
ಯಾದಗಿರಿ:ಮಾ.೧೭: ಗ್ರಾಮೀಣ ಪ್ರದೇಶದ ಬಡ, ದಲಿತ ಹಾಗೂ ಪರಿಶಿಷ್ಟ ಜನಾಂಗದ ವಿದ್ಯಾರ್ಥಿಗಳ ಶಿಕ್ಷಣೋನ್ನತಿಗಾಗಿ ಮಹತ್ವಾಕಾಂಕ್ಷಿ ಹಾಗೂ ದೀರ್ಘಕಾಲಿಕ ಸಾಮಾಜಿಕ ಯೋಜನೆಗೆ ಚಾಲನೆ ನೀಡಲಾಗಿದೆ. ಹುಣಸಗಿ ತಾಲೂಕಿನ ಮೂದನೂರು (ಕೆ) ಗ್ರಾಮದಲ್ಲಿ ಶ್ರೀ ಶಿವಯೋಗಿ ಸ್ವಾಮಿ ಸ್ಮಾರಕ ವಿದ್ಯಾ ವರ್ಧಕ ಸಂಸ್ಥೆಯ ವತಿಯಿಂದ ಸಮಗ್ರ ವಸತಿ ನಿಲಯ ವ್ಯವಸ್ಥೆ ಆರಂಭಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಲಾಗಿದೆ.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಶಂಕರ್ ಕೊಡ್ಲಾ ಮಾತನಾಡಿ, ಶಿಕ್ಷಣದಿಂದಲೇ ಸಾಮಾಜಿಕ ಸಮಾನತೆ ಸಾಧ್ಯವಾಗುತ್ತದೆ ಎಂಬ ಉದ್ದೇಶದೊಂದಿಗೆ ಈ ಮಹತ್ತರ ಯೋಜನೆಯನ್ನು ರೂಪಿಸಲಾಗಿದೆ ಎಂದು ತಿಳಿಸಿದರು. ಗ್ರಾಮೀಣ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಆರ್ಥಿಕ ಅಡಚಣೆಗಳ ನಡುವೆಯೂ ಉತ್ತಮ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ವಸತಿ, ಆಹಾರ ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.
೨೦೨೫-೨೬ನೇ ಸಾಲಿಗೆ ಸಂಸ್ಥೆಯ ಅಧ್ಯಕ್ಷರಾಗಿ ಜ್ಞಾನ ಪ್ರಕಾಶ್ ಸ್ವಾಮೀಜಿ ಆಯ್ಕೆಯಾಗಿದ್ದು, ಅವರ ದೂರದೃಷ್ಟಿ ಮತ್ತು ಮಾರ್ಗದರ್ಶನದಲ್ಲಿ ಸಂಸ್ಥೆ ಶಿಕ್ಷಣ, ಸಾಮಾಜಿಕ ಸೇವೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿದೆ. ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡುವ ಉದ್ದೇಶವೂ ಈ ಯೋಜನೆಯಲ್ಲಿದೆ.
ಮೂದನೂರು (ಕೆ) ಗ್ರಾಮದಲ್ಲಿ ಆರಂಭವಾಗುತ್ತಿರುವ ಈ ವಸತಿ ನಿಲಯದಲ್ಲಿ ಪ್ರಾರಂಭಿಕ ಹಂತದಲ್ಲೇ ೫೦ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಇದರಲ್ಲಿ ೨೫ ಹೆಣ್ಣು ಮಕ್ಕಳು ಮತ್ತು ೨೫ ಗಂಡು ಮಕ್ಕಳು ಸೇರಿದ್ದು, ೫ನೇ ತರಗತಿಯಿಂದ ೧೦ನೇ ತರಗತಿವರೆಗೆ ಓದುತ್ತಿರುವ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಒದಗಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಶಿಸ್ತುಬದ್ಧ ವಾತಾವರಣ, ಶಿಕ್ಷಣಕ್ಕೆ ಅನುಕೂಲಕರ ಪರಿಸರ ಮತ್ತು ಮಾರ್ಗದರ್ಶನ ಸಿಗುವಂತೆ ವಿಶೇಷ ವ್ಯವಸ್ಥೆ ಮಾಡಲಾಗುತ್ತದೆ.
ಇದಲ್ಲದೆ, ಮದನೂರು (ಕೆ) ಗ್ರಾಮದಲ್ಲಿ ದಿವಂಗತ ಶಾಂತಗೌಡ ಪಾಟೀಲ್ ಅವರ ಸ್ಮರಣಾರ್ಥವಾಗಿ ಕನ್ನಡ ಮಾಧ್ಯಮ ಕಾನ್ವೆಂಟ್ ಶಾಲೆ ಆರಂಭಿಸುವ ಪ್ರಕ್ರಿಯೆಯೂ ಪೂರ್ಣಗೊಂಡಿದ್ದು, ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ತಲುಪಿಸುವ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.
ಈ ಸಮಗ್ರ ಯೋಜನೆಗೆ ಪ್ರೇರಣೆಯಾದವರು ದಿವಂಗತ ಶಾಂತಗೌಡ ಪಾಟೀಲ್. ತಮ್ಮ ಜೀವನದಲ್ಲಿಯೇ ಸಮಾಜಮುಖಿ ಚಿಂತನೆಗಳನ್ನು ಹೊಂದಿದ್ದ ಅವರು, ತಮ್ಮ ಆಸ್ತಿಯನ್ನು ಗ್ರಾಮೀಣ ಮಕ್ಕಳ ಶಿಕ್ಷಣಾಭಿವೃದ್ಧಿಗೆ ಬಳಸಬೇಕು ಎಂಬ ಮಹತ್ವದ ಆಶಯವನ್ನು ವ್ಯಕ್ತಪಡಿಸಿದ್ದರು. ಅವರ ನಿಧನದ ನಂತರ ಅವರ ಪತ್ನಿಯವರು ಆ ಆಶಯವನ್ನು ಗೌರವಿಸಿ ತಮ್ಮ ಪಾಲಿನ ಆಸ್ತಿಯನ್ನು ಕಾನೂನುಬದ್ಧವಾಗಿ ಜ್ಞಾನ ಪ್ರಕಾಶ್ ಸ್ವಾಮೀಜಿ ಅವರ ಸನಿಧಾನಕ್ಕೆ ವಿಲ್ ಮೂಲಕ ವರ್ಗಾವಣೆ ಮಾಡಿದ್ದಾರೆ.
ಈ ಆಸ್ತಿಯನ್ನು ಸಮರ್ಪಕವಾಗಿ ಬಳಸಿಕೊಂಡು, ವಿದ್ಯಾರ್ಥಿಗಳಿಗೆ ದೀರ್ಘಕಾಲಿಕ ಶಿಕ್ಷಣ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಂಸ್ಥೆ ಕಾರ್ಯಪ್ರವೃತ್ತವಾಗಿದೆ. ವಸತಿ ನಿಲಯದ ಮೂಲಕ ವಿದ್ಯಾರ್ಥಿಗಳಿಗೆ ಕೇವಲ ವಸತಿ ಮಾತ್ರವಲ್ಲ, ಉತ್ತಮ ಜೀವನ ಮೌಲ್ಯಗಳು, ನೈತಿಕ ಶಿಕ್ಷಣ ಹಾಗೂ ಭವಿಷ್ಯ ನಿರ್ಮಾಣಕ್ಕೆ ಅಗತ್ಯವಾದ ದಿಕ್ಕುನಿರ್ದೇಶನ ಕೂಡ ನೀಡಲಾಗುತ್ತದೆ.
ಹುಣಸಗಿ ತಾಲೂಕಿನ ಬಡ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಸಂಸ್ಥೆ ಮನವಿ ಮಾಡಿದೆ. ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ಅರ್ಜಿಗಳನ್ನು ಸಂಸ್ಥೆಯ ಸಂಚಾಲಕರಾದ ಶ್ರೀ ಚಂದ್ರಕಾAತ್ ಅವರ ವಿಳಾಸ, ಕೊಟಗೇರವಾಡ, ಯಾದಗಿರಿ ನಗರದಲ್ಲಿ ಸಲ್ಲಿಸಬಹುದಾಗಿದೆ ಎಂದು ತಿಳಿಸಲಾಗಿದೆ.




























