ಇನ್ಫೋಸಿಸ್‌ನಲ್ಲಿ ಸಹಾಯಕನಾಗಿದ್ದ ಹುಡುಗ ಈಗ ಡಿಸೈನ್ ಟೆಂಪ್ಲೆಟ್‌ನ ಸ್ಥಾಪಕ

ಹೇಮಂತ್.ಎಂ


ನವದೆಹಲಿ, ಅ.೧೬: ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದೈತ್ಯ ಸಂಸ್ಥೆಗಳಲ್ಲಿ ಒಂದಾದ ಇನ್ಫೋಸಿಸ್ ಕಚೇರಿಯ ಸಹಾಯಕ ಹುಡುಗನೊಬ್ಬ ತನ್ನ ಸ್ವಂತ ಕನಸಿನ ಯಜಮಾನನಾಗುವ ಪ್ರಯಾಣದಲ್ಲಿ ದೃಢ ನಿರ್ಧಾರವು ಎಂಥವರ ಜೀವನದ ದಿಕ್ಕನ್ನು ಬದಲಾಯಿಸಬಹುದು ಎಂಬುದಕ್ಕೆ ಪ್ರಬಲ ನಿದರ್ಶನವಾಗಿದೆ.
ಒಂದು ಕಾಲದಲ್ಲಿ ಕೇವಲ ೯,೦೦೦ ರೂಪಾಯಿಗೆ ಕಚೇರಿ ಶುಚಿಗೊಳಿಸುವ ಕೆಲಸ ಗಿಟ್ಟಿಸಿಕೊಂಡಿದ್ದ ದಾದಾಸಾಹೇಬ್ ಭಗತ್, ಈಗ ‘ಡಿಸೈನ್ ಟೆಂಪ್ಲೇಟ್ ನ ಸ್ಥಾಪಕರಾಗಿದ್ದಾರೆ. ಇದನ್ನು ಜಾಗತಿಕ ವಿನ್ಯಾಸ ದೈತ್ಯ ಕ್ಯಾನ್ವಾಗೆ ಹೋಲಿಸಲಾಗುತ್ತದೆ. ಬರಪೀಡಿತ ಹಳ್ಳಿಯಿಂದ ರಾಷ್ಟ್ರೀಯ ಮನ್ನಣೆಗೆ ಪಾತ್ರರಾದ ಅವರ ಜಿಗಿತವು ಪರಿಶ್ರಮ ಮತ್ತು ಧೈರ್ಯದ ಶಕ್ತಿಗೆ ಸಾಕ್ಷಿಯಾಗಿದೆ.


ಬೀಡ್ ನಲ್ಲಿ ವಿನಮ್ರ ಆರಂಭ:
ದಾದಾಸಾಹೇಬ್ ಭಗತ್ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಬೆಳದವರು. ಅವರ ಕುಟುಂಬದಲ್ಲಿ, ಶಿಕ್ಷಣವನ್ನು ಆದ್ಯತೆ ಎಂದು ಪರಿಗಣಿಸಲಾಗದ ಹಿನ್ನೆಲೆಯಲ್ಲಿ ಅವರು ೧೦ ನೇ ತರಗತಿಯವರೆಗೆ ಅಧ್ಯಯನ ಮಾಡಿದರು. ನಂತರ ಮೂಲ ಐಟಿಐ ಕೋರ್ಸ್ ಅನ್ನು ಪೂರ್ಣಗೊಳಿಸಿದರು. ಇದು ಸಾಮಾನ್ಯವಾಗಿ ಬ್ಲೂ-ಕಾಲರ್ ಕಾರ್ಖಾನೆಯ ಉದ್ಯೋಗಗಳಿಗೆ ತರಬೇತಿ ನೀಡುತ್ತದೆ.


ಉತ್ತಮ ಭವಿಷ್ಯವನ್ನು ಹುಡುಕುತ್ತಾ ಅವರು ಪುಣೆಗೆ ತೆರಳಿದರು. ಅಲ್ಲಿ ಮಾಸಿಕ ೪,೦೦೦ ರೂಪಾಯಿ ಸಂಬಳಕ್ಕಾಗಿ ಕೆಲಸ ಮಾಡಲಾರಂಭಿಸಿದರು. ಸ್ವಲ್ಪ ಸಮಯದ ನಂತರ ಇನ್ಫೋಸಿಸ್ ನಲ್ಲಿ ೯ ಸಾವಿರ ರೂ. ವೇತನದ ಕಚೇರಿ ಸಹಾಯಕರ ಖಾಲಿ ಹುದ್ದೆಯ ಬಗ್ಗೆ ವಿಚಾರಿಸಿದರು. ಈ ಸಂಬಳವು ಆತ ಹಿಂದೆ ಗಳಿಸಿದ್ದಕ್ಕಿಂತ ಎರಡು ಪಟ್ಟು ಹೆಚ್ಚಾಗಿತ್ತು. ಆತ ಯಾವುದೇ ಹಿಂಜರಿಕೆಯಿಲ್ಲದೆ ಅವಕಾಶವನ್ನು ತನ್ನದಾಗಿಸಿಕೊಂಡನು.


ಇನ್ಫೋಸಿಸ್ ನಲ್ಲಿ ದೊಡ್ಡ ತಿರುವು
ಇನ್ಫೋಸಿಸ್ ನಲ್ಲಿ ಅವರ ದೈನಂದಿನ ಕಾರ್ಯಗಳಲ್ಲಿ ಸ್ವಚ್ಛಗೊಳಿಸುವುದು, ಅಗತ್ಯ ವಸ್ತುಗಳ ಸರಬರಾಜು ಮತ್ತು ಕಂಪನಿಯ ಅತಿಥಿಗೃಹದಾದ್ಯಂತ ಕೆಲಸಗಳನ್ನು ಮಾಡುವುದು ಸೇರಿತ್ತು. ಇದರಿಂದ ಆತ ನಿತ್ಯ ದಣಿಯುತ್ತಿದ್ದ. ಆದರೆ ನಿಜವಾಗಿಯೂ ಅವರ ಗಮನವನ್ನು ಸೆಳೆದಿದ್ದು ತನ್ನೆದರು ಆರಾಮದಾಯಕ ಕಚೇರಿಗಳಲ್ಲಿ ಕಂಪ್ಯೂಟರ್ ಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು.


ದೈಹಿಕ ಶ್ರಮವಿಲ್ಲದೆ ಕೌಶಲ್ಯ ಬಳಕೆಯಿಂದ ಉತ್ತಮ ಜೀವನವನ್ನು ಕಂಡುಕೊಳ್ಳಬಹುದೆಂದು ಆತ ಬೇಗನೆ ಅರಿತುಕೊಂಡ.


ಆತ ಅದನ್ನು ಹೇಗೆ ಮಾಡಬಹುದು ಎಂದು ತಿಳಿಯುವ ಕುತೂಹಲದಿಂದ ಸಲಹೆಗಾಗಿ ಕೆಲವು ಉದ್ಯೋಗಿಗಳನ್ನು ಸಂಪರ್ಕಿಸಿದ. ಅಂತಹ ಉದ್ಯೋಗಗಳಿಗೆ (ಕೌಶಲ) ಸಾಮಾನ್ಯವಾಗಿ ಪದವಿಯ ಅಗತ್ಯವಿರುತ್ತದೆ ಎಂದು ಅವರು ಹೇಳಿದರು. ಆದರೆ ಅವುಗಳಲ್ಲಿ ಕೆಲವು ಗ್ರಾಫಿಕ್ ವಿನ್ಯಾಸ ಮತ್ತು ಅನಿಮೇಷನ್ ಬಗ್ಗೆ ತಿಳಿಸಿಕೊಟ್ಟರು. ಇದರಲ್ಲಿ ಅರ್ಹತೆಗಳಿಗಿಂತ ಪ್ರತಿಭೆ ಹೆಚ್ಚು ಮುಖ್ಯವಾದ ಸೃಜನಶೀಲತೆಯನ್ನು ಬೇಡುತ್ತವೆ ಎಂದು ತಿಳಿದುಕೊಳ್ಳಲು ಹೆಚ್ಚಿನ ದಿನ ಬೇಕಾಗಲಿಲ್ಲ.


ಹಳೆಯ ಯೋಜನೆಗೆ ಪೋಷಣೆ
ಉದ್ಯೋಗಿಗಳೊಂದಿಗಿನ ಸಂಭಾಷಣೆ ಅವನನ್ನು ಮತ್ತೆ ತನ್ನ ಶಾಲಾ ದಿನಗಳಿಗೆ ಕರೆದೊಯ್ದಿತು. ಅವರ ಪೋಷಕರು ಮನೆಯಿಂದ ದೂರದಲ್ಲಿ ಕೆಲಸ ಮಾಡುತ್ತಿದ್ದಾಗ ಭಗತ್ ದೇವಾಲಯದ ವರ್ಣಚಿತ್ರಕಾರರ ಪಕ್ಕದ ಬೋರ್ಡಿಂಗ್ ಶಾಲೆಯಲ್ಲಿ ಇರುತ್ತಿದ್ದ. ಕಲಾವಿದರನ್ನು ಕೆಲಸದಲ್ಲಿ ನಿತ್ತ ನೋಡುತ್ತಿದ್ದ ಭಗತ್ ಚಿತ್ರಕಲೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದನು. ಆದರೆ ಪುಣೆಗೆ ಬಂದ ನಂತರ ಅದನ್ನು ಮರೆತಿದ್ದನು.


ಆದರೆ ಆತನ ಮನಸ್ಸು ಜಾಗೃತಗೊಳಿಸುತ್ತಲೆ ಇತ್ತು. ದೃಢ ನಿಶ್ಚಯ ಮಾಡಿದೆ. ಅದರಿಂದ ಏನನ್ನಾದರೂ ಮಾಡಲು ನಿರ್ಧರಿಸಿದ ಭಗತ್, ಕಚೇರಿ ಸಹಾಯಕರಾಗಿ ತಮ್ಮ ರಾತ್ರಿ ಪಾಳಿಯನ್ನು ಮುಂದುವರಿಸುತ್ತಲೇ ಗ್ರಾಫಿಕ್ ವಿನ್ಯಾಸವನ್ನು ಕಲಿಯಲು ತಮ್ಮ ದಿನಗಳನ್ನು ದೂಡಿದರು. ಒಂದು ವರ್ಷದೊಳಗೆ ತನ್ನನ್ನು ಕ್ಲೀನರ್ ನಿಂದ ವೃತ್ತಿಪರ ವಿನ್ಯಾಸಕನಾಗಿ ಪರಿವರ್ತಿಸಿಕೊಂಡನು. ಅಂತಿಮವಾಗಿ ಕಂಪ್ಯೂಟರ್ ಗಳ ಸುತ್ತಲೂ ಸ್ವಚ್ಛಗೊಳಿಸುವ ಬದಲು ಇತರ ಉದ್ಯೋಗಿಗಳೊಂದಿಗೆ ಕೆಲಸ ಮಾಡ ತೊಡಗಿದರು.


ತನ್ನದೇ ಆದ ಹೊಸ ಅನ್ವೇಷಣೆ
ಔಪಚಾರಿಕ ಕೆಲಸಗಳು ಅಗತ್ಯವಿರುವ ಕಾರ್ಪೊರೇಟ್ ಉದ್ಯೋಗವನ್ನು ಬೆನ್ನಟ್ಟುವ ಬದಲು, ಭಗತ್ ತಮ್ಮದೇ ಆದ ಮಾರ್ಗವನ್ನು ಕಂಡುಕೊಳ್ಳಲು ನಿರ್ಧರಿಸಿದರು. ಅವರು ಡಿಸೈನರ್ ಆಗಿ ಸ್ವತಂತ್ರ ಸೇವೆಯನ್ನು ಪ್ರಾರಂಭಿಸಿದರು ಮತ್ತು ನಂತರ ತಮ್ಮದೇ ಆದ ವಿನ್ಯಾಸ ಕಂಪನಿಯನ್ನು ಪ್ರಾರಂಭಿಸಿದರು. ಆದರೆ ಯಶಸ್ಸು ರಾತ್ರೋರಾತ್ರಿ ಬರಲಿಲ್ಲ. ಆರ್ಥಿಕ ಸವಾಲುಗಳು, ಸೀಮಿತ ಸಂಪನ್ಮೂಲಗಳು ಮತ್ತು ಇತರರ ಸಂದೇಹವು ಆರಂಭಿಕ ವರ್ಷಗಳನ್ನು ಕಠಿಣಗೊಳಿಸಿತು.


ನಂತರ ಕೋವಿಡ್-೧೯ ಸಾಂಕ್ರಾಮಿಕ ರೋಗವು ಬಂದಿತು. ಇದು ಪುಣೆಯ ಕಚೇರಿಯನ್ನು ಮುಚ್ಚಿ ತಮ್ಮ ಹಳ್ಳಿಗೆ ಮರಳಬೇಕಾಯಿತು. ಆದರೆ ಬಿಟ್ಟುಕೊಡುವ ಬದಲು, ಅವರು ಒಂದು ಅವಕಾಶವನ್ನು ಕಂಡುಕೊಂಡರು. ಹಳ್ಳಿಯಲ್ಲಿನ ಜೀವನವು ಸರಳ ಮತ್ತು ಅಗ್ಗವಾಗಿತ್ತು. ಇದು ಅವರ ಉತ್ಪನ್ನದ ಕಲ್ಪನೆಯನ್ನು ಅಭಿವೃದ್ಧಿಪಡಿಸುವತ್ತ ಸಂಪೂರ್ಣವಾಗಿ ಗಮನಹರಿಸಲು ಅನುವು ಮಾಡಿಕೊಟ್ಟಿತು.


ಗ್ರಾಮದಲ್ಲಿ ಆಗಾಗ್ಗೆ ವಿದ್ಯುತ್ ಕಡಿತ ಮತ್ತು ಕಳಪೆ ಇಂಟರ್ನೆಟ್ ಸಂಪರ್ಕವಿತ್ತು. ಭಗತ್ ಮತ್ತು ಅವರ ತಂಡವು ಒಂದು ಸೃಜನಶೀಲ ಪರಿಹಾರವನ್ನು ಕಂಡುಕೊಂಡಿತು. ಅವರು ಹತ್ತಿರದ ಬೆಟ್ಟದ ಮೇಲೆ, ಗೋಶಾಲೆಯ ಹತ್ತಿರ ಒಂದು ಸಣ್ಣ ಕೆಲಸದ ಸ್ಥಳವನ್ನು ನಿರ್ಮಿಸಿಕೊಂಡರು. ಅಲ್ಲಿ ಮೊಬೈಲ್ ಸಿಗ್ನಲ್ ಬಲವಾಗಿತ್ತು. ಈ ಸಾಧಾರಣ ಸೆಟಪ್ ನಿಂದ, ಡಿಸೈನ್ ಟೆಂಪ್ಲೇಟ್ ಹುಟ್ಟಿತು. ವಿನ್ಯಾಸಕರು ಮತ್ತು ವ್ಯವಹಾರಗಳಿಗೆ ಬಳಸಲು ಸಿದ್ಧವಾದ ಟೆಂಪ್ಲೇಟ್ ಗಳನ್ನು ನೀಡುವ ವೇದಿಕೆ ಇದಾಗಿದೆ.


ಭಗತ್ ಇಷ್ಟಕ್ಕೆ ಸಮ್ಮನಾಗಲಿಲ್ಲ. ಈ ಗ್ರಾಮೀಣ ಪರಿಸರದಿಂದ ಕಾರ್ಯನಿರ್ವಹಿಸುತ್ತಿರುವ ಭಗತ್, ಸ್ಥಳೀಯ ಯುವಕರಿಗೆ ಗ್ರಾಫಿಕ್ ವಿನ್ಯಾಸದಲ್ಲಿ ತರಬೇತಿ ನೀಡಲು ಪ್ರಾರಂಭಿಸಿದರು. ಡಿಜಿಟಲ್ ಕೌಶಲ್ಯಗಳನ್ನು ಬೆಳೆಸಲು ಸಹಾಯ ಮಾಡಿದರು. ಅವರ ನವೀನ ಮನೋಭಾವವು ಶೀಘ್ರದಲ್ಲೇ ಮಾಧ್ಯಮಗಳ ಗಮನವನ್ನು ಸೆಳೆಯಿತು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಗಮನವನ್ನು ಸೆಳೆಯಿತು. ಅವರು ಮೇಕ್ ಇನ್ ಇಂಡಿಯಾ ಉಪಕ್ರಮವನ್ನು ಸಾಕಾರಗೊಳಿಸಿದ್ದಕ್ಕಾಗಿ ಅವರನ್ನು ಶ್ಲಾಘಿಸಿದರು.