
ಜಮಖಂಡಿ ಮಾ.22: ನಗರದ ರಹೆಮತ್ ನಗರದಲ್ಲಿನ ಬಿಲಾಲ್ ಮಸೀದಿ ಸಮೀಪ 6 ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿ ಮಾಡಿದ ಘಟನೆ ನಡೆದಿದೆ. ಗಾಯಾಳು ಮಗುವನ್ನು ಅಝಾನ್ ಆಸಿಪ್ ಬಡೆಗರ್ ಎಂದು ಗುರುತಿಸಲಾಗಿದೆ.
ರಂಜಾನ್ ಹಬ್ಬದ ನಿಮಿತ್ತ ತನ್ನ ಸಂಬಂಧಿಕರ ಮನೆಗೆ ಸಹೋದರನೊಂದಿಗೆ ತೆರಳುತ್ತಿದ್ದ ವೇಳೆ ಏಕಾಏಕಿ ಬೀದಿ ನಾಯಿ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.
ದಾಳಿಯಲ್ಲಿ ಮಗುವಿನ ತಲೆಗೆ ಗಂಭೀರ ಗಾಯಗಳಾಗಿದ್ದು, ತಲೆಗೆ ಸುಮಾರು 6 ಹೊಲಿಗೆ ಹಾಕಲಾಗಿದೆ ಎಂದು ತಿಳಿದು ಬಂದಿದೆ.
ಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ನಿಯಂತ್ರಣಕ್ಕೆ ತರಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಗಾಯಾಳು ಮಗುವನ್ನು ತಕ್ಷಣ ಜಮಖಂಡಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.




























