
ಕಲಬುರ್ಗಿ: ಮಾ.12:ರಾಜ್ಯದ ಎಲ್ಲಾ ಶಿಕ್ಷಕರು ಮತದಾನದ ಕೆಲಸಗಳು, ಜನಗಣತಿ, ಜಾತಿಗಣತಿ, ಮತದಾರರ ಪಟ್ಟಿ ಪರಿಷ್ಕರಣೆ, ಮಕ್ಕಳಿಗೆ ಹಾಲು, ಮೊಟ್ಟೆ ವಿತರಣೆ ಇನ್ನೂ ಮುಂತಾದ ಕೆಲಸಗಳನ್ನು ನಿರ್ವಹಿಸುವುದರ ಜೊತೆಗೆ ಇದೀಗ ಸರ್ಕಾರವು ಬೀದಿ ನಾಯಿಗಳನ್ನು ಕಾಯುವ ಹೊಣೆಗಾರಿಕೆಯನ್ನು ಶಿಕ್ಷಕರಿಗೆ ನೀಡಿರುವ ಕುರಿತು ರಾಜ್ಯದ ದಿನಪತ್ರಿಕೆಯಲ್ಲಿ ವರದಿಯಾಗಿದ್ದು, ಸರ್ಕಾರದ ಈ ಕ್ರಮವನ್ನು ನೋಡಿ ನಿಜಕ್ಕೂ ಇದು ಬಹಳ ಬೇಸರದ ಸಂಗತಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಅಭಿಪ್ರಾಯ ಪಟ್ಟಿದ್ದಾರೆ.
ಬೀದಿ ನಾಯಿಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಮುಂದಾಗಿರುವ ಸರ್ಕಾರವು ಶಾಲಾ ಶಿಕ್ಷಕರನ್ನೇ ನೋಡೆಲ್ ಅಧಿಕಾರಿಗಳನ್ನಾಗಿ ನೇಮಕ ಮಾಡುವಂತೆ ಸೂಚಿಸಿದ್ದು ಇದು ನಿಜವಾಗಲೂ ಶಿಕ್ಷಕರು ಮಕ್ಕಳಿಗೆ ಶಿಕ್ಷಣ ಬೋಧಿಸುವ ಕೆಲಸ ಬಿಟ್ಟು ಬೀದಿ ನಾಯಿಗಳನ್ನು ಕಾಯುವ ಕೆಲಸ ಮಾಡುವಂತಾಗುತ್ತಿದ್ದು, ಸರ್ಕಾರವು ಶಿಕ್ಷಕರನ್ನು ನಾಯಿಗಳಿಗಿಂತ ಕಡೆಯದಾಗಿ ನೋಡುತ್ತಿದೆ ಎನ್ನುವ ಅರ್ಥದಲ್ಲಿ ಬಿಂಬಿತವಾಗುತ್ತದೆ.
ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಜೊತೆಗೆ ಈಗಾಗಲೇ ಜನಗಣತಿ, ಜಾತಿಗಣತಿ, ಮತದಾರರ ಪಟ್ಟಿ ಪರಿಷ್ಕರಣೆ, ಅಂಗನವಾಡಿ ಮಕ್ಕಳಿಗೆ ಹಾಲು ಮೊಟ್ಟೆ ವಿತರಣೆ ಹಾಗೂ ಅದರ ಲೆಕ್ಕ, ಮತದಾನದ ಸಂದರ್ಭದಲ್ಲಿ ಮತದಾನದ ಕೆಲಸ ಕಾರ್ಯಗಳನ್ನು ನಿರ್ವಹಿಸುವ ಕೆಲಸದ ಜೊತೆಗೆ ಇನ್ನು ಹಲವು ಕಾರ್ಯಗಳನ್ನು ನಿರ್ವಹಿಸುತ್ತಿದ್ದು, ವರ್ಷದಲ್ಲಿ ಎರಡು ಅಥವಾ ಮೂರು ಬಾರಿ ಈ ಕೆಲಸಗಳನ್ನು ಶಿಕ್ಷಕರು ನಿರ್ವಹಿಸುತ್ತಿದ್ದಾರೆ. ಇದರಿಂದ ಶಿಕ್ಷಕರುಗಳು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹೆಚ್ಚು ಗಮನ ಹರಿಸಲು ಆಗುವುದಿಲ್ಲ. ಇದರಿಂದ ಮಕ್ಕಳ ಕಲಿಕೆಯ ಗುಣಮಟ್ಟ ಕಡಿಮೆಯಾಗಿ ಫಲಿತಾಂಶವು ಸಹ ಕಡಿಮೆಯಾಗುತ್ತದೆ. ಪ್ರಸ್ತುತ ರಾಜ್ಯಾದ್ಯಂತ ಶಿಕ್ಷಕರ ಕೊರತೆ ಕಾಣುತ್ತಿದೆ. ರಾಜ್ಯ ಸರ್ಕಾರದ ಜೊತೆಗೆ ಕೇಂದ್ರ ಸರ್ಕಾರವು ಜನಗಣತಿ ಆರಂಭಿಸುತ್ತಿದ್ದು ಅದರಲ್ಲೂ ಈ ಶಿಕ್ಷಕರೇ ಪಾಲ್ಗೊಳ್ಳಬೇಕಿದೆ. ಶಿಕ್ಷಕರ ಕೊರತೆಯ ನಡುವೆಯೇ ಸರ್ಕಾರದ ಎಲ್ಲಾ ಕಾರ್ಯಕ್ರಮಗಳಿಗೂ ಶಿಕ್ಷಕರನ್ನು ನಿಯೋಜಿಸುವುದರ ಜೊತೆಗೆ ಈಗ ಬೀದಿ ನಾಯಿಗಳ ನಿಯಂತ್ರಣ ಹೊಣೆ ಶಿಕ್ಷಕರಿಗೆ ನೀಡಿ ಅವರನ್ನು ನೋಡೆಲ್ ಅಧಿಕಾರಿಗಳನ್ನಾಗಿ ನೇಮಕ ಮಾಡುವ ಕ್ರಮ ನಿಜಕ್ಕೂ ಹಾಸ್ಯಾಸ್ಪದವಾಗಿದ್ದು, ಈ ಕ್ರಮ ನಿಜಕ್ಕೂ ಶಿಕ್ಷಕ ಸಮುದಾಯವನ್ನು ಅಕ್ರೋಶಕ್ಕೆ ದೂಡುವಂತಾಗಿದೆ. ಕೂಡಲೇ ಸರ್ಕಾರವು ಬೀದಿ ನಾಯಿಗಳನ್ನು ಕಾಯುವ ಹೊಣೆ ಶಿಕ್ಷಕರಿಗೆ ನೀಡಿ ಅವರನ್ನು ನೋಡೆಲ್ ಅಧಿಕಾರಿಗಳನ್ನಾಗಿ ನೇಮಕ ಮಾಡುವ ಕ್ರಮವನ್ನು ಈ ಕೂಡಲೇ ಕೈಬಿಡುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಒತ್ತಾಯಿಸುತ್ತೇನೆ. ಇತ್ತೀಚಿನ ದಿನದಲ್ಲಿ ದಿನಕ್ಕೊಂದು ಅವೈಜ್ಞಾನಿಕ ಸರ್ಕಾರ ಆದೇಶಗಳು ಶಿಕ್ಷಕರನ್ನು ಆತಂಕಕ್ಕೆ ತಂದೊಡ್ಡುತ್ತೀವೆ. 10 ನೇ ತರಗತಿ, ಪಿಯುಸಿ ಫಲಿತಾಂಶ ಹೆಚ್ಚಿಸಲು ಸರ್ಕಾರ ಅವೈಜ್ಞಾನಿಕ ನಡೆ ಅನುಸರಿಸುತ್ತಿದೆ. ಶಿಕ್ಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಮೇಲೆ ಒತ್ತಡ ಹೇರದೆ ಅಧಿಕಾರಿಗಳು ಕಾರ್ಯ ನಿರ್ವಹಿಸಿದರೆ ಫಲಿತಾಂಶ ಸುಧಾರಣೆ ಆಗುವುದರಲ್ಲಿ ಸಂದೇಹವಿಲ್ಲ ಎಂದು ಅಭಿಪ್ರಾಯ ಪಟ್ಟರು ವಿನಾಕಾರಣ ಫಲಿತಾಂಶ ಕಡಿಮೆಯಾದರೆ ಶಿಕ್ಷಕರ ಸಂಬಳ ತಡೆ ಹಿಡಿಯುವುದು, ಅವರ ಇನ್ಕ್ರಿಮೆಂಟ್ ಕೊಡದೆ ಸತಾಯಿಸುವ ಅಧಿಕಾರಿಗಳು ಈಗ ಬೀದಿ ನಾಯಿ ಹೊಣೆ ಇವರಿಗೆ ನೀಡಿ ಏನು ಸಾಧನೆ ಮಾಡಲು ಹೊರಟಿದೆ ಎಂದು ಬೇಸರ ವ್ಯಕ್ತಪಡಿಸಿದರು.

























