
ಬೆಂಗಳೂರು, ಜೂ. ೩೦- ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ, ಅತೃಪ್ತಿ ಹೊರ ಹಾಕಿರುವ ಕೈ ಶಾಸಕರ ಜತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಪ್ರತ್ಯೇಕ ಸಭೆ ನಡೆಸಿ ಅತೃಪ್ತಿ, ಅಸಮಾಧಾನವನ್ನು ಶಮನ ಮಾಡುವ ಕಸರತ್ತು ನಡೆಸಿದರು.
ಪ್ರದೇಶ ಕಾಂಗ್ರಸ್ ಕಚೇರಿಯಲ್ಲಿಂದು ಅಸಮಾಧಾನಿತ ಕೈ ಶಾಸಕರ ಜತೆ ಪ್ರತ್ಯೇಕವಾಗಿ ಮಾತನಾಡಿದ ಸುರ್ಜೇವಾಲಾ ಅವರು ಶಾಸಕರ ಅಹವಾಲನ್ನು ಆಲಿಸಿ ಅವರ ಅಸಮಾಧಾನ, ಮುನಿಸನ್ನು ಶಮನ ಮಾಡುವ ಜತೆಗೆ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ಏನೆಲ್ಲಾ ನೆರವು ಬೇಕೋ ಅದನ್ನೆಲ್ಲಾ ಕೊಡಿಸುವ ಭರವಸೆ ನೀಡಿ, ಸರ್ಕಾರದ ಕಾರ್ಯವೈಖರಿ, ಸಚಿವರುಗಳು ನಡವಳಿಕೆ, ಸ್ಪಂದನೆ ಬಗ್ಗೆಯೂ ಅಭಿಪ್ರಾಯಗಳನ್ನು ಆಲಿಸಿದರು.
ಸರ್ಕಾರದ ಕಾರ್ಯವೈಖರಿ ಬಗ್ಗೆ ನಿಮಗೆ ಅಸಮಾಧಾನ, ಮುನಿಸಿದ್ದರೆ ಅದನ್ನು ಬಹಿರಂಗವಾಗಿ ವ್ಯಕ್ತಪಡಿಸಬೇಡಿ, ಇದರಿಂದ ವಿಪಕ್ಷಗಳಿಗೆ ಅಸ್ತ್ರ ಸಿಕ್ಕಂತಾಗುತ್ತದೆ. ಯಾವುದೇ ಅಸಮಾಧಾನ, ಮುನಿಸಿದ್ದರೆ ಎಲ್ಲವನ್ನು ಸರಿಪಡಿಸುತ್ತೇನೆ ಎಂದು ಸುರ್ಜೇವಾಲಾ ಅವರು ಶಾಸಕರುಗಳಿಗೆ ಹೇಳಿ, ಅವರ ಮುನಿಸನ್ನು ತಣಿಸುವ ಪ್ರಯತ್ನ ನಡೆಸಿದರು.
ವಸತಿ ಇಲಾಖೆಯ ಮನೆ ಹಂಚಿಕೆಯಲ್ಲಿ ಲಂಚ ಪಡೆಯಲಾಗುತ್ತಿದೆ ಎಂದು ಶಾಸಕ ಬಿ.ಆರ್. ಪಾಟೀಲ್ ಆರೋಪಿಸಿದ ನಂತರ ಇದಕ್ಕೆ ದನಿಗೂಡಿಸಿದ್ದ ಶಾಸಕ ರಾಜು ಕಾಗೆ, ಎನ್.ವೈ. ಗೋಪಾಲಕೃಷ್ಣ, ಬೇಳೂರು ಗೋಪಾಲಕೃಷ್ಣ ಇವರುಗಳೆಲ್ಲಾ ಬಹಿರಂಗವಾಗಿಯೇ ಸರ್ಕಾರದ ಆಡಳಿತ ವೈಖರಿ ಬಗ್ಗೆ ಅಸಮಾಧಾನ ಹೊರ ಹಾಕಿದ್ದರು.
ಕಾಂಗ್ರೆಸ್ ಶಾಸಕರ ಅಸಮಾಧಾನ, ಮುನಿಸು ಪಕ್ಷದಲ್ಲಿ ಮತ್ತಷ್ಟು ವ್ಯಾಪಿಸುವುದನ್ನು ತಡೆಯಲು ಶಾಸಕರ ಅಹವಾಲು ಆಲಿಸುವಂತೆ ಕಾಂಗ್ರೆಸ್ ಹೈಕಮಾಂಡ್ ಸುರ್ಜೇವಾಲಾ ಅವರಿಗೆ ಸೂಚನೆ ನೀಡಿತ್ತಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಶಾಸಕರ ಅಹವಾಲು ಆಲಿಸುವಂತೆ ಸೂಚನೆ ನೀಡಿತ್ತು.
ಹೈಕಮಾಂಡ್‌ನ ಸೂಚನೆ ಬೆನ್ನಲ್ಲೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅವರು ನಿನ್ನೆ ರಾತ್ರಿ ಬೆಂಗಳೂರಿಗೆ ಬರಬೇಕಾಗಿತ್ತಾದರೂ ಕಾರ್ಯ ಒತ್ತಡದಿಂದ ಅವರು ಇಂದು ಬೆಳಿಗ್ಗೆ ೧೧.೩೦ರ ಸುಮಾರಿಗೆ ಬೆಂಗಳೂರಿಗೆ ಆಗಮಿಸಿ ನಂತರ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಅಸಮಾಧಾನಿತ ಶಾಸಕರ ಜತೆ ಪ್ರತ್ಯೇಕ ಸಭೆ ನಡೆಸಿದರು.
ಇಂದಿನಿಂದ ೩ ದಿನಗಳ ಕಾಲ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಲಿರುವ ಸುರ್ಜೇವಾಲಾ ಅವರು ಮೂರು ದಿನವೂ ಸುಮಾರು ೪೨ಕ್ಕೂ ಹೆಚ್ಚು ಕೈ ಶಾಸಕರ ಜತೆ ಒನ್ ಟು ಒನ್ ಸಭೆ ನಡೆಸಿ ಅವರ ಅಹವಾಲುಗಳನ್ನು ಆಲಿಸುವರು.
ಬಿಆರ್‌ಪಿ-ಕಾಗೆ ಭೇಟಿ
ಶಾಸಕರ ಅಹವಾಲಿನ ಮೊದಲ ದಿನವಾದ ಇಂದು ಸುರ್ಜೇವಾಲಾ ಅವರು ಮೊದಲಿಗೆ ಸರ್ಕಾರದ ವಿರುದ್ದ ಧ್ವನಿಯೆತ್ತಿದ್ದ ಹಿರಿಯ ಶಾಸಕ ಬಿ.ಆರ್. ಪಾಟೀಲ್ ಅವರ ಜತೆ ಪ್ರತ್ಯೇಕವಾಗಿ ಸುಮಾರು ೨೦ ನಿಮಿಷಗಳ ಕಾಲ ಮಾತನಾಡಿ ಅವರಿಂದ ರಾಜ್ಯ ಸರ್ಕಾರದ ಕಾರ್ಯವೈಖರಿ ಹೇಗಿದೆ, ನೀವು ಆರೋಪ ಮಾಡಲು ಕಾರಣ ಏನು, ನೀವು ಹೇಳಿದಂತೆ ವಸತಿ ಇಲಾಖೆಯಲ್ಲಿ ಮನೆ ಪಡೆಯಲು ಲಂಚ ಪಡೆಯಲಾಗುತ್ತಿದೆಯೇ ಎಂಬ ಬಗ್ಗೆ ಮಾಹಿತಿ ಪಡೆದುಕೊಂಡರು.
ಯಾವ ಯಾವ ಸಚಿವರು ಶಾಸಕರಿಗೆ ಸ್ಪಂದನೆ ಮಾಡುತ್ತಿದ್ದಾರೆ, ಯಾರು ಶಾಸಕರ ಮಾತನ್ನು ಕೇಳುತ್ತಿಲ್ಲ, ಜಿಲ್ಲಾ ಉಸ್ತುವಾರಿ ಸಚಿವರುಗಳು ನಿಮಗೆ ಸಹಕಾರ ನೀಡುತ್ತಿದ್ದಾರೆಯೇ, ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಇದುವರೆಗೂ ಎಷ್ಟೆಷ್ಟು ಹಣ ಯಾವ ಇಲಾಖೆಯಿಂದ ಬಿಡುಗಡೆಯಾಗಿದೆ, ಎಷ್ಟು ಅನುದಾನ ಕೊಟ್ಟಿದ್ದಾರೆ, ನೀವು ಶಾಸಕರಾದ ಮೇಲೆ ಕ್ಷೇತ್ರದಲ್ಲಿ ಎಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ, ನಿಮ್ಮ ಕ್ಷೇತ್ರದಲ್ಲಿರುವ ಗ್ಯಾರಂಟಿ ಫಲಾನುಭವಿಗಳ ಸಂಖ್ಯೆ ಎಷ್ಟು, ಪಕ್ಷ ಸಂಘಟನೆಗೆ ನೀವು ಯಾವ ರೀತಿ ತೊಡಗಿಕೊಂಡಿದ್ದೀರಿ, ಈ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡಿದ ಮತದಾರರು ಈಗಲೂ ಕಾಂಗ್ರೆಸ್ ಪರವಾಗಿ ಇದ್ದಾರೆಯೇ, ಕ್ಷೇತ್ರದಲ್ಲಿ ಕಾಂಗ್ರೆಸ್ ಪರಿಸ್ಥಿತಿಗಳು ಹೇಗಿವೆ ಎಂದೆಲ್ಲಾ ಸುರ್ಜೇವಾಲಾ ರವರು ಶಾಸಕರಿಗೆ ಪ್ರಶ್ನೆ ಹಾಕಿ, ಉತ್ತರಗಳನ್ನು ಪಡೆದುಕೊಂಡರು.
ಮಧ್ಯಾಹ್ನ ೨ ಗಂಟೆಯ ನಂತರ ಸುರ್ಜೇವಾಲಾ ಅವರು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್ ಶಾಸಕರ ಜತೆ ಪ್ರತ್ಯೇಕ ಸಭೆ ನಡೆಸಿ, ಅವರಿಂದಲೂ ಸರ್ಕಾರದ ಕಾರ್ಯವೈಖರಿ ಹೇಗಿದೆ, ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಸಿಗುತ್ತಿದೆಯೇ, ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿದೆಯೇ, ಸಚಿವರುಗಳು ಶಾಸಕರಿಗೆ ಸ್ಪಂದಿಸುತ್ತಿದ್ದಾರೆಯೇ, ಯಾವೆಲ್ಲಾ ಅಭಿವೃದ್ಧಿ ಕಾರ್ಯಗಳು ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಆಗಿವೆ, ಯಾವೆಲ್ಲಾ ಅಭಿವೃದ್ಧಿ ಕಾರ್ಯಗಳು ಆದ್ಯತೆ ಮೇಲೆ ಆಗಬೇಕು, ಎಷ್ಟು ಅನುದಾನ ಬೇಕು ಎಲ್ಲದರ ಬಗ್ಗೆಯೂ ಶಾಸಕರಿಂದ ಮಾಹಿತಿ ಪಡೆದುಕೊಂಡರು.
ಸರ್ಕಾರದ ಯಾವೆಲ್ಲಾ ಇಲಾಖೆಗಳು ಶಾಸಕರಿಗೆ ಅನುದಾನ ನೀಡುತ್ತಿವೆ, ಯಾವ ಸಚಿವರುಗಳು ಸ್ಪಂದಿಸುತ್ತಿದ್ದಾರೆ, ಯಾವ ಸಚಿವರುಗಳು ಶಾಸಕರ ಮಾತಿಗೆ ಕಿಮ್ಮತ್ತು ಕೊಡುತ್ತಿಲ್ಲ ಎಂಬ ಬಗ್ಗೆಯೂ ಸುರ್ಜೇವಾಲಾ ಅವರು ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಿದರು.
ನಾಳೆ-ನಾಳಿದ್ದು ಸಭೆ
ನಾಳೆ ಸುರ್ಜೇವಾಲಾ ಅವರು ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಮಗಳೂರು, ಹಾಸನ, ಬೆಂಗಳೂರು ನಗರ ಕೈ ಶಾಸಕರ ಜತೆ ಸಭೆ ನಡೆಸುವರು.
ನಾಳಿದ್ದು ಜೂನ್ ೨ ರಂದು ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳ ಕಾಂಗ್ರೆಸ್ ಶಾಸಕರ ಜತೆ ಸಭೆ ನಡೆಸಿ ಅವರಿಂದಲೂ ಸರ್ಕಾರದ ಕಾರ್ಯವೈಖರಿ ಬಗ್ಗೆ, ಸಚಿವರುಗಳ ಸ್ಪಂದನೆ ಬಗ್ಗೆ ಅಭಿಪ್ರಾಯಗಳನ್ನು ಸಂಗ್ರಹಿಸುವರು.
ಮುಂದಿನ ವಾರ ಮತ್ತೆ ಸಭೆ: ಉತ್ತರ ಕರ್ನಾಟಕ ಶಾಸಕರ ಭೇಟಿ
ಇಂದಿನಿಂದ ಮೂರು ದಿನಗಳ ಕಾಲ ಶಾಸಕರ ಅಹವಾಲು ಆಲಿಸುತ್ತಿರುವ ಸುರ್ಜೇವಾಲಾ ಅವರು ದಕ್ಷಿಣ ಕರ್ನಾಟಕ ಭಾಗದ ಶಾಸಕರ ಅಹವಾಲನ್ನು ಆಲಿಸಿದ್ದು, ಮುಂದಿನ ವಾರ ಮತ್ತೆ ರಾಜ್ಯಕ್ಕೆ ಆಗಮಿಸಿ ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗಗಳ ಕಾಂಗ್ರೆಸ್ ಶಾಸಕರ ಜತೆ ಪ್ರತ್ಯೇಕ ಸಭೆ ನಡೆಸಿ ಅವರಿಂದಲೂ ಅಭಿಪ್ರಾಯ ಸಂಗ್ರಹ ಮಾಡುವರು.