Home ಕ್ರೈಂ ಸುದ್ದಿಗಳು ಹಾಸ್ಟೆಲ್‍ನಲ್ಲಿ ವಿದ್ಯಾರ್ಥಿನಿಯ ಅನುಮಾನಾಸ್ಪದ ಸಾವು : ಕಿಟಕಿಗೆ ಬೆಲ್ಟ್‍ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ,...

ಹಾಸ್ಟೆಲ್‍ನಲ್ಲಿ ವಿದ್ಯಾರ್ಥಿನಿಯ ಅನುಮಾನಾಸ್ಪದ ಸಾವು : ಕಿಟಕಿಗೆ ಬೆಲ್ಟ್‍ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ, ಕುಟುಂಬಸ್ಥರ ಆಕ್ರಂದನ

ಯಾದಗಿರಿ:ಮಾ.14:ಹೆತ್ತವರ ಮುದ್ದಿನ ಮಗಳಾಗಿದ್ದ ಯುವತಿಯೊಬ್ಬಳು ಹಾಸ್ಟೆಲ್‍ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿ ಸಂಭವಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಗುರುಮಠಕಲ್ ಪಟ್ಟಣದಲ್ಲಿರುವ ಡಿ. ದೇವರಾಜ್ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಈ ಘಟನೆ ನಡೆದಿದೆ. ಹಾಸ್ಟೆಲ್‍ನ ಕಿಟಕಿಗೆ ಬೆಲ್ಟ್‍ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿಯ ಶವ ಪತ್ತೆಯಾಗಿದೆ. ಮೃತ ವಿದ್ಯಾರ್ಥಿನಿಯನ್ನು ಸ್ವಾತಿ ರೆಡ್ಡಿ (17) ಎಂದು ಗುರುತಿಸಲಾಗಿದೆ. ಆಕೆ ದ್ವಿತೀಯ ಪಿಯುಸಿ ಓದುತ್ತಿದ್ದು, ಮೂಲತಃ ಯಾದಗಿರಿ ಜಿಲ್ಲೆಯ ನಂದೆಪಳ್ಳಿ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ.

ಬಡತನದಲ್ಲಿದ್ದರೂ ಮಕ್ಕಳ ಶಿಕ್ಷಣದಲ್ಲಿ ಯಾವುದೇ ಕೊರತೆ ಬಾರದಂತೆ ನೋಡಿಕೊಳ್ಳಬೇಕು ಎಂಬ ಉದ್ದೇಶದಿಂದ ಪಾಲಕರು ಸ್ವಾತಿಯನ್ನು ಹಾಸ್ಟೆಲ್‍ನಲ್ಲಿ ಇಟ್ಟುಕೊಂಡು ವಿದ್ಯಾಭ್ಯಾಸ ಮಾಡಿಸುತ್ತಿದ್ದರು. ಘಟನೆ ನಡೆದ ದಿನ ಬೆಳಿಗ್ಗೆ ತಂದೆ-ತಾಯಿ ಹಾಗೂ ತಮ್ಮನೊಂದಿಗೆ ಮಾತನಾಡಿದ್ದ ಸ್ವಾತಿಯ ಸಾವಿನ ಸುದ್ದಿ ಮಧ್ಯಾಹ್ನ ವೇಳೆಗೆ ಕುಟುಂಬಕ್ಕೆ ತಲುಪಿದ್ದು, ಕುಟುಂಬಸ್ಥರ ಆಕ್ರಂದನ ಹೇಳತೀರದಂತಾಗಿದೆ.

ಘಟನೆಯ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಹಾಗೂ ಸಂಬಂಧಿಸಿದ ಅಧಿಕಾರಿಗಳು ಹಾಸ್ಟೆಲ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಹಾಸ್ಟೆಲ್‍ನಲ್ಲಿ ಇಂತಹ ಘಟನೆ ಹೇಗೆ ನಡೆದಿದೆ, ಯುವತಿಗೆ ಯಾವುದೇ ವೈಯಕ್ತಿಕ ಸಮಸ್ಯೆ ಇತ್ತೇ ಅಥವಾ ಯಾವುದಾದರೂ ಗಲಾಟೆ ನಡೆದಿತ್ತೇ ಎಂಬ ಬಗ್ಗೆ ಪೆÇಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

ಮೃತದೇಹವನ್ನು ಪರಿಶೀಲನೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಯುವತಿಯ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಈ ಸಂಬಂಧ ಗುರುಮಠಕಲ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೆÇಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಒಟ್ಟಾರೆಯಾಗಿ ವಿದ್ಯಾರ್ಥಿನಿಯ ಅನುಮಾನಾಸ್ಪದ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ನಿಖರವಾದ ಸತ್ಯಾಸತ್ಯತೆ ಪೆÇಲೀಸ್ ತನಿಖೆಯ ನಂತರವೇ ಹೊರಬರಬೇಕಿದೆ.