
ಕಲಬುರಗಿ,ಫೆ26: ಶಿಷ್ಯವೇತನದ ಮಂಜೂರಾತಿ ಕಡತ ಮೇಲಧಿಕಾರಿಗಳಿಗೆ ಕಳುಹಿಸಲು 2 ಸಾವಿರ ಲಂಚ ಪಡೆದಿದ್ದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಎಸ್‍ಡಿಎ ಆಗಿ ಕೆಲಸ ಮಾಡುತ್ತಿದ್ದ ವೀರೇಶ ಬಡಿಗೇರಗೆ ಇಲ್ಲಿನ ಜಿಲ್ಲಾ ನ್ಯಾಯಾಲಯವು ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ 20 ಸಾವಿರ ರೂ ದಂಡ ವಿಧಿಸಿ ಆದೇಶಿಸಿದೆ.
ವೀರೇಶ ಲಂಚ ಕೇಳಿದ್ದಾರೆ ಎಂದು ಆರೋಪಿಸಿ ಕಲಬುರಗಿಯ ಮೋಹನ್‍ರಾಜ್ ಶಿಕ್ಷಣ ಸಂಸ್ಥೆಯ ರಾಜಶೇಖರ ಕಟ್ಟಿಮನಿ ಲೋಕಾಯುಕ್ತರಿಗೆ (ಆಗಿನ ಎಸಿಬಿ) ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಇನ್‍ಸ್ಪೆಕ್ಟರ್ ಮಹಮ್ಮದ್ ಇಸ್ಮಾಯಿಲ್ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಿ.ಎಲ್.ಲಕ್ಷ್ಮೀನಾರಾಯಣ ಅವರು ವೀರೇಶ ವಿರುದ್ಧ ಆರೋಪ ಸಾಬೀತಾಗಿದೆ ಎಂದು ಘೋಷಿಸಿದ್ದಾರೆ. ಲಂಚ ಪಡೆದ ಅಪರಾಧಕ್ಕಾಗಿ ನಾಲ್ಕು ವರ್ಷ ಜೈಲು ಹಾಗೂ 20 ಸಾವಿರ ರೂ ದಂಡ ವಿಧಿಸಿ ಆದೇಶಿಸಿದ್ದಾರೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಅಶೋಕ ಎಸ್. ಚಾಂದಕವಠೆ ವಾದ ಮಂಡಿಸಿದ್ದರು.



























