
ತಿರುವನಂತಪುರಂ.ಆ೨೧: ಕೇರಳದ ಪ್ರಮುಖ ರಾಷ್ಟ್ರೀಯ ಪಕ್ಷದ ನಾಯಕರೊಬ್ಬರು ಮೂರು ವರ್ಷಗಳಿಂದ ತನಗೆ ಆಕ್ಷೇಪಾರ್ಹ ಸಂದೇಶ ಕಳಿಸುತ್ತಿದ್ದಾರೆ. ಅಲ್ಲದೇ ತನ್ನನ್ನು ಫೈವ್ ಸ್ಟಾರ್ ಹೋಟೆಲ್‌ಗೆ ಕರೆಯುತ್ತಿದ್ದಾರೆ ಎಂದು ಮಲಯಾಳಂ ನಟಿ ರಿನಿ ಜಾರ್ಜ್ ಆರೋಪಿಸಿದ್ದಾರೆ.
ರಾಜ್ಯದ ಪ್ರಮುಖ ರಾಜಕೀಯ ಪಕ್ಷದ ಕಾರ್ಯಕರ್ತೆಯೂ ಆಗಿರುವ ನಟಿ, ಅಶ್ಲೀಲ ಸಂದೇಶ ಕಳುಹಿಸಿದ ರಾಜಕಾರಣಿಯ ಹೆಸರನ್ನ ಬಹಿರಂಗಪಡಿಸಿಲ್ಲ. ಆದ್ರೆ ಈ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ರಾಹುಲ್ ಮಂಕೂಟ್ಟಿಲ್ ಪಾತ್ರ ಇರುವುದಾಗಿ ಬಿಜೆಪಿ ಆರೋಪ ಮಾಡಿದೆ.
ಪ್ರಮುಖ ರಾಷ್ಟ್ರೀಯ ಪಕ್ಷದ ನಾಯಕರೊಬ್ಬರು ನನಗೆ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಅಶ್ಲೀಲ ಸಂದೇಶಗಳನ್ನ ಕಳುಹಿಸುತ್ತಿದ್ದಾರೆ. ಫೈವ್ ಸ್ಟಾರ್ ಹೋಟೆಲ್‌ಗೆ ಬರುವಂತೆ ಕರೆಯುತ್ತಿದ್ದಾರೆ. ಈ ಬಗ್ಗೆ ನಿಮ್ಮ ಪಕ್ಷದ ನಾಯಕರಿಗೆ ತಿಳಿಸುವುದಾಗಿ ಹೇಳಿದ್ರೆ, ಹೇಳುವಂತೆ ಸವಾಲ್ ಹಾಕಿದ್ದಾರೆ. ಈ ಬಗ್ಗೆ ಪಕ್ಷದ ನಾಯಕರಿಗೆ ದೂರು ನೀಡಿದ್ರೆ ನಿರ್ಲಕ್ಷ್ಯ ಮಾಡಿದ್ದಾರೆ. ದೂರು ನೀಡಿದ ಬಳಿಕವೂ ಅವರಿಗೆ ಪಕ್ಷದೊಳಗೆ ಪ್ರಮುಖ ಹುದ್ದೆಯನ್ನ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದು ನನ್ನೊಬ್ಬಳ ಸಮಸ್ಯೆಯಲ್ಲ, ಹಲವಾರು ರಾಜಕಾರಣಿಗಳ ಪತ್ನಿಯರು ಹಾಗೂ ಹೆಣ್ಣುಮಕ್ಕಳೂ ತಮ್ಮೊಂದಿಗೆ ಈ ರೀತಿಯ ಅನುಭವ ಎದುರಿಸಿರುವುದಾಗಿ ಹೇಳಿಕೊಂಡಿದ್ದಾರೆ. ತಮ್ಮ ಕುಟುಂಬದಲ್ಲಿನ ಮಹಿಳೆಯರನ್ನೇ ರಕ್ಷಿಸಲು ಸಾಧ್ಯವಾಗದ ಈ ರಾಜಕಾರಣಿಗಳು ಯಾವ ಮಹಿಳೆಯನ್ನ ರಕ್ಷಿಸಲು ಸಾಧ್ಯ? ಅಂತಲೂ ರಿನಿ ಪ್ರಶ್ನೆ ಮಾಡಿದ್ದಾರೆ.
ಅಲ್ಲದೇ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಅನೇಕ ಮಹಿಳೆಯರು ಈ ರೀತಿಯ ಸಮಸ್ಯೆಗಳನ್ನ ಎದುರಿಸ್ತಿರೋದನ್ನ ನೋಡಿದ್ದೇನೆ. ಆದ್ರೆ ಯಾಕೆ ಯಾರೊಬ್ಬರೂ ಅದರ ಬಗ್ಗೆ ಒಂದು ಮಾತೂ ಆಡ್ತಿಲ್ಲ ಅಂತ ಯೋಚನೆ ಬಂತು. ಅವರೆಲ್ಲರ ಪರವಾಗಿ ನಾನು ದನಿ ಎತ್ತಲು ನಿರ್ಧರಿಸಿದೆ. ಅದಕ್ಕಾಗಿ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.