
ಚಿಕ್ಕನಾಯಕನಹಳ್ಳಿ, ಜ. ೨೩- ದೇಶದ ಹಿಂದೂಗಳ ಜಾಗೃತಿಗಾಗಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಆಚರಣೆಯ ಅಂಗವಾಗಿ ತಾಲ್ಲೂಕು, ಹೋಬಳಿ ಕೇಂದ್ರಗಳಲ್ಲಿ ಹಿಂದೂ ಸಮಾಜೋತ್ಸವ ಆಚರಣೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸಮಾಜದ ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗಹಿಸುವಂತೆ ಗೋಡೆಕೆರೆ ಮಠದ ಶ್ರೀ ಮೃತ್ಯುಂಜಯ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಗೋಡೆಕೆರೆಯಲ್ಲಿರುವ ಮಠದಲ್ಲಿ ಹಿಂದೂ ಸಮಾಜೋತ್ಸವ ಸಮಿತಿ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ವೇಳೆಯಲ್ಲಿ ಹಿಂದೂ ಸಮಾಜವನ್ನು ಸಂಘಟಿಸುವ ಉದ್ದೇಶದಿಂದ ಡಾ.ಹೆಡಗೇವಾರು ರವರು ಯುವಕರನ್ನು ಸೇರಿಸಿ ಆರೆಸ್‌ಎಸ್ ಸಂಘಟನೆಯನ್ನು ಆರಂಭಿಸಿದರು ಎಂದರು.
ದೇಶ ಪ್ರೇಮದ, ಸನಾತನ ಪರಂಪರೆ ಹಾಗೂ ಭಾರತೀಯತೆಯ ಅಸ್ಮಿತೆಗಳನ್ನು ಉಳಿಸಿ, ಬೆಳಸುವ ಧ್ಯೇಯದಿಂದ ಪ್ರಾರಂಭಗೊಂಡ ಈ ಸಂಘಟನೆಗೆ ಈಗ ನೂರು ವರ್ಷಗಳು ಕಳೆದಿದೆ. ಪ್ರಸಕ್ತ ಸಂದರ್ಭದ ಹಾಗೂ ಮುಂದಿನ ತಲೆಮಾರಿನ ಸುರಕ್ಷತೆ ಹಾಗೂ ನೆಮ್ಮದಿಯ ಬಾಳಿಗಾಗಿ ಹಿಂದೂಗಳಲ್ಲಿ ಸಂಘಟನೆಯ ಜಾಗೃತಿ ಮೂಡಿಸುವ ಉದ್ದೇಶದಿಂದ ಜ. ೧೮ ರಿಂದ ಫೆ. ೧ರವರೆಗೆ ತಾಲ್ಲೂಕು ಕೇಂದ್ರವೂ ಸೇರಿದಂತೆ ಹೋಬಳಿ ಕೇಂದ್ರಗಳಲ್ಲಿ ಹಿಂದು ಸಮಾಜೋತ್ಸವನ್ನು ಆಚರಣೆ ಮಾಡಲಾಗುತ್ತಿದೆ. ಫೆ.೧ ರಂದು ಹುಳಿಯಾರಿನಲ್ಲಿ ಬೃಹತ್ ಹಿಂದೂ ಸಮಾಜೋತ್ವವ ಆಯೋಜಿಸಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ತಾಲ್ಲೂಕಿನ ಹೋಬಳಿ ಕೇಂದ್ರಗಳಾದ ಕಂದಿಕೆರೆ, ಶೆಟ್ಟಿಕೆರೆ, ಹಂದನಕೆರೆ ಸೇರಿದಂತೆ ಪಟ್ಟಣದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಎಲ್ಲ ಹಿಂದೂ ಬಾಂಧವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಮುಖಂಡ ಅಣೆಕಟ್ಟೆ ರಾಕೇಶ್ ಮಾತನಾಡಿ, ಭಾರತ ಒಂದು ಹಿಂದೂರಾಷ್ಟ್ರ ಹಾಗೂ ವೈವಿದ್ಯಮಯ ಸಂಸ್ಕೃತಿಯನ್ನು ಹೊಂದಿದ ರಾಷ್ಟ್ರ ಇಂತಹ ದೇಶದಲ್ಲಿ ನಿರಂತರವಾಗಿ ದೌರ್ಜನ್ಯಕ್ಕೊಳಗಾದ ಹಿಂದೂ ಸಮಾಜವನ್ನು ಒಂದು ಸಾಂಸ್ಕೃತಿಕವಾಗಿ ಸಂಘಟಿಸಲು ೧೯೨೫ರ ವಿಜಯದಶಮಿಯಂದ ಈ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಪ್ರಾರಂಭಿಸಲಾಯಿತು. ಈ ನೂರು ವರ್ಷಗಳಲ್ಲಿ ಹಲವಾರು ಏರು ಪೇರುಗಳನ್ನು ಕಂಡು ಪ್ರಪಂಚದಲ್ಲೇ ಅತ್ಯಂತ ದೊಡ್ಡ ಸ್ವಯಂ ಸೇವಕ ಸಂಘಟನೆಯಾಗಿದೆ ಸಂಘ ಇಂದು ಕೇವಲ ಸಂಸ್ಕೃತಿ ಸಂಘಟನೆಯಲ್ಲದೆ ಎಲ್ಲ ಪ್ರಕಾರಗಳಲ್ಲಿ ಸಂಘ ನಡೆಯುತ್ತಿದೆ. ಅದ್ದರಿಂದ ಈ ನೂರು ವರ್ಷಗಳ ನೆನೆಪಿಗೆ ಹಾಗೂ ಭಾರತದಲ್ಲಿರುವ ಹಿಂದೂ ಸಮಾಜಕ್ಕಿರುವಂತಹ ಸಮಸ್ಯೆಗಳನ್ನು ನೆನಪಿಸಲು ಈ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸುವಂತೆ ತಿಳಿಸಿದರು.
ಸಂಚಾಲಕ ಹಾ.ನ.ಲಿಂಗಪ್ಪ ಮಾತನಾಡಿ, ಶತಮಾನೋತ್ಸವದ ಅಂಗವಾಗಿ ಈ ಹಿಂದೂ ಸಮಾಜೋತ್ಸವವನ್ನು ದೇಶಾದ್ಯಂತ ಜ. ೧೮ರಿಂದ ಫೆ. ೧ರೊಳಗಾಗಿ ಎಲ್ಲ ಕಡೆಗಳಲ್ಲಿ ಆಚರಣೆ ಮಾಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ನಮ್ಮ ತಮ್ಮಡಿಹಳ್ಳಿ ಸ್ವಾಮೀಜಿ, ಯಳನಡು ಸ್ವಾಮೀಜಿ, ಮಾದಿಹಳ್ಳಿ ಸ್ವಾಮೀಜಿ ಸೇರಿದಂತೆ ಎಲ್ಲ ಮಠಾಧೀಶರುಗಳ ದಿವ್ಯ ಸಾನಿಧ್ಯದಲ್ಲಿ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಹಿಂದೂ ಸಮಾಜೋತ್ಸವ ಸಮಿತಿ ಅಧ್ಯಕ್ಷ ಚಂದ್ರು, ಜಿಲ್ಲಾ ಸಂಚಾಲಕ ಶ್ರೀಧರ್, ಮುಖಂಡ ಮುರುಗೇಶ್ ಮತ್ತಿತರರು ಉಪಸ್ಥಿತರಿದ್ದರು.



























