Home ಜಿಲ್ಲೆ ಕಲಬುರಗಿ ಒಳ ಮೀಸಲಾತಿ ಜಾರಿಯಾಗದೆ ಎಸ್‍ಸಿ ಕೋಟಾ ಭರ್ತಿ ಬೇಡ

ಒಳ ಮೀಸಲಾತಿ ಜಾರಿಯಾಗದೆ ಎಸ್‍ಸಿ ಕೋಟಾ ಭರ್ತಿ ಬೇಡ

ಕಲಬುರಗಿ,ಮಾ.11:ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಕುರಿತು ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ ರಾಜ್ಯ ಸರ್ಕಾರ ಅಂಗೀಕರಿಸಿರುವ ಸಮೀಕ್ಷೆಗೆ ಎಲ್ಲಾ ಪಕ್ಷಗಳ ವಿಧಾನಸಭೆ ಹಾಗೂ ವಿಧಾನ ಪರಿಷತ್ ಶಾಸಕರು ಬೆಂಬಲ ನೀಡಿದ್ದು, ರಾಜ್ಯಪಾಲರಿಂದಲೂ ಅನುಮೋದನೆ ದೊರೆತಿದೆ. ಆದಾಗ್ಯೂ ಕೆಲವು ಗೊಂದಲಗಳಿರುವ ಹಿನ್ನೆಲೆಯಲ್ಲಿ ಒಟ್ಟು 56,432 ಸರ್ಕಾರಿ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಶೇ. 15 ಅಂದರೆ 8,465 ಹುದ್ದೆಗಳನ್ನು ತಾತ್ಕಾಲಿಕವಾಗಿ ತಡೆಹಿಡಿದು, ಉಳಿದ 47,967 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣ ಮುಂದುವರಿಸಬೇಕು ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ,ರಾಜ್ಯ ಉಪಾಧ್ಯಕ್ಷ ಕೆ.ಬಿ. ವಾಸು ಅವರು ಆಗ್ರಹಿಸಿದ್ದಾರೆ.
ಕರ್ನಾಟಕದಲ್ಲಿ ಖಾಲಿ ಇರುವ 56,432 ಸರ್ಕಾರಿ ಹುದ್ದೆಗಳ ನೇಮಕಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದೆ ಕಾಲಹರಣ ಮಾಡುತ್ತಿರುವುದು ತೀವ್ರ ಖಂಡನೀಯ. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಸರ್ಕಾರವೇ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಪ್ರಶ್ನೆಯಲ್ಲಿ ಮೌನವಾಗಿರುವುದು ಬಹುಜನ ಸಮಾಜಕ್ಕೆ ಮಾಡಿದ ದೊಡ್ಡ ಮೋಸವಾಗಿದೆ.
ಒಟ್ಟು 56,432 ಹುದ್ದೆಗಳಲ್ಲಿ ಜನರಲ್ ಒಬಿಸಿ ಎಸ್ಟಿ ವರ್ಗಗಳಿಗೆ ಸೇರಿದ 47,967 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣ ಮುಂದುವರಿಸಬೇಕು. ಆದರೆ ಎಸ್ಸಿ ಗಳಿಗೆ ಮೀಸಲಾದ ಶೇ.15 ಅಂದರೆ 8,465 ಹುದ್ದೆಗಳನ್ನು ಒಳ ಮೀಸಲಾತಿ ಹಾಗೂ ರೋಸ್ಟರ್ ಪಾಯಿಂಟ್‍ಗಳು ನಿಗದಿಯಾದ ನಂತರವೇ ಭರ್ತಿ ಮಾಡಬೇಕು. ಒಳ ಮೀಸಲಾತಿ ಜಾರಿಯಾಗದೆ ಎಸ್ಸಿ ಕೋಟಾ ಹುದ್ದೆಗಳನ್ನು ಭರ್ತಿ ಮಾಡಿದರೆ ಅದು ಪರಿಶಿಷ್ಟ ಜಾತಿಗಳ ಹಕ್ಕುಗಳನ್ನು ಕಸಿದುಕೊಳ್ಳುವ ಕುತಂತ್ರವಾಗುತ್ತದೆ.
ರಾಜ್ಯ ಸರ್ಕಾರ ತಕ್ಷಣ ಈ ವಿಚಾರದಲ್ಲಿ ನ್ಯಾಯಸಮ್ಮತ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲವಾದರೆ ಪರಿಶಿಷ್ಟ ಜಾತಿ ಸಮುದಾಯಗಳು, ಬಹುಜನ ಸಂಘಟನೆಗಳು ಮತ್ತು ಯುವಕರು ಸೇರಿ ರಾಜ್ಯದಾದ್ಯಂತ ತೀವ್ರ ಹೋರಾಟಕ್ಕೆ ಮುಂದಾಗುವ ಅನಿವಾರ್ಯ ಪರಿಸ್ಥಿತಿ ಉಂಟಾಗುತ್ತದೆ ಎಂದಿದ್ದಾರೆ.