
ಅಥಣಿ : ಮಾ.12:ವಿದ್ಯಾರ್ಥಿಗಳ ಜೀವನದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯು ಅತ್ಯಂತ ಮಹತ್ವದ ಘಟ್ಟವಾಗಿದ್ದು. ವಿದ್ಯಾರ್ಥಿಗಳು ನಿರಂತರವಾಗಿ ಓದಿನ ಕಡೆ ಗಮನ ಹರಿಸಿದರೆ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ಮೊದಲು ಶ್ರಮ ಪಡಬೇಕು. ನಂತರ ಅದಕ್ಕೆ ತಕ್ಕ ಫಲ ದೊರೆಯುವುದು ಎಂದು ತಹಶೀಲ್ದಾರ ಶಿದರಾಯ ಬೋಸಗಿ ಹೇಳಿದರು.
ಅವರು ಇಲ್ಲಿನ ಶ್ರೀಮತಿ ಕಾಶಿಬಾಯಿ ಚಿಕ್ಕಟ್ಟಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಹತ್ತನೆಯ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭವನ್ನು ಉದ್ಘಾಟಿಸಿ
ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.
ಆಸೆ ಮತ್ತು ಕನಸುಗಳು ಒಟ್ಟಾಗಿ ಒಂದು ನಿರ್ದಿಷ್ಟ ದಿಕ್ಕಿನಲ್ಲಿ ಸಾಗಿದಾಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದ ಅವರು ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿಯಲ್ಲಿ ಅಗ್ರ ಶ್ರೇಣಿಯಲ್ಲಿ ಪಾಸಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಭಯ ಹಾಗೂ ಗೊಂದಲ ಮಕ್ಕಳ ಶೈಕ್ಷಣಿಕ ಹಿನ್ನಡೆಗೆ ಕಾರಣವಾಗಬಹುದು. ಆದ್ದರಿಂದ ಮಕ್ಕಳು ಹೆದರದೆ. ಅಂಜದೆ ಧೈರ್ಯವಾಗಿ ಪರೀಕ್ಷೆಯನ್ನು ಎದುರಿಸಬೇಕು ಎಂದು ಕಿವಿಮಾತು ಹೇಳಿದ ಅವರು ಮುಂಬರುವ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದು ಯಶಸ್ಸು ಸಾಧಿಸಿ ಎಂದು ಶುಭ ಹಾರೈಸಿದರು.
ಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುರೇಶ ಚಿಕ್ಕಟ್ಟಿ ಮಾತನಾಡಿ ಪಾಲಕರು ಹಗಲಿರುಳು ಕಷ್ಟ ಪಟ್ಟು ದುಡಿದು ಮಕ್ಕಳ ಉತ್ತಮ ವಿದ್ಯಾಭ್ಯಾಸಕ್ಕೆ ಶ್ರಮ ಪಡುತ್ತಾರೆ. ವಿದ್ಯಾರ್ಥಿಗಳು ಹೆತ್ತವರ ಕಣ್ಣೀರಿಗೆ ಕಾರಣವಾಗದೆ, ಕಠಿಣ ಪರಿಶ್ರಮದಿಂದ ನಿರ್ದಿಷ್ಟ ಗುರಿ ಮುಟ್ಟಿದಾಗ ಮಾತ್ರ ಹೆತ್ತ ಜೀವಗಳು ಸಂತಸ ಕಾಣಲು ಸಾಧ್ಯ ಎಂದ ಅವರು ಇಂದಿನ ಆಧುನಿಕ ಯುಗದಲ್ಲಿ ವಿಜ್ಞಾನ ತಂತ್ರಜ್ಞಾನದ ಕಲಿಕೆಗೆ ಸಾಕಷ್ಟು ಅವಕಾಶಗಳಿದ್ದು, ಅವುಗಳ ಸದುಪಯೋಗ ಪಡೆದು ಅಸಾಮಾನ್ಯ ಸಾಧನೆ ಮಾಡುವುದರ ಜೊತೆಗೆ ಹೆತ್ತ ತಂದೆ ತಾಯಂದಿರಿಗೆ, ಹುಟ್ಟಿದ ಊರಿಗೆ, ಕಲಿತ ಶಾಲೆಗೆ, ಕಲಿಸಿದ ಶಿಕ್ಷಕರಿಗೆ ಹೆಸರು ತರುವಂತೆ ಸಾಧನೆ ಮಾಡಿ ಸಮಾಜದಲ್ಲಿ ಗೌರವದಿಂದ ಬಾಳಿ ಎಂದು ಅವರು ಮಕ್ಕಳಿಗೆ ಹಾರೈಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪಾಲಕರಾದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ರಾಮಣ್ಣ ಧರಿಗೌಡ. ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸದಾಶಿವ ಚಿಕ್ಕಟ್ಟಿ, ಶಾಲೆಯ ಮುಖ್ಯೋಪಾಧ್ಯಾಯ ಟಿ.ಎ.ಮೊಗೇರ ಮತ್ತು ಶಾಲೆಯ ಶಿಕ್ಷಕ ಶಿಕ್ಷಕಿಯರು ಹಾಗೂ ಮಕ್ಕಳು ಹಾಜರಿದ್ದರು, ಪ್ರೌಢ ಶಾಲಾ ಶಿಕ್ಷಕ ವಿಶ್ವನಾಥ ಸೌದಾಗರ ನಿರೂಪಿಸಿದರು, ಸಂತೋಷ ಸಾಂವಗಾವ ಸ್ವಾಗತಿಸಿದರು.

























