Home ಜಿಲ್ಲೆ ಶಿವಾಜಿ ಆಡಳಿತ ನ್ಯಾಯಯುತವಾಗಿತ್ತು: ಚಂದ್ರಶೇಖರ ಮಹಾರಾಜ

ಶಿವಾಜಿ ಆಡಳಿತ ನ್ಯಾಯಯುತವಾಗಿತ್ತು: ಚಂದ್ರಶೇಖರ ಮಹಾರಾಜ

ಔರಾದ:ಮಾ.22: ಹಗಲು ರಾತ್ರಿ ಎನ್ನದೆ ನಿರಂತರ ಹೋರಾಟದ ಮುಖಾಂತರ ಹಿಂದವಿ ಸಾಮ್ರಾಜ್ಯವನ್ನು ರಕ್ಷಣೆ ಮಾಡಿದ ಛತ್ರಪತಿ ಶಿವಾಜಿ ಮಹಾರಾಜರು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ ಎಂದು ಲೋಕಸಭಾ ಸದಸ್ಯ ಸಾಗರ ಖಂಡ್ರೆ ತಿಳಿಸಿದರು.
ಔರಾದ ತಾಲೂಕಿನ ಚಿಕ್ಲಿ (ಜೆ) ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ 12 ಅಡಿ ಎತ್ತರದ ಅಶ್ವಾರೂಢ ಶಿವಾಜಿ ಮಹಾರಾಜರ ಮೂರ್ತಿಯನ್ನು ಅನಾವರಣಗೊಳಿಸಿ ಮಾತನಾಡಿದರು. ಹಿಂದವಿ ಸ್ವರಾಜ್ಯ ಪ್ರತಿಷ್ಠಾನ ಹಾಗೂ ಗ್ರಾಮಸ್ಥರ ಸಹಕಾರದಿಂದ ಭವ್ಯ ದಿವ್ಯ ಸುಂದರವಾದ ಶಿವಾಜಿ ಮಹಾರಾಜರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದು ಧರ್ಮದ ಕಾರ್ಯವಾಗಿದೆ. ಈ ಪುತ್ಥಳಿಯು ನೋಡುಗರ ಕಣ್ಮನ ಸೆಳೆಯುತ್ತಿದೆ. ಸಂಸದರ ಅನುದಾನದಲ್ಲಿ ಒಂದು ಹೈಮಾಸ್ ವಿದ್ಯುತ್ ದೀಪ ಬೇಕೆಂದು ಗ್ರಾಮದ ಮುಖಂಡರು ಬೇಡಿಕೆ ಇಟ್ಟಾಗ ತಕ್ಷಣವೇ ವಿದ್ಯುತ್ ದೀಪದ ವ್ಯವಸ್ಥೆ ಮಾಡಲಾಗಿದೆ. ಶಿವಾಜಿ ಮಹಾರಾಜರ ತತ್ವಾದರ್ಶಗಳನ್ನು ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಧರ್ಮರಕ್ಷಣೆಗಾಗಿ ಹೋರಾಡುವ ಅವಶ್ಯಕತೆ ಇದೆ ಎಂದು ಸಾಗರ ಖಂಡ್ರೆ ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಪೂಜ್ಯ ಶ್ರೀ ಚಂದ್ರಶೇಖರ ಮಹಾರಾಜ್ ದೇಗಲೂರ ಅವರು ತಮ್ಮ ಆಶಿರ್ವಚನ ನೀಡುತ್ತ ಧರ್ಮೋ ರಕ್ಷತಿ ರಕ್ಷಿತಃ ಎನ್ನುವ ಮಾತಿನಂತೆ ಚಿಕ್ಲಿ ಜೆ ಗ್ರಾಮದಲ್ಲಿ ಕಿರಣ ಪಾಟೀಲ, ವೆಂಕಟರಾವ ಪಾಟೀಲ ಸೇರಿದಂತೆ ನೂರಾರು ಯುವಕರು ಧರ್ಮಮಾರ್ಗದಲ್ಲಿ ನಡೆಯುತ್ತಿದ್ದಾರೆ. ಇದು ಉತ್ತಮ ಬೆಳೆವಣಿಗೆ. ಶಿವಾಜಿ ಮಹಾರಾಜರ ಧೈರ್ಯ, ಸ್ಥೈರ್ಯ, ಸಂಸ್ಕಾರ ಮತ್ತು ವೀರತ್ವದ ಮಾರ್ಗದಲ್ಲಿ ಯುವಕರು ಸಾಗಬೇಕು ಎಂದು ಸಲಹೆ ನೀಡಿದರು.
ಹಿರಿಯ ಕಾಂಗ್ರೇಸ್ ಮುಖಂಡರು ಹಾಗೂ ಔರಾದ ಕ್ಷೇತ್ರದ ನಾಯಕ ಡಾ. ಭೀಮಸೇನರಾವ ಶಿಂಧೆ ಮಾತನಾಡಿ ಶಿವಾಜಿ ಪುತ್ಥಳಿ ಕೇವಲ ಪುತ್ಥಳಿಯಾಗದೆ ಅದು ಶೌರ್ಯದ ಸಂಕೇತವಾಗಿದೆ. ಮೂರ್ತಿಗೆ ಪ್ರತಿಕ್ಷಣ ವೀಕ್ಷಣೆ ಮಾಡಿದಾಗಲೂ ಯುವಕರು ಧರ್ಮಮಾರ್ಗದಲ್ಲಿ ನಡೆಯುವ ಸಂಕಲ್ಪ ಮಾಡಬೇಕೆಂದು ಪ್ರತಿಪಾದಿಸಿದರು.
ಪ್ರಾಸ್ತಾವಿಕ ಮಾತನಾಡಿದ ಗ್ರಾಮದ ಮುಖಂಡರಾದ ಕಿರಣ ಪಾಟೀಲ ಮಾತನಾಡಿ ಸುಮಾರು 68 ದಿವಸಗಳಲ್ಲಿ ಸಂಸದರ ಹಾಗೂ ಡಾ. ಭೀಮಸೇನರಾವ ಶಿಂಧೆ ಸೇರಿದಂತೆ ಗ್ರಾಮದ ಮುಖಂಡರ ಸಹಕಾರದೊಂದಿಗೆ ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ಶಿವಾಜಿ ಮಹಾರಾಜರ ಭವ್ಯ ಅಶ್ವಾರೂಢ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಎಲ್ಲರೂ ಸಾಕಷ್ಟು ಸಹಕಾರ ನೀಡಿದ್ದಾರೆ. ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.
ಯುವ ಮುಖಂಡರಾದ ತರುಣ ನಾಗಮಾರಪಳ್ಳಿ, ಖ್ಯಾತ ವಾಗ್ಮಿಗಳಾದ ಪ್ರೇರಣಾತಾಯಿ ಹಾಗೂ ಸತೀಶ ವಾಸರೆ ಮಾತನಾಡಿದರು. ವೇದಿಕೆ ಮೇಲೆ ತಹಸಿಲ್ದಾರ ಮಹೇಶ ಪಾಟೀಲ, ತಾಲೂಕಾ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ, ಜ್ಞಾನೋಬಾ ಪಾಟೀಲ, ಕಿಶನ ಪಾಟೀಲ ಜಂಬಗಿ, ಈಶ್ವರಸಿಂಗ್ ಠಾಕೂರ್, ವೆಂಕಟರಾವ ಪಾಟೀಲ, ಸುಭಾಷ ಪಾಟೀಲ, ಸತೀಶ ಪಾಟೀಲ, ವಿಶಾಲ ಪಾಟೀಲ, ಪವನ ಪಾಟೀಲ, ಸಾಯಿನಾಥ ಪಾಟೀಲ, ಭಾನುದಾಸ ಪಾಟೀಲ, ರಮೇಶ ಪಾಟೀಲ, ಶ್ರೀಕಾಂತರೆಡ್ಡಿ, ದಯಾನಂದ ಮೇತ್ರೆ, ರತಿಕಾಂತ ಸ್ವಾಮಿ, ಅಶೋಕ ಪಾಟೀಲ, ಭಾಸ್ಕರ್ ಪಾಟೀಲ, ಉಮೇಶ ಪಾಟೀಲ, ಸಂತೋಷರೆಡ್ಡಿ, ದಿಲೀಪ ಪಾಟೀಲ, ಮಹೇಶ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಗ್ರಾಮದಲ್ಲಿ ಪಟಾಕಿ ಸಿಡಿಸಿ, ಮಹಿಳೆಯರ ಕುಂಭ ಕಳಶದ ಮೆರವಣಿಗೆಯೊಂದಿಗೆ ಪೂಜ್ಯ ಚಂದ್ರಶೇಖರ ಮಹಾರಾಜ ದೇಗಲೂರಕರ್ ಅವರ ಭವ್ಯ ಮೆರವಣಿಗೆ ಜರುಗಿತು.