
ಕೊರಟಗೆರೆ, ಮಾ. ೧೧- ದೇವಾಲಯವೊಂದರ ಬಾಗಿಲು ಬೀಗವನ್ನು ಕಟರ್ ಬಳಸಿ ಕಟ್ ಮಾಡಿ ಒಳನುಗ್ಗಿರುವ ಕಳ್ಳರು ದೇವರ ಸುಮಾರು ೧ ಕೋಟಿಗೂ ಅಧಿಕ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ತಾಲ್ಲೂಕಿನ ವಡ್ಡಗೆರೆಯಲ್ಲಿ ನಡೆದಿದೆ.
ತಾಲ್ಲೂಕಿನ ವಡ್ಡಗೆರೆಯ ವೀರನಾಗಮ್ಮ ದೇವಾಲಯಕ್ಕೆ ತಡರಾತ್ರಿ ನುಗ್ಗಿರುವ ಕಳ್ಳರು ಕಟರ್ ಬಳಸಿ ಬಾಗಿಲು ಹಾಗೂ ದೇವಾಲಯದ ಒಳಗೆ ಇದ್ದ ಎರಡು ಲಾಕರ್‌ಗಳನ್ನು ಕಟ್ ಮಾಡಿ ಸುಮಾರು ೩೦ ಕೆ.ಜಿ.ಗೂ ಅಧಿಕ ಬೆಳ್ಳಿ ಆಭರಣ ಹಾಗೂ ೮ ಗ್ರಾಂಗೂ ಹೆಚ್ಚು ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ.
ವಡ್ಡಗೆರೆ ವೀರನಾಗಮ್ಮ ಇತಿಹಾಸ ಪ್ರಸಿದ್ದ ದೇವರಾಗಿದ್ದು, ಗ್ರಾಮದ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ದೇವಾಲಯ ಇದೆ. ಈ ದೇವಾಲಯ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದೆ.
ರಾತ್ರಿ ಕಳ್ಳರು ದೇವಾಲಯಕ್ಕೆ ನುಗ್ಗಿ ೪ ಲಾಕರ್‌ಗಳ ಪೈಕಿ ೨ ಲಾಕರ್‌ಗಳನ್ನು ಒಡೆದು ದೇವರ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ದೋಚಿದ್ದಾರೆ. ಇಂದು ಬೆಳಿಗ್ಗೆ ಗ್ರಾಮಸ್ಥರು ದೇವಾಲಯದಲ್ಲಿ ಕಳ್ಳತನ ನಡೆದಿರುವುದನ್ನು ಕಂಡು ಗಾಬರಿಗೊಂಡು ದೇವಾಲಯದ ಅರ್ಚಕರು ಹಾಗೂ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಘಟನೆಯ ಸುದ್ದಿ ತಿಳಿದ ಕೂಡಲೇ ಕೊರಟಗೆರೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಡಿವೈಎಸ್ಪಿ ಮಂಜುನಾಥ್, ತಹಶೀಲ್ದಾರ್ ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿದರು. ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಸಹ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ.


























