
ಕಲಬುರಗಿ,ಜ.23-ಬೈಕ್ ಕಳ್ಳನೊಬ್ಬನನ್ನು ಬಂಧಿಸಿ 7 ಲಕ್ಷ 35 ಸಾವಿರ ರೂಪಾಯಿ ಬೆಲೆಯ 18 ಮೋಟರ್ ಸೈಕಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‍ಪಿ ಅಡ್ಡೂರು ಶ್ರೀನಿವಾಸಲು ತಿಳಿಸಿದರು.
ಎಸ್‍ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಫಜಲಪುರ ತಾಲ್ಲೂಕಿನ ಬಡದಾಳ ತಾಂಡಾದ ಸಂಜಯ್ ತಂದೆ ಖೇಮು ಚವ್ಹಾಣ್ (46) ಎಂಬಾತನನ್ನು ಬಂಧಿಸಿ 7.35 ಲಕ್ಷ ರೂಪಾಯಿ ಮೌಲ್ಯದ 18 ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಈತ ರೇವೂರ್ ಪೊಲೀಸ್ ಠಾಣೆ ವ್ಯಾಪ್ತಿಯ ಅತನೂರ, ಕಲಬುರಗಿ ಜಿಲ್ಲೆಯ ಅಫಜಲಪುರ, ಕಲಬುರಗಿ ನಗರ, ವಿಜಯಪುರ ಜಿಲ್ಲೆಯ ಇಂಡಿ, ಸಾಲೋಟಗಿ, ಬೆಂಗಳೂರು ನಗರ ಹಾಗೂ ಮಹಾರಾಷ್ಟ್ರದ ಗಡಿಭಾಗದ ದುಧನಿ, ಅಕ್ಕಲಕೋಟ ಮತ್ತು ಇತರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 18 ಬೈಕ್‍ಗಳನ್ನು ಕಳ್ಳತನ ಮಾಡಿದ್ದು, ತಾನು ಕಳ್ಳತನ ಮಾಡಿದ 18 ಮೋಟರ್ ಸೈಕಲ್‍ಗಳಲ್ಲಿ ಒಂದನ್ನು ತಾನು ಬಳಸಿಕೊಂಡಿದ್ದು, ಉಳಿದ 17 ಮೋಟರ್ ಸೈಕಲ್‍ಗಳಲ್ಲಿ ಕಮೀಷನ್ ಮೇಲೆ ಮಾರಾಟ ಮಾಡಲು ತನ್ನ ಪರಿಚಯದ ಮಲ್ಲಾಬಾದ ಗ್ರಾಮದ ಪರಶುರಾಮ ಅಲಿಯಾಸ್ ಸುನೀಲ ತಂದೆ ವಿಠಲ ಜಮಾದಾರ ಈತನಿಗೆ 4 ಮೋಟರ್ ಸೈಕಲ್‍ಗಳನ್ನು ಕೊಟ್ಟಿದ್ದು ಇನ್ನುಳಿದ 13 ಮೋಟರ್ ಸೈಕಲ್‍ಗಳನ್ನು ತಾನು ಮಾರಾಟ ಮಾಡುವ ಸಲುವಾಗಿ ತನ್ನ ಬಳಿಯಲ್ಲಿ ಇಟ್ಟುಕೊಂಡಿರುವುದಾಗಿ ಹೇಳಿದ್ದರಿಂದ ಆರೋಪಿತನು ಕಳವು ಮಾಡಿ ಮುಚ್ಚಿಟ್ಟಿದ್ದ ಎರಡು ರಾಯಲ್ ಎನಫೀಲ್ಡ್ ಬುಲೆಟ್ ಮೋಟರ್ ಸೈಕಲ್‍ಗಳು ಸೇರಿ ಅ.ಕಿ: 7 ಲಕ್ಷ 35 ಸಾವಿರ ರೂಪಾಯಿ ಬೆಲೆಯ ಎಲ್ಲ 18 ಮೋಟರ್ ಸೈಕಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಹ ಆರೋಪಿತನಾದ ಮಲ್ಲಾಬಾದ ಗ್ರಾಮದ ಪರಶುರಾಮ ಅಲಿಯಾಸ್ ಸುನೀಲ ತಂದೆ ವಿಠಲ ಜಮಾದಾರ ಎಂಬಾತ ತಲೆ ಮರೆಸಿಕೊಂಡಿದ್ದು, ಆತನಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಅತನೂರ ಗ್ರಾಮದ ಭೀಮರಾಯ ಜಮಾದಾರ ಎಂಬುವವರು ಗ್ರಾಮದ ನಂದಿ ಬಸವೇಶ್ವರ ದೇವಸ್ಥಾನ ಪಕ್ಕದಲ್ಲಿ ನಿಲ್ಲಿಸಿದ ತಮ್ಮ ಬೈಕ್ ಕಳವಾದ ಬಗ್ಗೆ ರೇವೂರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ದೂರಿನ ಅನ್ವಯ ಬೈಕ್ ಕಳ್ಳನ ಪತ್ತೆಗೆ ಆಳಂದ ಡಿಎಸ್‍ಪಿ ತಮ್ಮರಾಯ ಪಾಟೀಲ, ಅಫಜಲಪುರ ಸಿಪಿಐ ಚನ್ನಯ್ಯ ಹಿರೇವiಠ ನೇತೃತ್ವದಲ್ಲಿ ರೇವೂರ ಪೊಲೀಸ್ ಠಾಣೆ ಪಿಎಸ್‍ಐಗಳಾದ ವಾತ್ಸಲ್ಯ, ಅಫಜಲಪುರ ಪೊಲೀಸ್ ಠಾಣೆ ಪಿಎಸ್‍ಐ ಸೋಮಲಿಂಗ ಒಡೆಯರ್, ಎಎಸ್‍ಐಗಳಾದ ಮಲ್ಲಣ್ಣ, ರಾಜಶೇಖರ, ಸಿಬ್ಬಂದಿಗಳಾದ ಶ್ರೀಕಾಂತ, ಸಂತೋಷ, ಶಿವಶರಣ, ವಿವೇಕಾನಂದ, ರಾಹುಲ ಮತ್ತು ಉಮೇಶ ಅವರನ್ನು ಒಳಗೊಂಡ ವಿಶೇಷ ಪತ್ತೆ ದಳ ರಚನೆ ಮಾಡಲಾಗಿತ್ತು. ಈ ತಂಡ ತನಿಖೆ ನಡೆಸಿ ಬೈಕ್ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ವಿವರಿಸಿದರು.
ಬೈಕ್ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವನ್ನು ಅವರು ಶ್ಲಾಘಿಸಿದರು.
























