿ ಅಳಿದುಳಿದ ಬೆಳೆಯೂ ಸಹ ಕೈಗೆ ಬರುವುದಿಲ್ಲ ಎಂದು ರೈತರು ಆತಂಕ ವ್ಯಕ್ತಪಡಿಸಿದರು.