
ಬೀದರ್:ಮಾ.9: ಆರೋಗ್ಯ ಇಲಾಖೆಯ ಅಧಿಕಾರಿ ಹಾಗೂ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಮಾರ್ಚ್ 11ರಿಂದ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ (ರಿ) ಹಾಗೂ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖಾ ನೌಕರರ ಕೇಂದ್ರ ಸಂಘ (ರಿ) ತಿಳಿಸಿದೆ.
ಫೆಬ್ರವರಿ 13, 2026ರಂದು ನಡೆದ ರಾಜ್ಯ ಕಾರ್ಯಕಾರಿಣಿ ಹಾಗೂ ವಿವಿಧ ವೃಂದ ಸಂಘಗಳ ಸಭೆಯಲ್ಲಿ ರಾಜ್ಯದ ಸಮಸ್ತ ಆರೋಗ್ಯ ಇಲಾಖೆಯ ಅಧಿಕಾರಿ-ನೌಕರರು ಮಾರ್ಚ್ 11, ರಿಂದ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲು ಸರ್ವಾನುಮತದಿಂದ ನಿರ್ಧಾರ ಕೈಗೊಂಡಿದ್ದಾರೆ.
ಮುಷ್ಕರದ ಮೊದಲ ಹಂತವಾಗಿ ಮಾರ್ಚ್ 11ರಿಂದ 15ರವರೆಗೆ ಕಪ್ಪುಪಟ್ಟಿ ಧರಿಸಿ ಹೊರರೋಗಿ (ಓಪಿಡಿ) ಸೇವೆಗಳನ್ನು ನೀಡದೇ ಕೇವಲ ತುರ್ತು ಸೇವೆಗಳನ್ನು ಮಾತ್ರ ಒದಗಿಸಲಾಗುವುದು. ಬಳಿಕ ಮಾರ್ಚ್ 16ರಿಂದ ಅನಿರ್ದಿಷ್ಟಾವಧಿವರೆಗೆ ಕರ್ತವ್ಯಕ್ಕೆ ಗೈರುಹಾಜರಾಗುವ ಮೂಲಕ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಇಂದು ಅರಣ್ಯ, ಪರಿಸರ ಮತ್ತು ಜೀವಿ ಇಲಾಖೆಯ ಸಚಿವರು ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಅವರಿಗೆ ಮುಷ್ಕರದ ಮುನ್ಸೂಚನೆ ಮನವಿ ಪತ್ರವನ್ನು ಬೀದರ್ ವಿಮಾನ ನಿಲ್ದಾಣದಲ್ಲಿ ಸಲ್ಲಿಸಲಾಯಿತು.
ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಬೀದರ್ ಜಿಲ್ಲಾಧ್ಯಕ್ಷ ಡಾ. ಶಂಕ್ರಪ್ಪ ಬೊಮ್ಮ ಹಾಗೂ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಸಂಘದ ಬೀದರ್ ಜಿಲ್ಲಾಧ್ಯಕ್ಷ ರಾಜಕುಮಾರ ಮಾಳಗೆ ಅವರ ಜಂಟಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ನಿಕಟ ಪೂರ್ವ ವಿಭಾಗೀಯ ಉಪಾಧ್ಯಕ್ಷ ಡಾ. ಕಿರಣ್ ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಸಂದೀಪ್ ಗೋಡೆ, ಸುನಿಲ್ ಕಸ್ತೂರೆ, ಜಿಲ್ಲಾ ಕೋಶಾಧ್ಯಕ್ಷ ಡಾ. ಶಾಂತಲಿಂಗ ಪಾಟೀಲ್, ಡಾ. ಅನಿಲ್ ಎಕ್ಲೂರೆ, ಹಿರಿಯರಾದ ಡಾ. ಅನಿಲ್ ಚಿಂತಾಮಣಿ ಉಪಸ್ಥಿತರಿದ್ದರು.
ಹಾಗೂ ವಿವಿಧ ವೃಂದ ಸಂಘಗಳ ಜಿಲ್ಲಾ ಅಧ್ಯಕ್ಷರಾದ ಟಿ.ಎನ್. ಮಚ್ಚೆ, ಯೇಸುದಾಸ್ ತೋರೆ, ರಾಜಕುಮಾರ್ ಬಿರಾದರ್, ಶಿವಕುಮಾರ್ ಗುಮ್ಮ, ರವಿ ವಗ್ಗೆ, ವಿವೇಕಾನಂದ ಸ್ವಾಮಿ, ವಿದ್ಯಾಸಾಗರ್ ಪೂಜಾರಿ, ಶಿವಾನಂದ ಸ್ವಾಮಿ, ಮಚ್ಚೇಂದ್ರನಾಥ್ ಗುಮ್ಮ, ಶಿವಪ್ಪಾ ಗುಮ್ಮ, ವಿಲ್ಸನ್ ಇಮಾನವೆಲ್, ಉಮೇಶ್ ಬಿರಾದರ್, ಬಲರಾಮ ಪಂಚಾಳ್, ಪ್ರಾಣೇಶ್ ಪಂಚಾಳ್, ಮೊಮ್ಮದ್ ರಫಿ, ಕಿರಣ್ ಗುಪ್ತಾ, ಕಿಶನ್ ರಾಥೋಡ್ ಸೇರಿದಂತೆ ಆರೋಗ್ಯ ಇಲಾಖೆಯ ವಿವಿಧ ಅಧಿಕಾರಿ ಹಾಗೂ ನೌಕರರು ಉಪಸ್ಥಿತರಿದ್ದರು.






















