
ಕಲಬುರಗಿ,ಅ.23-ನಗರದ ಹುಮನಾಬಾದ ರಿಂಗ್ ರಸ್ತೆಯ ಪೆಟ್ರೋಲ್ ಪಂಪ್ ಹತ್ತಿರ ಮತ್ತು ಜೇವರ್ಗಿ ತಾಲ್ಲೂಕಿನ ನೇದಲಗಿ ಬಳಿ ಮಂಗಳವಾರ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.
ಹುಮನಾಬಾದ ರಿಂಗ್ ರಸ್ತೆಯ ಪೆಟ್ರೋಲ್ ಪಂಪ್ ಬಳಿ ಟ್ಯಾಂಕರ್ ಲಾರಿ ಡಿಕ್ಕಿ ಹೊಡೆದು ನಗರದ ಯದುಲ್ಲಾ ಕಾಲೋನಿಯ ಶೇಖ್ ಅಹ್ಮದ್ ಮತ್ತು ಸೈಯದ್ ಸರ್ವರ್ ಹುಸೇನಿ ತಂದೆ ಸೈಯದ್ ಇಬ್ರಾಹಿಂ ಹುಸೇನಿ ಅಲಿಯಾಸ್ ಜುಬೇರ್ ಎಂಬುವವರು ಮೃತಪಟ್ಟಿದ್ದು, ಜೇವರ್ಗಿ ತಾಲ್ಲೂಕಿನ ನೇದಲಗಿ ಬಳಿ ಕಾರು-ಟಂಟಂ ನಡುವೆ ಡಿಕ್ಕಿ ಸಂಭವಿಸಿ ಟಂಟಂನಲ್ಲಿದ್ದ ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಬಾಷಾಸಾಬ್ (45) ಶಂಕ್ರೆಪ್ಪ (41) ಎಂಬುವವರು ಮೃತಪಟ್ಟಿದ್ದಾರೆ.
ಇವರು ಜಾಲವಾದಿ ಗ್ರಾಮದಿಂದ ಬಾರೆಹಣ್ಣು ತುಂಬಿಕೊಂಡು ಟಂಟಂನಲ್ಲಿ ಕಲಬುರಗಿ ಕಡೆ ಬರುತ್ತಿದ್ದಾಗ ಸಿಂದಗಿ ಕಡೆಗೆ ತೆರಳುತ್ತಿದ್ದ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಸಿಪಿಐ ರಾಜೇಸಾಬ್ ನದಾಫ್, ಪಿಎಸ್‍ಐ ಚಿದಾನಂದ ಸವದಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಸಂಚಾರಿ ಪೊಲೀಸ್ ಠಾಣೆ-2 ಮತ್ತು ನೆಲೋಗಿ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ.






























