ನರವಣೆ ಆತ್ಮಚರಿತ್ರೆ ಪುಸ್ತಕ ಪ್ರತಿ ಪ್ರಕಟವಾಗಿಲ್ಲ

ಪ್ರಕಾಶಕರ ಸ್ಪಷ್ಟನೆ

ನವದೆಹಲಿ,ಫೆ. ೧೦- ಲೋಕಸಭೆಯಲ್ಲಿ ಭಾರೀ ಗದ್ದಲಕ್ಕೆ ಕಾರಣವಾಗಿರುವ ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ಅವರ ಆತ್ಮಚರಿತ್ರೆ ’ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ಯ ಪುಸ್ತಕದ ಯಾವುದೇ ಪ್ರತಿ ಪ್ರಕಟವಾಗಿಲ್ಲ ಎಂದು ಪುಸ್ತಕ ಪ್ರಕಾಶಕರಾಗಿರುವ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಸ್ಪಷ್ಟಪಡಿಸಿದೆ.

ಸಂಸ್ಥೆ ಪುಸ್ತಕದ ವಿಶೇಷ ಪ್ರಕಾಶನ ಹಕ್ಕುಗಳನ್ನು ಹೊಂದಿದ್ದು, ಪುಸ್ತಕವನ್ನು ಇನ್ನೂ ಪ್ರಕಟಿಸಿಲ್ಲ ಎಂದು ತಿಳಿಸಿದೆ..

ಪುಸ್ತಕದ ಅನಧಿಕೃತ ಪ್ರತಿಗಳು ಚಲಾವಣೆಯಲ್ಲಿವೆ. ಡಿಜಿಟಲ್ ಮತ್ತು ಇತರ ಸ್ವರೂಪಗಳಲ್ಲಿ ಹಸ್ತಪ್ರತಿಯ ಅಕ್ರಮ ಪ್ರಸರಣದ ಆರೋಪದ ಮೇಲೆ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ ಬಳಿಕ ಈ ಸ್ಪಷ್ಟೀಕರಣ ಹೊರಬಂದಿದೆ.

ಪ್ರಕಾಶನ ಸಂಸ್ಥೆಯು ಪುಸ್ತಕದ ಯಾವುದೇ ಪ್ರತಿಗಳನ್ನು ಮುದ್ರಣ ಅಥವಾ ಡಿಜಿಟಲ್ ರೂಪದಲ್ಲಿ ಸಾರ್ವಜನಿಕರಿಗೆ ಬಿಡುಗಡೆ ಮಾಡಿಲ್ಲ ಎಂದು ಹೇಳಿದೆ.

ಜನರಲ್ ಮನೋಜ್ ಮುಕುಂದ್ ನರವಾಣೆ ಅವರ ಆತ್ಮಚರಿತ್ರೆ ’ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಪುಸ್ತಕದ ಏಕೈಕ ಪ್ರಕಾಶನ ಹಕ್ಕುಗಳನ್ನು ಹೊಂದಿದ್ದೇವೆ ಎಂದು ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಸ್ಪಷ್ಟಪಡಿಸಿದ್ದು ಪುಸ್ತಕ ಪ್ರಕಟಣೆ ಆಗಿಲ್ಲ ಎಂದೂ ಕೂಡ ಸ್ಪಷ್ಟಪಡಿಸುತ್ತೇವೆ .

ಇದೇ ವೇಳೆ ಅನಧಿಕೃತ ಪ್ರತಿ ಚಲಾವಣೆಯ ಕುರಿತು ಎಚ್ಚರಿಸಿದ್ದು, ಪ್ರಸ್ತುತ ಪ್ರಸಾರವಾಗುತ್ತಿರುವ ಪುಸ್ತಕದ ಯಾವುದೇ ಆವೃತ್ತಿಯು ಪೂರ್ಣವಾಗಿ ಅಥವಾ ಭಾಗಶಃ ಮತ್ತು ಮುದ್ರಣ, ಪಿಡಿಎಫ್ ಅಥವಾ ಆನ್‌ಲೈನ್ ಪ್ರತಿಗಳು ಸೇರಿದಂತೆ ಯಾವುದೇ ಸ್ವರೂಪದಲ್ಲಿ ಪ್ರಸಾರವಾಗುತ್ತಿದ್ದರೆ, ಅದು ಹಕ್ಕುಸ್ವಾಮ್ಯದ ಉಲ್ಲಂಘನೆಯಾಗುತ್ತದೆ. ಅದನ್ನು ತಕ್ಷಣವೇ ನಿಲ್ಲಿಸಬೇಕು. ಅನಧಿಕೃತ ಪ್ರಸಾರದ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದೂ ಕೂಡ ತಿಳಿಸಿದೆ.

ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಪೊಲೀಸರು, ಪ್ರಕಾಶಕರ ಅನುಮೋದನೆ ಪಡೆಯದೆ ಸೋರಿಕೆ ಅಥವಾ ಉಲ್ಲಂಘನೆಯ ಆರೋಪದ ಬಗ್ಗೆ ಸಮಗ್ರ ತನಿಖೆ ನಡೆಸಲು ವಿಶೇಷ ಘಟಕದಲ್ಲಿ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ ಎಂದಿದೆ.