
ಬೆಂಗಳೂರು,ಮಾ.೨೩-ಮುಂದಿನ ವರ್ಷದ ಔಷಧಿಗಳ ಖರೀದಿಗೆ ಜೂನ್‌ನಲ್ಲೇ ಟೆಂಡರ್ ಕರೆಯಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಮೇಲ್ಮನೆಯಲ್ಲಿ ಇಂದು ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯೆ ಹೇಮಲತಾ ನಾಯಕ್ ಪ್ರಶ್ನೆಗೆ ಉತ್ತರ ನೀಡಿದ ಸಚಿವರು ಸರಬರಾಜು, ಗುಣಮಟ್ಟದ ಔಷಧಿಗಳ ಪೂರೈಕೆ ದೃಷ್ಟಿಯಿಂದ ಮುಂಗಡವಾಗಿ ಟೆಂಡರ್ ಕರೆಯಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ರಾಜ್ಯದ ಆಸ್ಪತ್ರೆಗಳಿಗೆ ಈಗಾಗಲೇ ೨೩೪ ಔಷಧಿಗಳನ್ನು ಸರಬರಾಜು ಮಾಡುತ್ತಿದ್ದೇವೆ ಜಿಲ್ಲಾಸ್ಪತ್ರೆಗಳಲ್ಲಿ ಔಷಧಿ ಕೊರತೆಯಾಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಜ್ವರ, ನ್ಯುಮೋನಿಯಾ, ನಾಯಿ ಕಚ್ಚಿದರೆ ಔಷಧಿ ಸಿಗುತ್ತಿಲ್ಲ ಎಂದು ಸದಸ್ಯೆ ಹೇಮಲತಾ ಅವರು ಸದನದ ಗಮನ ಸೆಳೆದಾಗ ಉತ್ತರ ನೀಡಿದ ಸಚಿವರು ಔಷಧಗಳ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.






























