ಚಿನ್ನದ ಅಂಗಡಿಯಲ್ಲಿ ಕಳ್ಳತನಇಬ್ಬರು ಕಳ್ಳಿಯರ ಬಂಧಿಸಿ 1.60 ಲಕ್ಷ ರೂ.ಮೌಲ್ಯದ ಬೆಳ್ಳಿ ಆಭರಣ, ನಗದು ಜಪ್ತಿ

ಕಲಬುರಗಿ,ಫೆ.10-ಚಿಂಚೋಳಿ ತಾಲ್ಲೂಕಿನ ಸುಲೇಪೇಟ್ ಗ್ರಾಮದ ಚಿನ್ನದ ಅಂಗಡಿಯೊಂದರಲ್ಲಿ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕಳ್ಳಿಯರನ್ನು ಸುಲೇಪೇಟ್ ಪೊಲೀಸರು ಬಂಧಿಸಿ 1,60,500 ರೂ.ಮೌಲ್ಯದ ಬೆಳ್ಳಿ ಆಭರಣ ಮತ್ತು ನಗದು ಹಣ ವಶಪಡಿಸಿಕೊಂಡಿದ್ದಾರೆ ಎಂದು ಎಸ್‍ಪಿ ಅಡ್ಡೂರು ಶ್ರೀನಿವಾಸಲು ತಿಳಿಸಿದರು.
ನಗರದ ಪೊಲೀಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀದರ್ ಜಿಲ್ಲೆಯ ಚಿದ್ರಿ ಗ್ರಾಮದ ಬಂದೇನವಾಜ್ ಕಾಲೋನಿಯ ಸಲ್ಮಾ ಬೇಗಂ ಗಂಡ ಸೈಯದ್ ಮುಸ್ತಾಕಿನ್ (26) ಮತ್ತು ಶನ್ನು ಬೇಗಂ ಗಂಡ ಜಹಾಂಗೀರ (25) ಎಂಬುವವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಇಬ್ಬರು ಮಹಿಳೆಯರು ಬುರ್ಖಾ ಹಾಕಿಕೊಂಡು ಚಿನ್ನದ ಅಂಗಡಿಗೆ ಬಂದು ಕಾಲಿನ ಚೈನ ನೋಡುವ ನೆಪದಲ್ಲಿ ಸಹೋದರನ ಮಗ ಚಕ್ರಪಾಣಿಯನ್ನು ಯಾಮಾರಿಸಿ 1.45 ಲಕ್ಷ ರೂ.ಮೌಲ್ಯದ 400 ಗ್ರಾಂ.ನ 6 ಬೆಳ್ಳಿ ಚೈನಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಅಂಗಡಿ ಮಾಲಿಕ ರಾಮಾಚಾರಿ ಮಾರೋಜ ಅವರು ಸುಲೇಪೇಟ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಈ ದೂರಿನ ಅನ್ವಯ ಪ್ರಕರಣ ದಾಖಲಾಗಿತ್ತು. ಪ್ರಕರಣದ ಪತ್ತೆಗೆ ಚಿಂಚೋಳಿ ಡಿಎಸ್‍ಪಿ ಸಂಗಮನಾಥ ಹಿರೇಮಠ ಅವರ ಮಾರ್ಗದರ್ಶನದಲ್ಲಿ ಸಿಪಿಐ ಕೃಷ್ಣಕುಮಾರ ಪಾಟೀಲ ನೇತೃತ್ವದಲ್ಲಿ ಪಿಎಸ್‍ಐಗಳಾದ ಅಮರ ಕುಲಕರ್ಣಿ, ಶಿವಶಂಕರ ಸುಬೇದಾರ, ಸುಬ್ಬಂದಿಗಳಾದ ಮೋಹನರೆಡ್ಡಿ, ಸದ್ದಾಂ, ಸುರೇಶ ಕಟ್ಟಿಮನಿ, ಅನೀಲ ಉಳ್ಳಾಗಡ್ಡಿ, ಸವಿತಾ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ತನಿಖೆ ನಡೆಸಿ ಸಲ್ಮಾ ಬೇಗಂ ಮತ್ತು ಶನ್ನು ಬೇಗಂ ಅವರನ್ನು ಬಂಧಿಸಿ 1.60 ಲಕ್ಷ ರೂ.ಮೌಲ್ಯದ ಬೆಳ್ಳಿ ಆಭರಣ ಮತ್ತು ನಗದು ಹಣ ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಬಂಧಿತ ಆರೋಪಿಗಳು ಈ ಹಿಂದೆ ಸೇಡಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ಬಂಗಾರದ ಅಂಗಡಿಯಲ್ಲಿ ಕಳ್ಳತನ ಮಾಡಿರುವ ಬಗ್ಗೆ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
ಇಬ್ಬರು ಕಳ್ಳಿಯರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ಅವರು ಶ್ಲಾಘಿಸಿದರು.