
ಬೆಳಗಾವಿ, ಡಿ. ೧೧-ಮಳೆ ನಿಂತರೂ ಹನಿ ನಿಲ್ಲಿಲ್ಲ ಎಂಬಂತೆ ನಾಯಕತ್ವ ಬದಲಾವಣೆ ಬಗ್ಗೆ ಯಾರೂ ಬಹಿರಂಗವಾಗಿ ಮಾತನಾಡಬಾರದು ಎಂದು ಹೈಕಮಾಂಡ್ ತಾಕೀತು ಮಾಡಿದ್ದರೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಪುತ್ರ ಹಾಗೂ ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ಧರಾಮಯ್ಯ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ, ಸಿದ್ಧರಾಮಯ್ಯ ಅವರೇ ಮುಂದಿನ ಐದು ವರ್ಷ ಮುಖ್ಯಮಂತ್ರಿ ಎಂಬ ಮಾತುಗಳನ್ನು ಪುನರುಚ್ಛರಿಸಿದ್ದಾರೆ.
ಕಳೆದ ಸೋಮವಾರ ಬೆಳಗಾವಿ ವಿಧಾನಮಂಡಲದ ಅಧಿವೇಶನದ ಮೊದಲ ದಿನವೇ ಯತೀಂದ್ರ ಸಿದ್ದರಾಮಯ್ಯ ಅವರು ಹೈಕಮಾಂಡ್ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪರಿಸ್ಥಿತಿ ಇಲ್ಲ ಎಂಬ ತೀರ್ಮಾನಕ್ಕೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷ ಪೂರ್ಣಾವಧಿ ಇರುತ್ತಾರೆ ಎಂದು ಹೇಳಿಕೆ ನೀಡಿರುವುದು ಕಾಂಗ್ರೆಸ್‌ನಲ್ಲಿ ಸಂಚಲನಕ್ಕೆ ಕಾರಣವಾಗಿ ಕೆಲ ಶಾಸಕರು ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದರು.
ಇದಾದ ನಂತರ ಸಿದ್ದರಾಮಯ್ಯ ಅವರು ತಮ್ಮ ಪುತ್ರನನ್ನು ಬೆಳಗಾವಿಯ ಸರ್ಕ್ಯೂಟ್ ಹೌಸ್‌ಗೆ ಕರೆಸಿಕೊಂಡ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡದಂತೆ ತಾಕೀತು ಮಾಡಿದ್ದರು. ಮಂಗಳವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲೂ ನಾಯಕತ್ವ ಬದಲಾವಣೆ ಬಗ್ಗೆ ಯಾರೂ ಮಾತನಾಡಬಾರದು. ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಮುಖ್ಯಮಂತ್ರಿಗಳು ಹೇಳಿದ್ದರೂ ಇಷ್ಟೆಲ್ಲಾ ಬೆಳವಣಿಗೆಗಳು ಆದ ನಂತರವೂ ಯತೀಂದ್ರ ಸಿದ್ದರಾಮಯ್ಯ ಅವರು ಇಂದು ಮತ್ತೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂಬ ಸ್ಫೋಟಕ ಹೇಳಿಕೆ ನೀಡಿರುವುದು ಕಾಂಗ್ರೆಸ್‌ನಲ್ಲಿ ಉರಿಯುವ ಬೆಂಕಿಗೆ ತುಪ್ಪು ಸುರಿದಂತಾಗಿದೆ.
ಬೆಳಗಾವಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಮುಖ್ಯಮಂತ್ರಿ ಬದಲಾವಣೆಗೆ ಹೈಕಮಾಂಡ್ ಒಪ್ಪಿಲ್ಲ ಎಂದು ಹೇಳಿದ್ದಾರೆ. ಇವರ ಈ ಹೇಳಿಕೆ ಕಾಂಗ್ರೆಸ್‌ನ ಹಲವು ಶಾಸಕರ ಅದರಲ್ಲೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜತೆ ಗುರುತಿಸಿಕೊಂಡಿರುವ ಶಾಸಕರ ಕೆಂಗಣ್ಣಿಗೆ ಕಾರಣವಾಗಿದೆ.
ವಿಧಾನಸಭೆಯ ಅಧಿವೇಶನಕ್ಕೂ ಮುನ್ನ ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆಯ ಜಟಾಪಟಿ ತಾರಕಕ್ಕೇರಿತ್ತು. ಕೆಲ ಶಾಸಕರು ದೆಹಲಿ ಯಾತ್ರೆಯನ್ನು ನಡೆಸಿದ್ದರು.
ಇಷ್ಟೇಲ್ಲಾ ಬೆಳವಣಿಗೆಗಳ ನಂತರ ಹೈಕಮಾಂಡ್ ಮಧ್ಯ ಪ್ರವೇಶಿಸಿ ಈ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಯಾರೂ ಯಾವುದೇ ಔತಣಕೂಟ, ಬಹಿರಂಗ ಹೇಳಿಕೆ ನೀಡಬಾರದು ಎಂದು ಹೇಳಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇಬ್ಬರಿಗೂ ಉಪಹಾರ ಸಭೆ ನಡೆಸಿ ಎಲ್ಲವನ್ನು ಪರಿಹರಿಸಿಕೊಳ್ಳುಂತೆ ಸೂಚಿಸಿತ್ತು. ಅದರಂತೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಪರಸ್ಪರ ತಮ್ಮ ಮನೆಗಳಲ್ಲಿ ಒಂದೊಂದು ದಿನ ಉಪಹಾರ ಸಭೆಗಳನ್ನು ನಡೆಸಿ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಹೇಳಿ ಒಗ್ಗಟ್ಟು ಪ್ರದರ್ಶಿಸಿದ್ದರು.
ಇದಾದ ಬಳಿಕ ಅಧಿಕಾರ ಹಂಚಿಕೆಯ ಜಟಾಪಟಿಗೆ ವಿರಾಮ ಬಿದ್ದು ಹೈಕಮಾಂಡ್ ತೀರ್ಮಾನದತ್ತ ಎಲ್ಲರ ಚಿತ್ತ ನೆಟ್ಟಿತ್ತು.
ಆದರೆ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಮತ್ತೆ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆಯ ಚಟುವಟಿಕೆಗಳಿಗೆ ಇಂಬು ಕೊಟ್ಟಿದೆ.
ನಿಲ್ಲದ ಭೋಜನ ಕೂಟಗಳು
ಬೆಂಗಳೂರಿನಲ್ಲಿ ಅಧಿಕಾರ ಹಂಚಿಕೆಯ ಜಟಾಪಟಿ ನಡೆಯುತ್ತಿರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಬಳಗದಲ್ಲಿರುವ ಕೆಲ ಸಚಿವರು ಭೋಜನ ಕೂಟಗಳನ್ನು ನಡೆಸಿದ್ದರು. ಜತೆಗೆ ಡಿ.ಕೆ. ಶಿವಕುಮಾರ್ ಸಹ ಕೆಲ ಸಚಿವರನ್ನು ಭೇಟಿ ಮಾಡಿದ್ದರು.
ಈ ಭೋಜನ ಕೂಟಗಳು ಬೆಳಗಾವಿ ಅಧಿವೇಶನಕ್ಕೂ ವಿಸ್ತರಿಸಿದ್ದು, ನಿನ್ನೆ ಶಾಸಕ ಫಿರೋಜ್ ಸೇಠ್ ಮನೆಯಲ್ಲಿ ಔತಣಕೂಟ ಆಯೋಜಿಸಲಾಗಿದ್ದು ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಜಮೀರ್ ಅಹಮದ್ ಖಾನ್, ಬೈರತಿ ಸುರೇಶ್, ಸಭಾಧ್ಯಕ್ಷ ಯು.ಟಿ. ಖಾದರ್, ವಿಧಾನಪರಿಷತ್ ಸದಸ್ಯ ಸಲೀಂ ಅಹಮದ್ ಭಾಗಿಯಾಗಿದ್ದರು.
ಇದು ರಾಜಕೀಯ ಔತಣ ಕೂಟವಲ್ಲ. ಫಿರೋಜ್ ಸೇಠ್ ಅವರು ಮುಖ್ಯಮಂತ್ರಿಗಳನ್ನು ಊಟಕ್ಕೆ ಕರೆದಿದ್ದರು ಅವರ ಜತೆ ಕೆಲ ಸಚಿವರು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.
ಅಧಿವೇಶನದ ಸಂದರ್ಭದಲ್ಲೂ ಈ ಔತಣಕೂಟ ನಡೆದಿರುವುದು ಚರ್ಚೆಗೆ ಗ್ರಾಸವಾಗಿದೆ.
ನಾವು ಮಾತಾಡಿದರೆ ನೋಟಿಸ್: ಇಕ್ಬಾಲ್
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ರಾಮನಗರ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್, ನಾವು ಏನಾದರೂ ಮಾತನಾಡಿದರೆ ನೋಟಿಸ್ ಕೊಡುತ್ತಾರೆ. ನಮ್ಮ ಹೈಕಮಾಂಡ್ ಬಲಿಷ್ಠವಾಗಿದೆ ಎಂದಿದ್ದಾರೆ.
ರಾಜ್ಯದಲ್ಲಿ ಅಧಿಕಾರ ಹಂಚಿಕೆ ಸೇರಿದಂತೆ ಎಲ್ಲವನ್ನು ಹೈಕಮಾಡ್ ತೀರ್ಮಾನ ಮಾಡುತ್ತದೆ. ಯತೀಂದ್ರ ಹೇಳಿಕೆ ಹಿಂದೆ ಯಾರಿದ್ದಾರೋ ಗೊತ್ತಿಲ್ಲ. ಪದೇ ಪದೇ ಅವರು ಹೇಳಿಕೆ ನೀಡುತ್ತಿರುವ ಬಗ್ಗೆ ಅವರನ್ನೇ ಕೇಳಿ ಎಂದರು.
ನಮಗೆ ಹೇಳಿಕೆ ಕೊಡಬೇಡಿ ಎಂದಿದ್ದಾರೆ. ಹಾಗಾಗಿ ಯಾವ ಮಾತನ್ನು ಹಾಡಿಲ್ಲ. ಏನೇ ಇರಲಿ ನಾವು ಮಾತನಾಡಿದರೆ ಬಲತ್ಕಾರ, ಅವರು ಮಾತನಾಡಿದರೆ ಚಮತ್ಕಾರ ಎಂದು ಪರೋಕ್ಷವಾಗಿ ಯತೀಂದ್ರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದರು
ಸಿಎಂ ಉತ್ತರಿಸುತ್ತಾರೆ ಡಿಕೆಶಿ
ನಾಯಕತ್ವ ವಿಚಾರವಾಗಿ ವಿಧಾನ ಪರಿಷತ್ತು ಸದಸ್ಯ ಯತೀಂದ್ರ, ಸಿದ್ದರಾಮಯ್ಯ ನೀಡಿರುವ ಹೇಳಿಕೆ ಬಗ್ಗೆ ಮುಖ್ಯಮಂತ್ರಿಗಳೇ ಉತ್ತರ ನೀಡುತ್ತಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಬೆಳಗಾವಿಯ ಸುವರ್ಣ ಸೌಧದಲ್ಲಿಂದು ೫ ವರ್ಷ ಸಿದ್ದರಾಮಯ್ಯ ಅವರೇ ಮುಂದುವರಿಯುವ ಬಗ್ಗೆ ಯತೀಂದ್ರ ನೀಡಿರುವ ಹೇಳಿಕೆ ಕುರಿತ ಸುದ್ಧಿಗಾರರ ಪ್ರಶ್ನೆಗೆ ಮೇಲಿನಂತೆ ಉತ್ತರ ನೀಡಿದರು.




























