
ಬೀದರ್: ಜ.31 : ಹಲವಾರು ಅವ್ಯವಸ್ಥೆಗಳ ದೂರು ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಶರಣಪ್ರಕಾಶ ಆರ್.ಪಾಟೀಲ ಅವರಿಂದು ಬ್ರಿಮ್ಸ್ ಸಭಾಂಗಣದಲ್ಲಿ ಬ್ರಿಮ್ಸ್ ವೈದ್ಯಾಧಿಕಾರಿಗಳು ಹಾಗೂ ಆಡಳಿತ ಅಧಿಕಾರಿಗಳ ಸಭೆ ಜರುಗಿಸಿ ಸಮಸ್ಯೆಗಳನ್ನು ಆಲಿಸಿದರು.
ವೈದ್ಯಕೀಯ ವಿಜ್ಞಾನದ ಎಲ್ಲ ವಿಭಾಗದ ಮುಖ್ಯಸ್ಥರು ತಮ್ಮ ಅಗತ್ಯತೆಗಳನ್ನು ಹಾಗೂ ಅನುದಾನದ ಬೇಡಿಕೆಯನ್ನು ಪಟ್ಟಿ ಮಾಡಿ ಶೀಘ್ರವೇ ಸಲ್ಲಿಸುವಂತೆ ಸಚಿವರು ತಿಳಿಸಿದರು. ಮುಂಬರುವ ಬಜೇಟ್ ಅಧಿವೇಶನದಲ್ಲಿ ಬ್ರಿಮ್ಸನ್ ಒಟ್ಟಾರೆ ಅಭಿವೃದ್ಧಿಗೆ ವಿಶೇಷ ಅನುದಾನಕ್ಕಾಗಿ ಪ್ರಸ್ತಾವನೆ ಮಂಡಿಸಲಾಗುವುದೆಂದು ತಿಳಿಸಿದರು.
ತುರ್ತು ಚಿಕಿತ್ಸೆ ಆಪರೇಷನ್ ಥಿಯೇಟರ್‍ನ್ನು ತಕ್ಷಣವೇ ರಿಪೇರಿ ಮಾಡುವಂತೆ, ನೆಲಮಹಡಿಯಲ್ಲಿ ನೀರು ಸೋರಿಕೆ ಹಾಗೂ ಸಂಗ್ರಹಕ್ಕಾಗಿ ಕೈಗೊಂಡ ಕಾಮಗಾರಿಯನ್ನು ತಕ್ಷಣವೇ ರಿಪೇರಿ ಮಾಡುವಂತೆ ಪಿಡಬ್ಲೂ??ಡಿ ಕಾರ್ಯನಿರ್ವಾಹಕ ಅಭಿಯಂತರರಿಗೆ ತಿಳಿಸಿದರು.
ತಾತ್ಕಾಲಿಕ ಹಾಗೂ ಗುತ್ತಿಗೆ ಸಿಬ್ಬಂದಿ ನೌಕರರ ಸಂಬಳವನ್ನು ಡಿಸೆಂಬರ ತನಕ ಪಾವತಿಸಲಾಗಿದೆ ಹಾಗೂ ಉಳಿದ ಅನುದಾನವನ್ನು ಸಹ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು. ಹೃದಯ ಸಂಬಂಧಿತ ಚಿಕಿತ್ಸೆಗಳಿಗೆ ಗುಲಬರ್ಗಾದ ಜಯದೇವ ಆಸ್ಪತ್ರೆ ಜೊತೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ ಹಾಗೂ ಬ್ರಿಮ್ಸ್ನ ಕ್ಯಾತ್‍ಲ್ಯಾಬ್ ಸಹ ಆರಂಭಿಸಲಾಗುವುದೆಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ಬ್ರಿಮ್ಸ್ ನಿರ್ದೇಶಕ ಶಿವಕುಮಾರ ಶೆಟಕಾರ ಸೇರಿದಂತೆ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.
























