Home ಜಿಲ್ಲೆ ಯುವಜನರಲ್ಲಿ ಶ್ರಮ ಸಂಸ್ಕøತಿ ಅಭಿವೃದ್ಧಿಪಡಿಸಬೇಕಾದ ಅನಿವಾರ್ಯತೆ ಇದೆ: ಈಶ್ವರ ಖಂಡ್ರೆ

ಯುವಜನರಲ್ಲಿ ಶ್ರಮ ಸಂಸ್ಕøತಿ ಅಭಿವೃದ್ಧಿಪಡಿಸಬೇಕಾದ ಅನಿವಾರ್ಯತೆ ಇದೆ: ಈಶ್ವರ ಖಂಡ್ರೆ

ಬೀದರ್:ಏ.21: ಯುವಜನರು ಇಂದು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ದುಶ್ಚಟಗಳಲ್ಲಿ ಹೆಚ್ಚು ಶ್ರಮ ಹಾಕುತ್ತಿದ್ದು, ಇದರಿಂದ ಭಾರತೀಯ ಸಂಸ್ಕೃತಿ ವಿನಾಶದ ಅಂಚಿಗೆ ತಳ್ಳಲ್ಪಡುತ್ತಿದ್ದು, ಯುವಕರಲ್ಲಿ ಅಣ್ಣ ಬಸವಣ್ಣನವರ ಕಾಯಕ ಸಂಸ್ಕೃತಿ ಅಭಿವೃದ್ಧಿಪಡಿಸಬೇಕಾದ ಅನಿವಾರ್ಯತೆ ಇದೆ ಎಂದು ರಾಜ್ಯದ ಅರಣ್ಯ, ಪರಿಸರ ಹಾಗೂ ಜೀವಶಾಸ್ತ್ರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ತಿಳಿಸಿದರು.
ನಗರದ ಬಸವೇಶ್ವರ ವೃತ್ತದಲ್ಲಿ ಬಸವ ಜಯಂತಿ ಉತ್ಸವ ಸಮಿತಿ ವತಿಯಿಂದ ಹಮ್ಮಿಕೊಂಡ ವಿಶ್ವಗುರು ಬಸವಣ್ಣನವರ ಭಾವಚಿತ್ರದ ಭವ್ಯ ಮೆರವಣಿಗೆ ಹಾಗೂ ಬಚನ ಸಾಹಿತ್ಯದ ಅದ್ದೂರಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿರುವ ಅವರು, ಇಂದು ಜಗತ್ತಿನಲ್ಲಿ ಯುದ್ದ, ಕೊಲೆ, ಸುಲಿಗೆ, ಅತ್ಯಾಚಾರ, ಶೋಷಣೆ, ದಬ್ಬಾಳಿಕೆ, ಅಂಧಾಚಾರ, ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಇಂತಹ ಸಂದರ್ಭದಲ್ಲಿ ಜಾಗತಿಕ ವಾತಾವರಣ ತಿಳಿಗೊಳಿಸಲು ವಿಶ್ವಗುರು ಬಸವಣ್ಣನವರ ತತ್ವಗಳು ಅನಿವಾರ್ಯವಾಗಿದ್ದು, ಈ ಕಾರ್ಯ ಬಸವಣ್ಣನವರ ಕರ್ಮಭುಮಿ ಬಸವಕಲ್ಯಾಣದಿಂದಲೇ ಆರಂಭವಾಗಿದೆ.ಜಗತ್ತಿನ ಬಹುತೇಕ ರಾಷ್ಟ್ರಗಳು ಅನುಭವ ಮಂಟಪದ ಮಾದರಿಯ ಪ್ರಜಾಪ್ರಭುತ್ವ ಕಲ್ಪನೆಯನ್ನು ಅನುಸರಿಸುತ್ತಿವೆ. ಇದನ್ನು ಇನ್ನಷ್ಟು ಪರಿಣಾಮಕಾರಿ ರೀತಿಯಲ್ಲಿ ಪ್ರಚಾರ ಹಾಗೂ ಪ್ರಸಾರ ಮಾಡುವ ಅನಿವಾರ್ಯತೆ ಎಂದು ಹೇಳಿದರು.
ಬಸವಕಲ್ಯಾಧಲ್ಲಿ ನೂತನ ಅನುಭವ ಮಂಟಪದ ಕಾಮಗಾರಿ ವೇಗದಿಂದ ನಡೆಯುತ್ತಿದ್ದು, ಮುಂದಿನ ವರ್ಷ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೊಳ್ಳಲಿದೆ. ಒಟ್ಟಿನಲ್ಲಿ ಬಸವಣ್ಣನವರ ಆಚಾರ, ವಿಚಾರಗಳು ಯುವಜನರ ಮನ ಮುಟ್ಟುವಂತಾಗಬೇಕಿದೆ ಎಂದು ಅಭಿಪ್ರಾಯ ಪಟ್ಟರು.

ತಡೋಳಾ, ಮೇಹಕರ ಹಾಗೂ ಡೋಣಗಾಪುರ ಶ್ರೀಮಠಗಳ ಪೂಜ್ಯ ರಾಜೇಶ್ವರ ಶಿವಾಚಾರ್ಯರು ಮಾತನಾಡಿ, ಜಗಜ್ಯೋತಿ ಬಸವಣ್ಣನವರು ಜೀವನ ಸಂಸ್ಕೃತಿ ಹಾಗೂ ಕಾಯಕ ಮತ್ತು ದಾಸೋಹದ ಸಂಸ್ಕೃತಿ ಪ್ರತಿಪಾದಿಸಿದರು. ಒಂದು ಲಕ್ಷದ ತೊಂಬತ್ತಾರು ಸಾವಿರ ಜಂಗಮರಿಗೆ ನಿತ್ಯ ದಾಸೋಹಗೈದು ದಾನ, ಧರ್ಮದ ದಾರಿ ತೋರಿದರು.

ಅಪ್ಪ ಬಸವಣ್ಣನವರು ಇಷ್ಟಲಿಂಗ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದ್ದರ ಪರಿಣಾಮ ಇಂದು ಜಾಗತಿಕ ವಾತಾವರಣ ಲಿಂಗಮಯವಾಗಲು ಸಾಧ್ಯವಾಗುತ್ತಿದೆ. ಮುಂದಿನ ವರ್ಷ ಅನುಭವ ಮಂಟಪ ಉದ್ಘಾಟನೆ ಸಂಸರ್ಭದಲ್ಲಿ ಕನಿಷ್ಟ 21 ಸಾವಿರ ಶರಣ, ಶರಣೆಯರು ಸಾಮೂಹಿಕ ಇಷ್ಟಲಿಂಗ ಪೂಜೆ ಮಾಡುವ ಮೂಲಕ ಹೊಸ ಇತಿಹಾಸ ನಿರ್ಮಿಸಬೇಕಿದೆ ಎಂದರು.

ಇದೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು ಅಲ್ಲಮ ಪ್ರಭುದೇವರ ವಚನವಾದ ಶಿವ ಗುರುವೆಂದು ಬಲ್ಲಾತನೆ ಗುರು ಎಂಬ ವಚನ ಪಠಣ ಮಾಡಿದರು.

ಪೌರಾಡಳಿತ ಹಾಗೂ ಹಜ್ ಸಚಿವ ರಹಿಮ್ ಖಾನ್, ಬೀದರ್ ದಕ್ಷಿಙ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿ.ಪಂ ಸಿಇಒ ಗಿರೀಶ ಬದೋಲೆ, ಎಸ್.ಪಿ ಪ್ರದೀಪ ಗುಂಟಿ, ಬಸವ ಸೇವಾ ಪ್ರತಿಷ್ಟಾನದ ಪೂಜ್ಯ ಡಾ.ಅಕ್ಕ ಗಂಗಾಂಬಿಕೆ, ಪ್ರಭುದೇವರು, ಬಸವ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ಡಾ.ರಜನೀಶ ವಾಲಿ, ಪ್ರಧಾನ ಕಾರ್ಯದರ್ಶಿ ಶಶಿಧರ ಹೊಸಳ್ಳಿ, ಖಜಾಂಚಿ ಸಿದ್ರಾಮಯ್ಯ ಸ್ವಾಮಿ, ಎನ್.ಎಸ್.ಎಸ್.ಕೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಬವಾರತೀಯ ಬಸವ ಬಳಗದ ರಾಜ್ಯಾಧ್ಯಕ್ಷ ಬಾಬುವಾಲಿ, ಪ್ರಮುಖರಾದ ಗುರುನಾಥ ಕೊಳ್ಳೂರ, ಜಯರಾಜ ಖಂಡ್ರೆ, ಬಸವರಾಜ ಧನ್ನೂರ್, ದೀಪಕ ವಾಲಿ, ಧನರಾಜ ಹಂಗರಗಿ, ವಿಕ್ರಮ ಮುದಾಳೆ, ಸಂತೋಷ ಪಾಟೀಲ ಸೇರಿದಂತೆ ಸಾವಿರಾರು ಬಸವ ಭಕ್ತರು, ಬಸವಾನುಯಾಯಿಗಳು, ವೀರಶೈವ, ,ಲಿಂಗಾಯತ ಹಾಗೂ ಇತರೆ ಸಮಾಜದ ಪ್ರಮುಖರು ಮೆರವಣಿಗೆಯಲ್ಲಿ ಭಾಗವಹಿಸಿದರು. ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಮೂರು ಅಲಂಕೃತ ರಥಗಳಲ್ಲಿ ಬಸವಣ್ಣನವರ ಮೂರ್ತಿ, ಭಾವಚಿತ್ರದ ಮೆರವಣಿಗೆ ಹಾಗೂ ಒಂದು ರಥದಲ್ಲಿ ವಚನ ಸಾಹಿತ್ಯ ಇರಿಸಲಾಗಿತ್ತು. ಛತ್ರ ಚಾಮರಗಳು ಮೆರವಣಿಗೆಯ ಶೋಭೆ ದ್ವಿಗುಣಗೊಳಿಸಿದವು. ಹೆಣ್ಣು ಗಂಟೆಂಬದೆ ಎಲ್ಲರು ಬಸವಣ್ಣನವರ ಡಿಜೆ ಸೌಂಡ್ ಹಾಡುಗಳಿಗೆ ಹೆಜ್ಜೆ ಹಾಕಿದರು. ಬಾಜಾ ಬಜೆಂತ್ರಿಯೊಂದಿಗೆ ಮೆರವಣಿಗೆ ಅದ್ದೂರಿಯಾಗಿ ಜರುಗಿತು. ಸಾಯಂಕಾಲ ಇದ್ದ ಕಾರಣ ವಾತಾವರಣ ತಂಪಾದ ಹಿನ್ನಲೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಇಡೀ ವಾತಾವರಣ ಬಸವಮಯ ವಾಗುವಂತೆ ಮಾಡಿದರು. ದಾರಿಉದ್ದಕ್ಕೂ ಪಟಾಕಿ ಸಿಡಿಸಿ ಸಂಭ್ರಮ ಪಟ್ಟರು.
ಮೆರವಣಿಗೆಯು ಬಸವೇಶ್ವರ ವೃತ್ತದಿಂದ ಆರಂಭವಾಗಿ ಚೌಬಾರ, ಗವಾನ ಸರ್ಕಲ್, ಶಹಾಗಂಜ್ ಕಮಾನ್, ಅಂಬೇಡ್ಕರ್ ವೃತ್ತ, ಭಗತಸಿಂಗ್ ಚೌಕ್, ಮಹಾವೀರ ಸರ್ಕಲ್ ನಿಂದ ಪುನಃ ಬಸವೇಶ್ವರ ವೃತ್ತಕ್ಕೆ ಬಂದು ಮುಕ್ತಾಯಗೊಂಡಿತು.