
ಯಾದಗಿರಿ,ಮಾ.೨೪-ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್ ರವರ ಹುತಾತ್ಮ ದಿನವಾದ ಸೋಮವಾರ ಯಾದಗಿರಿ ಜಿಲ್ಲೆಯಾದ್ಯಂತ ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಗ್ರಾಮ ಸಮಿತಿಗಳ ಮೂಲಕ ಕೆಪಿಎಸ್-ಮ್ಯಾಗ್ನೆಟ್ ಯೋಜನೆ ವಿರುದ್ಧ, ನಮ್ಮೂರ ಶಾಲೆ ಉಳಿಸಲು ರಾಜ್ಯವ್ಯಾಪಿ ಸರ್ಕಾರಿ ಶಾಲೆ ಆವರಣದಲ್ಲಿ ‘ಸಾರ್ವಜನಿಕ ಶಿಕ್ಷಣ ಉಳಿಸಿ’ ಪ್ರತಿಜ್ಞಾ ದಿನವನ್ನಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಎಐಡಿಎಸ್‌ಓ ಜಿಲ್ಲಾ ಸಂಚಾಲಕರಾದ ಶಿಲ್ಪಾ ಬಿ.ಕೆ. ರವರು, ನಮ್ಮ ಈ ಹೋರಾಟಕ್ಕೆ ಸ್ಫೂರ್ತಿ ತುಂಬಲು, ನಾವು ಶಹೀದ್-ಎ-ಅಜಮ್ ಭಗತ್ ಸಿಂಗ್ ಅವರ ಅದ್ವಿತೀಯ ಸಂಘರ್ಷದ ಕಡೆ ನೋಡಬೇಕಿದೆ. ಮಾರ್ಚ್ ೨೩ ರಂದು, ಅವರ ಪರಮೋಚ್ಚ ಬಲಿದಾನದ ಸ್ಮರಣಾರ್ಥವಾಗಿ, ನಾವು ಪ್ರತಿಯೊಂದು ಹಳ್ಳಿಯನ್ನು ಪ್ರತಿರೋಧದ ಕೋಟೆಯನ್ನಾಗಿ ಪರಿವರ್ತಿಸಬೇಕು. ಇದು ಕೇವಲ ಸಾಂಕೇತಿಕ ಗೌರವ ಸಲ್ಲಿಸುವ ಸಮಯವಲ್ಲ, ಬದಲಾಗಿ ‘ಪೂರ್ಣ ಪ್ರತಿರೋಧದ ಪ್ರತಿಜ್ಞೆ’ ಮಾಡುವ ಸಮಯ. “ಕ್ರಾಂತಿಯ ಖಡ್ಗವು ವೈಚಾರಿಕತೆಯ ಸಾಣೆಕಲ್ಲಿನ ಮೇಲೆ ಹರಿತಗೊಳ್ಳುತ್ತದೆ” ಎಂದು ಭಗತ್ ಸಿಂಗ್ ನಮಗೆ ನೆನಪಿಸಿದ್ದರು. ಕಳೆದ ನಾಲ್ಕು ತಿಂಗಳುಗಳಿAದ ನಾವು ನಮ್ಮ ಧ್ವನಿಯನ್ನು ಬಳಸಿದ್ದೇವೆ; ಈಗ, ಮಹಾನ್ ಕ್ರಾಂತಿಕಾರಿಯ ವಿಚಾರಗಳನ್ನು ಬಳಸಿಕೊಂಡು ನಮ್ಮ ಸಂಕಲ್ಪವನ್ನು ಹರಿತಗೊಳಿಸಬೇಕು. ಕರ್ನಾಟಕದ ಅತ್ಯಂತ ದೂರದ ಮೂಲೆಯಲ್ಲಿರುವ ಬಡ ಮಗುವಿನ ಶಿಕ್ಷಣದ ಹಕ್ಕನ್ನು ಯಾವ ನೀತಿಯೂ ಕಿತ್ತುಕೊಳ್ಳದಂತೆ ನಾವು ನೋಡಿಕೊಳ್ಳಬೇಕು ಎಂದರು.
ಹಿಮಲಾಪುರ ಗ್ರಾಮಸ್ಥರು ಹಾಗೂ ಎಐಕೆಕೆಎಂಎಸ್ ರೈತ ಸಂಘಟನೆಯ ಜಿಲ್ಲಾ ಸಮಿತಿ ಸದಸ್ಯರಾದ ರಾಜು ರವರು ಮಾತನಾಡುತ್ತಾ, ಕೆ.ಪಿ.ಎಸ್ ಮ್ಯಾಗ್ನೆಟ್ ನೀತಿಯು ಭಗತ್ ಸಿಂಗ್ ಅವರು ಯಾವ ಉದ್ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದರೋಅಂದರೆ ಮನುಷ್ಯನಿಂದ ಮನುಷ್ಯನ ಶೋಷಣೆಯಿಲ್ಲದ ಸಮಾಜ-ಆ ದೃಷ್ಟಿಕೋನದ ಮೇಲಿನ ನೇರ ದಾಳಿಯಾಗಿದೆ. ಶಿಕ್ಷಣವನ್ನು ಮೂಲಭೂತ ಹಕ್ಕು ಎಂದು ಪರಿಗಣಿಸುವ ಬದಲು “ಅನುಕೂಲಕ್ಕೆ ತಕ್ಕಂತೆ ಬಳಸುವ ಸಂಪನ್ಮೂಲ” ಎಂದು ನೋಡುವ ಮೂಲಕ, ರಾಜ್ಯ ಸರ್ಕಾರವು ಒಂದು ವಿಭಜನೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಇಲ್ಲಿ ಕೇವಲ ಕೆಲವು “ಕೇಂದ್ರಗಳು” ಮಾತ್ರ ಉಳಿಯುತ್ತವೆ ಮತ್ತು ನಮ್ಮ ಹಳ್ಳಿಯ ಶಾಲೆಗಳು ನಶಿಸಿಹೋಗುತ್ತವೆ. ಅವರ ಎಚ್ಚರಿಕೆಯನ್ನು ನಾವು ನೆನಪಿಸಿಕೊಳ್ಳಲೇಬೇಕು: “ಜನರು ಸಾಮಾನ್ಯವಾಗಿ ಸ್ಥಾಪಿತ ವ್ಯವಸ್ಥೆಗೆ ಒಗ್ಗಿಕೊಳ್ಳುತ್ತಾರೆ ಮತ್ತು ಬದಲಾವಣೆಯ ಕಲ್ಪನೆಯನ್ನು ಕೇಳಿಯೇ ನಡುಗುತ್ತಾರೆ. ಈ ಜಡ ಮನೋಭಾವದ ಜಾಗದಲ್ಲಿ ಕ್ರಾಂತಿಕಾರಿ ಚೈತನ್ಯ ಬರಬೇಕಿದೆ.” ನಮ್ಮ ಶಾಲೆಗಳ ಮುಚ್ಚುವಿಕೆಗೆ ಒಗ್ಗಿಕೊಳ್ಳಲು ನಾವು ನಿರಾಕರಿಸುತ್ತೇವೆ. ಆಡಳಿತಾತ್ಮಕ ಅನುಕೂಲಕ್ಕಾಗಿ ನಮ್ಮ ಮಕ್ಕಳ ಭವಿಷ್ಯವನ್ನು ಬಲಿಗೊಡುವ ಈ “ಜಡ ಮನೋಭಾವ”ವನ್ನು ನಾವು ಒಪ್ಪುವುದಿಲ್ಲ ಎಂದು ಘೋಷಿಸುವ ಸಮಯ ಇದಾಗಿದೆ ಎಂದು ಕರೆ ನೀಡಿದರು.
ಮುಂದುವರೆದು ಮಾತನಾಡುತ್ತಾ ನಾಲ್ಕು ತಿಂಗಳ ಹೋರಾಟವು ಈಗಾಗಲೇ ಆಡಳಿತ ವರ್ಗದ ಯೋಜನೆಗಳನ್ನು ವಿಳಂಬಗೊಳಿಸಿದೆ; ಈಗ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರ ಬಲಿದಾನವು ನಮಗೆ ಅಂತಿಮ ವಿಜಯದತ್ತ ಸಾಗಲು ಸ್ಫೂರ್ತಿ ನೀಡಲಿ. ಕೆ.ಪಿ.ಎಸ್ ಮ್ಯಾಗ್ನೆಟ್ ನೀತಿಯನ್ನು ಹಿಂಪಡೆಯುವವರೆಗೆ ಮತ್ತು ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸುವವರೆಗೆ ನಾವು ಹಿಂದೆ ಸರಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡೋಣ ಎಂದರು.




























